ಶಿವಮೊಗ್ಗ: ‘ಪತ್ರಿಕೋದ್ಯಮದ ಮೂಲ ಉದ್ದೇಶವೇ ಸವಕಲಾಗುತ್ತಿದೆ. ತನಿಖಾ ವರದಿಗಳು ಕಣ್ಮರೆಯಾಗುತ್ತಿವೆ. ಪತ್ರಕರ್ತರ ಸ್ವಾತಂತ್ರ್ಯಕ್ಕೆ ಚೌಕಟ್ಟು ಹಾಕಲಾಗುತ್ತಿದೆ. ಇಲ್ಲಿ ಸಿಂಡಿಕೇಟ್ ಜರ್ನಲಿಸಂ ಸೃಷ್ಟಿಯಾಗಿದೆ’ ಎಂದು ಉಪಮುಖ್ಯಮಂತ್ರಿ ಮಾಧ್ಯಮ ಸಲಹೆಗಾರ ಪಿ.ತ್ಯಾಗರಾಜ್ ಬೇಸರ ವ್ಯಕ್ತಪಡಿಸಿದರು.
ಪ್ರೆಸ್ ಟ್ರಸ್ಟ್ ವತಿಯಿಂದ ಇಲ್ಲಿನ ಆರ್‌ಟಿಒ ರಸ್ತೆಯ ಕಚೇರಿ ಆವರಣದಲ್ಲಿ ಗುರುವಾರ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ, ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಲಾಭದಾಯಕ ದೃಷ್ಟಿಯಿಂದ ಪತ್ರಿಕೋದ್ಯಮವನ್ನು ಕಾಣಲಾಗುತ್ತಿದೆ. ಮನೆಯಲ್ಲಿಯೇ ಕೂತು ಸುದ್ದಿಯನ್ನು ಬರೆಯುವ ಕಾಲಘಟ್ಟಕ್ಕೆ ಬಂದಿದ್ದೇವೆ. ಸ್ಥಳಕ್ಕೆ ಹೋಗಿ ಸುದ್ದಿ ಬರೆಯುವ ಆಸಕ್ತಿಯನ್ನು ಕೆಲವು ಪತ್ರಕರ್ತರು ತೋರುತ್ತಿಲ್ಲ. ಇದಕ್ಕೆ ಸಂಪಾದಕರ ಒತ್ತಡ ಕೂಡ ಇರಬಹುದು ಎಂದರು.
ಸಾಮಾಜಿಕ ಜಾಲಾತಾಣ ತುಂಬಾ ಸಕ್ರಿಯವಾಗಿದೆ. ಆದ್ದರಿಂದ, ಪತ್ರಿಕೆಗಳು ಹಾಗೂ ದೃಶ್ಯ ಮಾಧ್ಯಮಗಳ ಮೇಲೆ ಜವಾಬ್ದಾರಿ ಹೆಚ್ಚಿದೆ. ಬದುಕುವ ಹಕ್ಕು ಎಲ್ಲರಿಗೂ ಇದೆ. ಪತ್ರಕರ್ತರು ಅಕ್ಷರಗಳನ್ನು ಮಾರಾಟ ಮಾಡಿಕೊಳ್ಳದೇ ಸರ್ಕಾರದ ಸವಲತ್ತು ಪಡೆಯುವುದು ಅಪರಾಧವಲ್ಲ. ಪತ್ರಕರ್ತರ ಎದುರಿಸುತ್ತಿರುವ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತರಲಾಗುವುದು ಎಂದು ಭರವಸೆ ನೀಡಿದರು.
‘ಸಮಾಜ ಹಾಗೂ ಸರ್ಕಾರದ ನಡುವೆ ಪತ್ರಕರ್ತರು ಸೇತುವೆಯಾಗಿ ನಿಂತಿದ್ದಾರೆ. ಆದರೆ, ಈಚೆಗೆ ಕೆಲವು ಮಾಧ್ಯಮಗಳು ಸುಳ್ಳು ಸುದ್ದಿಗಳನ್ನು ಹರಡುತ್ತಿವೆ. ನಂಬಿಕೆ ಉಳಿಸಿಕೊಳ್ಳಲು ವಾಸ್ತವ ಹಾಗೂ ನೈಜತೆಗೆ ಹೆಚ್ಚು ಒತ್ತು ನೀಡಬೇಕು. ಪ್ರಭಾವಿಗಳ ವಿರುದ್ಧ ಸುದ್ದಿ ಬಿತ್ತರಿಸಲು ಕೆಲವು ಮಾಧ್ಯಮಗಳು ಹಿಂದೇಟು ಹಾಕುತ್ತಿವೆ. ಪತ್ರಕರ್ತರು ತಮ್ಮ ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಿಸಬೇಕು’ ಎಂದು ಸರ್ಕಾರಿ ನೌಕರರ ಸಂಘ ರಾಜ್ಯ ಘಟಕದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ ಹೇಳಿದರು.
‘ಪತ್ರಕರ್ತರು ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು. ಸತ್ಯ ಹಾಗೂ ನ್ಯಾಯದ ಪಥದಲ್ಲಿ ಸುದ್ದಿ ಬಿತ್ತರಿಸಬೇಕು’ ಎಂದು ಹಿರಿಯ ವಾರ್ತಾಧಿಕಾರಿ ಆರ್.ಮಾರುತಿ ಸಲಹೆ ನೀಡಿದರು.
