ADVERTISEMENT

ಶಿವಮೊಗ್ಗ: ಅಭದ್ರತೆಯಲ್ಲಿ ಅಂಚೆ ನೌಕರರು

ಎಐಪಿಇಯು ಕೇಂದ್ರ ಸಂಘದ ಪರಾಶರ್ ಬೇಸರ

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2021, 4:14 IST
Last Updated 4 ಅಕ್ಟೋಬರ್ 2021, 4:14 IST
ಶಿವಮೊಗ್ಗದ ಕುವೆಂಪು ರಂಗಮಂದಿರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಅಖಿಲ ಭಾರತ ಅಂಚೆ ನೌಕರರ ಅಧಿವೇಶನದಲ್ಲಿ ಎಐಪಿಇಯು ಗ್ರೂಪ್ ‘ಸಿ’ ಕೇಂದ್ರ ಸಂಘ ಪ್ರಧಾನ ಕಾರ್ಯದರ್ಶಿ ಆರ್.ಎನ್. ಪರಾಶರ್ ಮಾತನಾಡಿದರು.
ಶಿವಮೊಗ್ಗದ ಕುವೆಂಪು ರಂಗಮಂದಿರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಅಖಿಲ ಭಾರತ ಅಂಚೆ ನೌಕರರ ಅಧಿವೇಶನದಲ್ಲಿ ಎಐಪಿಇಯು ಗ್ರೂಪ್ ‘ಸಿ’ ಕೇಂದ್ರ ಸಂಘ ಪ್ರಧಾನ ಕಾರ್ಯದರ್ಶಿ ಆರ್.ಎನ್. ಪರಾಶರ್ ಮಾತನಾಡಿದರು.   

ಶಿವಮೊಗ್ಗ: ಅಂಚೆ ನೌಕರರು ಅಭದ್ರತೆ ಮತ್ತು ಭಯದ ನಡುವೆ ಕೆಲಸ ಮಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಎಐಪಿಇಯು ಗ್ರೂಪ್ ‘ಸಿ’ ಕೇಂದ್ರ ಸಂಘ ಪ್ರಧಾನ ಕಾರ್ಯದರ್ಶಿ ಆರ್.ಎನ್. ಪರಾಶರ್ ಬೇಸರಿಸಿದರು.

ನಗರದ ಕುವೆಂಪು ರಂಗಮಂದಿರದಲ್ಲಿ ಅಖಿಲ ಭಾರತ ಅಂಚೆ ನೌಕರರ ಸಂಘಗಳು ಗ್ರೂಪ್ ‘ಸಿ’ ಪೋಸ್ಟ್‌ಮನ್, ಎಂಟಿಎಸ್ ಶಿವಮೊಗ್ಗ ವಿಭಾಗದ 50ನೇ ಜಂಟಿ ದ್ವೈವಾರ್ಷಿಕ ಅಧಿವೇಶನ ಉದ್ಘಾಟಿಸಿ ಮಾತನಾಡಿದರು.

‘ಇದು ತವಕ, ತಲ್ಲಣಗಳ ಕಾಲವಾಗಿದ್ದು, ಅನೇಕ ಸ್ಥಿತ್ಯಂತರಗಳು ಘಟಿಸುತ್ತಿವೆ. ಸರ್ಕಾರದ ಕೆಲವು ನಿಯಮಗಳಿಂದಾಗಿ ನೌಕರರ ವರ್ಗ ಕೆಲಸ ಕಳೆದುಕೊಳ್ಳುವ ಪರಿಸ್ಥಿತಿ ಉಂಟಾಗಿದೆ.ನೌಕರರು ಹಲವು ಸವಾಲುಗಳ ನಡುವೆ ಕೆಲಸ ಮಾಡಬೇಕಿದೆ. ಬಿಎಸ್ಎನ್ಎಲ್ ಪರಿಸ್ಥಿತಿ ಏನಾಗಿದೆ ಎಂಬುದು ನಮ್ಮ ಕಣ್ಣೆದುರೇ ಇದೆ’ ಎಂದರು.

ADVERTISEMENT

ಸುವರ್ಣ ಮಹೋತ್ಸವ ಸ್ಮರಣ ಸಂಚಿಕೆ ಬಿಡುಗಡೆ ಮಾಡಿದ ಕರ್ನಾಟಕ ಅಂಚೆ ವಲಯದ ಪೋಸ್ಟ್ ಮಾಸ್ಟರ್ ಜನರಲ್ ಶಾರದಾ ಸಂಪತ್, ‘ಕೊರೊನಾದಂತಹ ಸಂಕಷ್ಟದ ಸಂದರ್ಭದಲ್ಲಿ ಅಂಚೆ ಇಲಾಖೆ ಔಷಧ, ದಿನಸಿ, ವೃದ್ಧಾಪ್ಯ ವೇತನ, ಅಂಗವಿಕಲರ ವೇತನ ಸೇರಿ ಸಾಮಾಜಿಕ ಭದ್ರತಾ ಯೋಜನೆ ಫಲಾನುಭವಿಗಳು ಮಾಸಾಶನ ತಲುಪಿಸಿದೆ. ಸಂಕಷ್ಟದ ಸಂದರ್ಭದಲ್ಲೂ ನಮ್ಮ ನೌಕರರು ಕೆಲಸ ಮಾಡಿದ್ದಾರೆ’ ಎಂದುಹೇಳಿದರು.

ಎಐಪಿಇಯು ಗ್ರೂಪ್ ‘ಸಿ’ ವಿಭಾಗೀಯ ಅಧ್ಯಕ್ಷ ಟಿ.ಕೆ. ಗೋಪಾಲ್ ಅಧ್ಯಕ್ಷತೆ ವಹಿಸಿದ್ದರು.

ದಕ್ಷಿಣ ಕರ್ನಾಟಕ ವಲಯ ಪೋಸ್ಟ್ ಮಾಸ್ಟರ್ ಜನರಲ್ ಡಿ.ಎಸ್.ವಿ.ಆರ್. ಮೂರ್ತಿ, ಎಐಪಿಇಯು ಪೋಸ್ಟ್‌ಮನ್ ಮತ್ತು ಎಂಟಿಎಸ್ ಕೇಂದ್ರ ಸಂಘದ ಪ್ರಧಾನ ಕಾರ್ಯದರ್ಶಿ ಡಿ.ಬಿ. ಮೊಹಂತಿ, ಅಂಚೆ ಅಧೀಕ್ಷಕ ಜಿ. ಹರೀಶ್, ಎ.ಐ.ಆರ್.ಎಂ.ಎಸ್. ವಲಯ ಕಾರ್ಯದರ್ಶಿ ಎ. ಶ್ರೀನಿವಾಸ್, ಜಾನಕಿರಾಮ್, ಮಲ್ಲಿಕಾರ್ಜುನ್ ಎಚ್.ಆರ್. ಈಶ್ವರಪ್ಪ, ಎಸ್.ಎಸ್. ಮಂಜುನಾಥ್ ಇದ್ದರು.

ಚಂದ್ರಶೇಖರ್ ಹಿರೇಗೋಣಿಗೆರೆ, ಪ್ರೀತಿ ಎನ್.ಎಸ್. ಕಾರ್ಯಕ್ರಮ ನಿರೂಪಿಸಿದರು. ಜಿ. ರಾಘವೇಂದ್ರ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.