ಹೊಸನಗರ: ಪಟ್ಟಣ ಹೊರವಲಯದ ಎಂ.ಗುಡ್ಡೇಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹಾದು ಹೋಗಿರುವ ರಾಜ್ಯ ಹೆದ್ದಾರಿ ಸಂಪೂರ್ಣ ಹದಗೆಟ್ಟಿದೆ. ಬೇಸಿಗೆಯಲ್ಲಿ ಸೃಷ್ಟಿಯಾಗಿದ್ದ ಗುಂಡಿಗಳು ಭಾರೀ ಮಳೆಯಿಂದ ಇನ್ನಷ್ಟು ವಿಸ್ತರಿಸಿದ್ದು, ರಸ್ತೆ ತುಂಬಾ ಹೊಂಡಗಳೇ ರಾರಾಜಿಸುತ್ತಿವೆ.
ಹುಂಚಾ ರೋಡ್, ಕರಿನಗೊಳ್ಳಿ ಗ್ರಾಮದಲ್ಲಿನ ರಸ್ತೆ ಗುಂಡಿಗಳಲ್ಲಿ ನೀರು ತುಂಬಿ ವಾಹನ ಸಂಚಾರಕ್ಕೆ ತೊಂದರೆ ಆಗಿದೆ.ವಿದ್ಯಾರ್ಥಿಗಳು, ವೃದ್ಧರು, ಅನಾರೋಗ್ಯ ಪೀಡಿತರು ಈ ರಸ್ತೆಗುಂಟ ಸಂಚರಿಸುವುದೇ ಕಷ್ಟವಾಗಿದೆ. ಕಳೆದ ಮಳೆಗಾಲದಲ್ಲೂ ಇದೇ ಸ್ಥಿತಿ ಇತ್ತು. ಲೋಕೋಪಯೋಗಿ ಇಲಾಖೆಯು ಮಣ್ಣು ತುಂಬಿಸಿ ಗುಂಡಿಗಳನ್ನು ಮುಚ್ಚುವ ಮೂಲಕ ತಾತ್ಕಾಲಿಕ ಪರಿಹಾರ ನೀಡಿತ್ತು.
ಈ ಮಳೆಗಾಲದಲ್ಲಿ ರಸ್ತೆಯೆಲ್ಲಾ ಮತ್ತೆ ಗುಂಡಿಗಳು ಬಿದ್ದಿದ್ದು ಬಲಿಗಾಗಿ ಕಾದಿವೆ. ರಸ್ತೆಯ ಅಂಚು ಕೂಡಾ ಕೊಚ್ಚಿಹೋಗಿದ್ದು, ವಾಹನಗಳು ಇತರ ವಾಹನಗಳಿಗೆ ‘ಸೈಡ್’ ಕೊಡಲು ಹೋಗಿ ಪಲ್ಟಿಯಾದ ಪ್ರಕರಣ ಇವೆ. ರಸ್ತೆ ಬದಿಯಲ್ಲಿ ಸಮರ್ಪಕ ಚರಂಡಿ ವ್ಯವಸ್ಥೆ ಇಲ್ಲದ ಕಾರಣ, ಮಳೆ ನೀರು ರಸ್ತೆ ಮೇಲೆ ಹರಿಯುತ್ತಿದೆ. ಇದರಿಂದ ಡಾಂಬರ್ ಕಿತ್ತು ಹೋಗಿ, ರಸ್ತೆಯ ಅಸ್ತಿತ್ವವೇ ಇಲ್ಲದಂತಾಗಿದೆ ಎಂದು ಗ್ರಾಮಸ್ಥರು ದೂರುತ್ತಾರೆ.