‘ಪತ್ರಕರ್ತರ ನಿವೃತ್ತಿ ಭತ್ಯೆ ಕನ್ನಡಿಯೊಳಗಿನ ಗಂಟಾಗಿದೆ. ಇದರಿಂದ, ಅನೇಕರು ಸಮಸ್ಯೆ ಎದುರಿಸುತ್ತಿದ್ದಾರೆ. ಇಲ್ಲಿ ಕೆಲವು ಬದಲಾವಣೆ ತರಬೇಕು. ಅನೇಕ ಪತ್ರಕರ್ತರಿಗೆ ನಿವೇಶನದ ಕೊರತೆ ಇದೆ. ಈ ಬಗ್ಗೆ ಸರ್ಕಾರ ಕ್ರಮ ಕೈಗೊಳ್ಳಬೇಕು’ ಎಂದು ಪ್ರಸ್ ಟ್ರಸ್ಟ್ ಅಧ್ಯಕ್ಷ ಎನ್.ಮಂಜುನಾಥ ಒತ್ತಾಯಿಸಿದರು.
ಪತ್ರಿಕೋದ್ಯಮದ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಎಸ್.ಬಿ. ಮಠದ್, ಟಿ.ಎ. ನರೇಶ್ ಕುಮಾರ್, ನಾರಪ್ಪ ಗೌಡ್ರು, ಎಂ.ಸಿ. ರಾಜು, ಕಾರ್ತೀಕ್ ಚಂದ್ರಮೌಳಿ, ಶಿವಮೊಗ್ಗ ಯೋಗರಾಜ್, ಚಿರಾಗ್ (ಚಿನ್ನು), ಬಿ. ಮಂಜುನಾಥ್ ಅವರನ್ನು ಸನ್ಮಾನಿಸಲಾಯಿತು.
ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ಪತ್ರಕರ್ತರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಹಿರಿಯ ಛಾಯಾಗ್ರಾಹಕ ದಿ.ಶಿವಮೊಗ್ಗ ನಂದನ್ ನೆನಪಿನಲ್ಲಿ ಛಾಯಚಿತ್ರ ಪ್ರದರ್ಶನ ನಡೆಯಿತು.
ಪತ್ರಕರ್ತರಾದ ಹೊನ್ನಾಳ್ಳಿ ಚಂದ್ರಶೇಖರ್, ವೈ.ಕೆ.ಸೂರ್ಯನಾರಾಯಣ, ಗೋಪಾಲ್ ಯಡಿಗೆರೆ, ನಾಗರಾಜ್ ನೇರಿಗೆ, ಸಂತೋಷ್ ಕಾಚೀನಕಟ್ಟೆ, ಪಿ. ಜೇಸುದಾಸ್ ಇದ್ದರು.
₹150 ಗೌರವಧನಕ್ಕೆ ಕೆಲಸಕ್ಕೆ ಸೇರಿದ್ದ ನಾನು ₹300 ಕೋಟಿ ವಹಿವಾಟಿನ ಜಾಹೀರಾತು ಸಂಸ್ಥೆ ನಡೆಸುತ್ತಿದ್ದೇನೆ. 10 ರಾಜ್ಯಗಳಲ್ಲಿ ವಹಿವಾಟು ಇದೆ. ಸಂಸ್ಥೆಯಲ್ಲಿ ನೂರಾರು ಮಂದಿ ನೌಕರರಿದ್ದಾರೆ
- ವ್ಯವಸ್ಥಾಪಕ ನಿರ್ದೇಶಕ ಝೇಂಕಾರ್ ಅಡ್ವಟೈಸರ್ಸ್
ಪತ್ರಕರ್ತರ ಅಸ್ತಿತ್ವ ಉಳಿವಿಗೆ ಹೋರಾಟ: ತ್ಯಾಗರಾಜ್ ‘ಪತ್ರಕರ್ತರ ವೃತ್ತಿ ಪಾವಿತ್ರ್ಯತೆ ಕುಸಿಯುತ್ತಿದೆ. ಸುದ್ದಿ ಆಳಕ್ಕೆ ಇಳಿದು ಕೆಲವರು ಕೆಲಸ ಮಾಡುತ್ತಿಲ್ಲ. ಕಿವಿಗೆ ಬಿದ್ದದ್ದು ತಮಗೆ ತೋಚಿದ್ದನ್ನು ಗೀಚುತ್ತಿದ್ದಾರೆ. ಇದರಿಂದ ಜನರ ವಿಶ್ವಾಸಾರ್ಹತೆಯನ್ನು ಪತ್ರಿಕೋದ್ಯಮ ಕಳೆದುಕೊಳ್ಳುತ್ತಿದೆ. ಪತ್ರಿಕೋದ್ಯಮದಲ್ಲಿ ನಡೆಯುತ್ತಿರುವ ರಾಜಕಾರಣ ನೋಡಿದರೆ ಬೇಸರವಾಗುತ್ತಿದೆ. ಈ ಹಿಂದೆ ವಿಶೇಷ ವರದಿಗಳಿಗೆ ಒತ್ತಡ ಇತ್ತು. ಈಗ ಜಾಹೀರಾತುಗಳನ್ನು ತಂದರೆ ಮಾತ್ರ ಪತ್ರಕರ್ತನ ಅಸ್ತಿತ್ವ ಉಳಿಯುತ್ತದೆ ಎನ್ನುವ ಸ್ಥಿತಿಗೆ ಬಂದಾಗಿದೆ’ ಎಂದು ಹಿರಿಯ ಪತ್ರಕರ್ತ ಪಿ.ತ್ಯಾಗರಾಜ್ ಬೇಸರ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.