ADVERTISEMENT

ಜಿಂದಾಲ್‌ಗೆ ಭೂಮಿ: ಯಡಿಯೂರಪ್ಪ ವಿರುದ್ಧ ಆರೋಪ ನಿರಾಧಾರ

ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್

​ಪ್ರಜಾವಾಣಿ ವಾರ್ತೆ
Published 18 ಜೂನ್ 2019, 12:24 IST
Last Updated 18 ಜೂನ್ 2019, 12:24 IST
ಆಯನೂರು ಮಂಜುನಾಥ್
ಆಯನೂರು ಮಂಜುನಾಥ್   

ಶಿವಮೊಗ್ಗ: ರಾಜ್ಯ ಸರ್ಕಾರ ಜಿಂದಾಲ್‌ ಕಂಪನಿಗೆ 3,667 ಎಕರೆ ಭೂಮಿ ನೀಡಿರುವ ವಿಷಯದಲ್ಲಿ ಮುಖ್ಯಮಂತ್ರಿನಡವಳಿಕೆ ‘ಹಿಟ್ ಅಂಡ್ ರನ್’ ರೀತಿ ಇದೆ ಎಂದು ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ದೂರಿದರು.

ಜಿಂದಾಲ್ ಕಂಪನಿಗೆ ಭೂಮಿ ನೀಡುವುದನ್ನು ವಿರೋಧಿಸಿ ಬಿಜೆಪಿ ಮೂರು ದಿನ ಬೆಂಗಳೂರಿನಲ್ಲಿ ಅಹೋರಾತ್ರಿ ಹೋರಾಟ ನಡೆಸಿದೆ. ಈಗ ಕುಮಾರಸ್ವಾಮಿ ಅವರು ಮಾತು ಬದಲಿಸಿ, ‘ಯಡಿಯೂರಪ್ಪ ಅವರೇ ಈ ಕಂಪನಿಗೆ ಜಮೀನು ನೀಡಿದ್ದರು. ಅದಕ್ಕಾಗಿ ₨ 20 ಕೋಟಿ ಕಿಕ್‌ಬ್ಯಾಕ್ ಪಡೆದಿದ್ದರು’ ಎಂದು ಹಗುರವಾಗಿ ಮಾತನಾಡಿದ್ದಾರೆ. ಮುಖ್ಯಮಂತ್ರಿ ಮಾತು ನಂಬಲು ಸಾಧ್ಯವೇ ಇಲ್ಲ ಎಂದು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.

ಜಿಂದಾಲ್ ಕಂಪನಿಗೆ ಭೂಮಿ ನೀಡುವ ವಿಚಾರದಲ್ಲಿ ಹಿಂದೆ ಯಡಿಯೂರಪ್ಪ ಅವರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿತ್ತು. ಈ ಸಮಿತಿ 20 ಷರತ್ತುಗಳ ಆಧಾರದಲ್ಲಿ ಭೂಮಿ ನೀಡಬಹುದು ಎಂದು ಸರ್ಕಾರಕ್ಕೆ ವರದಿ ಸಲ್ಲಿಸಿತ್ತು. ಆಗ ಮುಖ್ಯಮಂತ್ರಿಯಾಗಿದ್ದ ಕುಮಾರಸ್ವಾಮಿ ಯಾವ ಅಂಶಗಳನ್ನೂ ಗಣನೆಗೆ ತೆಗೆದುಕೊಳ್ಳದೆ ಭೂಮಿ ನೀಡಿದರು. ಸಿಬಿಐ ನ್ಯಾಯಾಲಯ ಸಹ ಜಿಂದಾಲ್ ಕಂಪನಿಗೆ ಭೂಮಿ ನೀಡಿರುವ ವಿಚಾರದಲ್ಲಿ ಯಡಿಯೂರಪ್ಪ ಅವರ ತಪ್ಪು ಇಲ್ಲ ಎಂದು ತೀರ್ಪು ನೀಡಿದೆ. ಆದರೂ, ಕುಮಾರಸ್ವಾಮಿ ಮತ್ತೆ ಆರೋಪ ಮಾಡಿದ್ದಾರೆ. ಇದು ನ್ಯಾಯಾಂಗ ನಿಂದನೆ. ತಕ್ಷಣ ಯಡಿಯೂರಪ್ಪ ಅವರ ಕ್ಷಮೆಯಾಚಿಸಬೇಕೆಂದು ಒತ್ತಾಯಿಸಿದರು.

ಐಎಂಎಯಲ್ಲಿ ಜಿಲ್ಲೆಯ 138 ಜನರು ₨ 5 ಕೋಟಿ ಹೂಡಿಕೆ ಮಾಡಿದ್ದಾರೆ. ಆಷಾಢಭೂತಿ ಮುಖ್ಯಮಂತ್ರಿ ಕುಮಾರಸ್ವಾಮಿ ಐಎಂಎ ಹಗರಣವನ್ನು ಸಿಬಿಐಗೆ ವಹಿಸಬೇಕು ಎಂದು ಒತ್ತಾಯಿಸಿದರು.

ADVERTISEMENT

ಎಸ್‌ಡಿಪಿಐ ಸಂಘಟನೆ ಕಾರ್ಯಕರ್ತರು ರಂಜಾನ್ ಹಬ್ಬದ ಸಮಯದಲ್ಲಿ ಸಮಾಜದ ಶಾಂತಿ ಕದಡುವಂತಹ ಘೋಷಣೆ ಕೂಗಿದ್ದಾರೆ. ಪೊಲೀಸರು ಇರುವರೆಗೂ ಪ್ರಕರಣ ದಾಖಲಿಸಿಲ್ಲ ಎಂದು ಆರೋಪಿಸಿದರು.

ವಿಧಾನ ಪರಿಷತ್ ಸದಸ್ಯ ಎಸ್.ರುದ್ರೇಗೌಡ ಮಾತನಾಡಿ, ಜಿಲ್ಲೆಯ ಕೈಗಾರಿಕೆಗಳಲ್ಲಿ ಒಂದಾದ ವಿಐಎಸ್ಎಲ್ ಮುಚ್ಚುವ ಅಥವಾ ಖಾಸಗೀಕರಣಗೊಳಿಸಲು ಜಿಲ್ಲಾ ಬಿಜೆಪಿ ಬೆಂಬಲ ನೀಡುವುದಿಲ್ಲ. ಕೈಗಾರಿಕೆಯನ್ನು ಉಳಿಸಲು ಹೋರಾಟ ನಡೆಸುತ್ತದೆ. ಕೇಂದ್ರ ಸರ್ಕಾರ 1,500 ಕೋಟಿ ಬಂಡವಾಳ ಹೂಡಿದರೆ ಕಾರ್ಖಾನೆ ಸಹಜ ಸ್ಥಿತಿಗೆ ಬರುತ್ತದೆ. ಸಂಸದ ಬಿ.ವೈ.ರಾಘವೇಂದ್ರ ಅವರು ಈಗಾಗಲೇ ಕೇಂದ್ರ ಸಚಿವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ ಎಂದು ವಿವರ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.