ಮಳೆಗಾಲದಲ್ಲಿ ರಸ್ತೆ ಹಾಳಾಗುವುದು ಇದೇ ಮೊದಲಲ್ಲ. ಕೆಲ ವರ್ಷಗಳಿಂದ ರಸ್ತೆ ಹಾಳಾಗುತ್ತಿದ್ದರೂ ಯಾವ ಅಧಿಕಾರಿಯೂ ಇತ್ತ ಗಮನ ನೀಡುತ್ತಿಲ್ಲ. ಮಳೆ ಬಿಟ್ಟಾಗ ಒಂದು ಹೆಡಿಗೆ ಮಣ್ಣು ಹಾಕಿ ದುರಸ್ತಿ ಮಾಡುವ ನಾಟಕ ನಡೆಯುತ್ತಿದೆ. ಆದರೆ, ಶಾಶ್ವತವಾಗಿ ದುರಸ್ತಿ ಮಾಡುವ ಕಾಮಗಾರಿ ನಡೆಸಿಲ್ಲ. ಇದೇ ಮಾರ್ಗದಲ್ಲಿ ಶಿವಮೊಗ್ಗಕ್ಕೆ ಸರ್ಕಾರಿ ವಾಹನಗಳಲ್ಲಿ ಓಡಾಡುವ ಅಧಿಕಾರಿಗಳು ಇನ್ನಾದರೂ ಕಣ್ಣುಬಿಟ್ಟು ನೋಡಬೇಕು ಎಂಬುದು ನಾಗರಿಕರ ಆಗ್ರಹವಾಗಿದೆ.
ಮಳೆಗಾಲದ ನಂತರ ರಸ್ತೆ ಡಾಂಬರೀಕರಣ ಮಾಡಿಸುವುದಾಗಿ ಶಾಸಕ ಬೇಳೂರು ಗೋಪಾಲಕೃಷ್ಣ ಭರವಸೆ ನೀಡಿದ್ದಾರೆ. ಆದರೆ ಮಳೆಗಾಲ ಮುಗಿಯುವ ತನಕವಾದರೂ ತಾತ್ಕಾಲಿಕ ಪರಿಹಾರ ಕಂಡುಕೊಳ್ಳಬೇಕಿದೆ. ವಾಹನ ಸವಾರರ ಹಿತದೃಷ್ಟಿಯಿಂದ ಕೂಡಲೇ ರಸ್ತೆ ದುರಸ್ತಿ ಕಾರ್ಯ ನಡೆಸಲಿ ಎಂಬುದು ಈ ಭಾಗದ ಜನರ ಕೋರಿಕೆ.
ಚರಂಡಿಯಲ್ಲಿ ನೀರು ಹರಿಯದೇ ರಸ್ತೆ ಹಾಳಾಗಿದೆ. ಕೊಡಲೇ ಗುಂಡಿಗಳಿಗೆ ವೆಟ್ ಮಿಕ್ಸ್ ಹಾಕಬೇಕು. ಇಲ್ಲವಾದರೆ ರಸ್ತೆ ಸಂಪೂರ್ಣ ಹಾಳಾಗಲಿದೆಸುಧಾಕರ ಕರಿನಗೊಳ್ಳಿ ಗ್ರಾಮಸ್ಥ
- ‘ಮಳೆಗಾಲದ ನಂತರ ಡಾಂಬರೀಕರಣ’ ಹುಂಚಾರೋಡ್ ಕರಿನಗೊಳ್ಳಿ ಭಾಗದಲ್ಲಿ ಮಳೆಗಾಲ ದಿನಗಳಲ್ಲಿ ರಸ್ತೆ ಕಿತ್ತು ಹೊಂಡ ಗುಂಡಿ ಬೀಳುವುದು ಸಾಮಾನ್ಯವಾಗಿದೆ. ಆಗಾಗ ಗುಂಡಿ ಮುಚ್ಚುವ ಕಾಮಗಾರಿ ನಡೆಯುತ್ತಿದೆ. ಆದರೂ ಈ ಬಾರಿ ಮಳೆಗೆ ರಸ್ತೆ ಸಾಕಷ್ಟು ಹಾಳಾಗಿದೆ. ಮಳೆಗಾಲದ ನಂತರ ಡಾಂಬರೀಕರಣಕ್ಕೆ ಸರ್ಕಾರಕ್ಕೆ ಶಿಫಾರಸ್ಸು ಮಾಡಲಾಗುವುದು ಎಂದು ಲೋಕೋಪಯೋಗಿ ಇಲಾಖೆ ಎಇಇ ಸುನೀಲ್ ಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.