ADVERTISEMENT

1,700 ಗ್ರಾಮ ಲೆಕ್ಕಾಧಿಕಾರಿಗಳ ನೇಮಕಾತಿಗೆ ಸಿದ್ಧತೆ: ಕೃಷ್ಣ ಬೈರೇಗೌಡ

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2023, 23:29 IST
Last Updated 6 ಸೆಪ್ಟೆಂಬರ್ 2023, 23:29 IST
ಕೃಷ್ಣ ಬೈರೇಗೌಡ
ಕೃಷ್ಣ ಬೈರೇಗೌಡ   

ಶಿವಮೊಗ್ಗ: ರಾಜ್ಯದಲ್ಲಿ 1,700 ಗ್ರಾಮ ಲೆಕ್ಕಾಧಿಕಾರಿ ಹುದ್ದೆಗಳನ್ನು ನೇಮಕ ಮಾಡಿಕೊಳ್ಳಲು ಸಿದ್ಧತೆ ನಡೆಸಲಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದರು.

ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಆಯಾ ಜಿಲ್ಲಾಧಿಕಾರಿ ಮೂಲಕವೇ ನೇಮಕಾತಿ ನಡೆದರೂ ಪಾರದರ್ಶಕತೆ ತರಲು ಈ ಪ್ರಕ್ರಿಯೆಗೆ ಕಂದಾಯ ಇಲಾಖೆ ಆಯುಕ್ತರ ನೇತೃತ್ವದಲ್ಲಿ ಏಕರೂಪದ ವ್ಯವಸ್ಥೆ ರೂಪಿಸಲಾಗುತ್ತಿದೆ. ನೇಮಕಾತಿ ಪ್ರಕ್ರಿಯೆ ಮುಂದಿನ ಆರು ತಿಂಗಳಲ್ಲಿ ಪೂರ್ಣಗೊಳ್ಳಲಿದೆ’ ಎಂದರು.

ಇ–ಆಡಳಿತ ಜಾರಿ: ಕಂದಾಯ ಇಲಾಖೆಯಲ್ಲಿ ಮುಂದಿನ 15 ದಿನಗಳ ಒಳಗಾಗಿ ಇ–ಆಡಳಿತ ಜಾರಿಗೊಳಿಸಲಾಗುತ್ತಿದೆ. ಎಲ್ಲ ಕಡತಗಳು ಡಿಜಿಟಲೈಸ್ ಆಗಲಿವೆ. ತಾಲ್ಲೂಕು ಕಚೇರಿ ಹಾಗೂ ಮೇಲಿನ ಎಲ್ಲ ಕಚೇರಿಗಳ ಕಡತಗಳು ಇ–ಆಫೀಸ್ ಮೂಲಕವೇ ವಿಲೇವಾರಿ ಆಗಲಿವೆ. ಇದರಿಂದ ಜನರು ಕಚೇರಿಗೆ ಅಲೆಯುವುದು ತಪ್ಪಲಿದೆ ಎಂದರು.

ADVERTISEMENT

ಸರ್ವೆ ಇಲಾಖೆಯಲ್ಲೂ ಸಿಬ್ಬಂದಿ ಕೊರತೆ ಇದೆ. ಅಲ್ಲಿಯೂ ನೇಮಕಾತಿ ಅಗತ್ಯವಿದೆ. ಪರವಾನಗಿ ಪಡೆದ 2,000 ಸರ್ವೆಯರ್‌ಗಳಿಗೆ ಪರೀಕ್ಷೆ ಪೂರ್ಣಗೊಳಿಸಲಾಗಿದೆ. ಅವರಿಗೂ ತರಬೇತಿ ನೀಡಿ ಡಿಸೆಂಬರ್‌ನಿಂದ ಅವರ ಸೇವೆ ಪಡೆದುಕೊಳ್ಳಲಾಗುವುದು. 354 ಸರ್ವೆ ಅಧಿಕಾರಿಗಳ ನೇಮಕಾತಿ ಪ್ರಕ್ರಿಯೆಗೂ ಚಾಲನೆ ನೀಡಲಾಗಿದೆ ಎಂದು ಹೇಳಿದರು.

ಜಮೀನುಗಳನ್ನು ಡ್ರೋಣ್ ಮೂಲಕ ಸರ್ವೆ ಮಾಡುವ ವ್ಯವಸ್ಥೆಯಲ್ಲಿ ಸಮಸ್ಯೆಗಳು ಕಂಡುಬಂದಿವೆ. ಹಿಂದೆ ಸರ್ವೆ ಮಾಡುತ್ತಿದ್ದಾಗ ಕಾಣಸಿಗುತ್ತಿದ್ದ ಲೋಪಗಳೇ ಮತ್ತೆ ಕಂಡುಬರುತ್ತಿವೆ. ದಾಖಲೆಯಲ್ಲಿರುವುದು, ಸರ್ವೆಯಲ್ಲಿ ಕಾಣುತ್ತಿರುವುದು ತಾಳೆಯಾಗುತ್ತಿಲ್ಲ. ಈ ತೊಂದರೆಗೆ ಪರಿಹಾರ ಕಂಡುಕೊಳ್ಳಲು ಸರ್ವೆ ಆಯುಕ್ತರಿಗೆ ಸೂಚಿಸಲಾಗಿದೆ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.