ADVERTISEMENT

ಪೊಲೀಸ್‌ ಇಲಾಖೆ ನಿಷ್ಕ್ರಿಯ: ಅಪರಾಧ ಹೆಚ್ಚಳ– ಆಯನೂರು ಮಂಜುನಾಥ್‌ ಆರೋಪ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2019, 12:34 IST
Last Updated 2 ಫೆಬ್ರುವರಿ 2019, 12:34 IST
ಆಯನೂರು ಮಂಜುನಾಥ್‌
ಆಯನೂರು ಮಂಜುನಾಥ್‌   

ಶಿವಮೊಗ್ಗ: ‘ಜಿಲ್ಲೆಯಲ್ಲಿ ಕಾನೂನು ವ್ಯವಸ್ಥೆ ಸಂಪೂರ್ಣ ಕುಸಿದಿದೆ. ಬಹಿರಂಗವಾಗಿ ಭೀಕರ ಕೊಲೆಗಳಾಗುತ್ತಿವೆ. ಕಾಲೇಜುಗಳಿಗೆ ಸರಾಗವಾಗಿ ಗಾಂಜಾ ರವಾನೆಯಾಗುತ್ತಿದೆ. ಜೂಜು, ಮಟ್ಕಾ ಎಗ್ಗಿಲ್ಲದೇ ನಡೆಯುತ್ತಿದೆ. ರಕ್ಷಕರಾಗಬೇಕಿದ್ದ ಪೊಲೀಸರೇ ಭಕ್ಷಕರಾಗಿದ್ದಾರೆ’ ಎಂದು ವಿಧಾನ ಪರಿಷತ್‌ ಸದಸ್ಯ ಆಯನೂರು ಮಂಜುನಾಥ್‌ ಆರೋಪಿಸಿದರು.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಪೊಲೀಸ್‌ ಇಲಾಖೆಯ ವಿರುದ್ಧ ಹರಿಹಾಯ್ದರು. ಜಿಲ್ಲೆಯಲ್ಲಿ ಪೊಲೀಸ್ ಇಲಾಖೆಯ ವೈಫಲ್ಯ ಎದ್ದು ಕಾಣುತ್ತಿದೆ. ಮಟ್ಕಾ, ಜೂಜು, ಓಸಿ ಇನ್ನಿತರೇ ಕಾನೂನುಬಾಹಿರ ಚಟುವಟಿಕೆಗಳಿಂದಾಗಿ ಕುಟುಂಬಗಳು ನಾಶವಾಗುತ್ತಿವೆ. ಜಿಲ್ಲೆ ಇಂತಹ ಚಟುವಟಿಕೆಗಳಿಂದ ಮುಕ್ತವಾಗದಿದ್ದರೆ ಸಾಂಸ್ಕೃತಿಕವಾಗಿ ಶ್ರೀಮಂತವಾಗಿರುವ ಜಿಲ್ಲೆಯ ಹೆಸರು ಹಾಳಾಗುತ್ತದೆ ಎಂದು ಕಳವಳ ವ್ಯಕ್ತಪಡಿಸಿದರು.

ಈ ಹಿಂದೆ ಗಾಂಜಾ ಸೇವಿಸಿ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ನಡೆದಾಗ ಪ್ರಕರಣವನ್ನು ಇಲಾಖೆ ಗಂಭೀರವಾಗಿ ತೆಗೆದುಕೊಳ್ಳಬೇಕಿತ್ತು. ಆದರೆ ಪೊಲೀಸ್ ಇಲಾಖೆ ನಿಷ್ಕ್ರಿಯವಾದ ಪರಿಣಾಮ ಅಪರಾಧಿಗಳಲ್ಲಿ ಪೊಲೀಸರ ಬಗ್ಗೆ ಭಯ ಹೊರಟು ಹೋಗಿದೆ. ಪೊಲೀಸ್ ಇಲಾಖೆಯೇ ಅಕ್ರಮ ಚಟುವಟಿಕೆಯಲ್ಲಿ ಭಾಗಿಯಾಗುತ್ತಿದೆ. ಕೆಳ ಹಂತದ ಅಧಿಕಾರಿಗಳು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹೆಸರನ್ನು ದುರ್ಬಳಕೆ ಮಾಡಿಕೊಂಡು ಹಣ ವಸೂಲಿ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ. ಇದರಿಂದ ಜನರಿಗೆ ಪೋಲಿಸ್ ಇಲಾಖೆ ಬಗ್ಗೆ ನಂಬಿಕೆ ಹೊರಟುಹೋಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ADVERTISEMENT

ತೀರ್ಥಹಳ್ಳಿಗೆ ಅನ್ಯ ರಾಜ್ಯಗಳಿಂದ ಮಾಫಿಯಾ ವ್ಯಕ್ತಿಗಳು ಬಂದು ಮರಳನ್ನು ತುಂಬಿಸಿಕೊಂಡು ಹೋಗುತ್ತಿದ್ದಾರೆ. ಹೀಗಾದರೆ ಪೊಲೀಸ್ ಇಲಾಖೆ ಇದೆಯೇ ಎಂಬ ಸಂಶಯ ಕಾಡುತ್ತಿದೆ ಎಂದು ದೂರಿದರು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅಪರಾಧ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು. ಗಾಂಜಾ, ಮಟ್ಕ ದಂಧೆ ನಿಯಂತ್ರಣಕ್ಕೆ ತರಬೇಕು. ಅಕ್ರಮಗಳು ನಡೆದರೆ ಆಯಾ ವ್ಯಾಪ್ತಿಯ ಪೊಲೀಸರನ್ನೇ ಹೊಣೆಗಾರರನ್ನಾಗಿ ಮಾಡಬೇಕು. ಜಿಲ್ಲಾ ಉಸ್ತುವಾರಿ ಸಚಿವರು ಇತ್ತ ಗಮನಹರಿಸಬೇಕು ಎಂದು ಆಗ್ರಹಿಸಿದರು.

ಪತ್ರಿಕಾಗೋಷ್ಠಿಯಲ್ಲಿ ವಿಧಾನ ಪರಿಷತ್‌ ಸದಸ್ಯ ಎಸ್. ರುದ್ರೇಗೌಡ, ಮುಖಂಡರಾದ ಡಿ.ಎಸ್. ಅರುಣ್, ಬಿಳಕಿ ಕೃಷ್ಣಮೂರ್ತಿ, ಎಸ್.ಎನ್. ಚನ್ನಬಸಪ್ಪ, ಮಧುಸೂದನ್, ಅನಿತಾ, ರತ್ನಾಕರ ಶೆಣೈ, ಗಂಗಾಧರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.