ADVERTISEMENT

ರೈತರಿಗೆ ಸಿಗದ ಹೊಸ ಸಾಲ: ನಬಾರ್ಡ್‌ ವಿರುದ್ಧ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 26 ಜೂನ್ 2019, 16:13 IST
Last Updated 26 ಜೂನ್ 2019, 16:13 IST
ಎಚ್‌.ಆರ್.ಬಸವರಾಜಪ್ಪ
ಎಚ್‌.ಆರ್.ಬಸವರಾಜಪ್ಪ   

ಶಿವಮೊಗ್ಗ: ರಾಜ್ಯ ಸರ್ಕಾರ 11 ಲಕ್ಷ ರೈತರಿಗೆ ₨ 4,830 ಕೋಟಿ ಬಿಡುಗಡೆ ಮಾಡಿದ್ದರೂ, ಹೊಸ ಸಾಲ ನೀಡುತ್ತಿಲ್ಲ ಎಂದು ರಾಜ್ಯ ರೈತ ಸಂಘದ ಕಾರ್ಯಾಧ್ಯಕ್ಷ ಎಚ್‌.ಆರ್.ಬಸವರಾಜಪ್ಪ ಆರೋಪಿಸಿದರು.

ಸರ್ಕಾರ ನೀಡಿದ ಸಾಲಮನ್ನಾದ ಎಲ್ಲ ಹಣವನ್ನೂ ಡಿಸಿಸಿ ಬ್ಯಾಂಕ್‌ ಅಫೆಕ್ಸ್ ಬ್ಯಾಂಕಿಗೆ ಜಮಾ ಮಾಡಿದೆ. ನಬಾರ್ಡ್‌ ಮೊದಲು ಸಹಕಾರಿ ಬ್ಯಾಂಕ್‌ಗಳಿಗೆ ನೀಡುತ್ತಿದ್ದ ಶೇ 75ರಷ್ಟು ಹಣ ಕಡಿತ ಮಾಡಿ ಶೇ 25ಕ್ಕೆ ಇಳಿಸಿದೆ. ಇದರಿಂದ ರೈತರಿಗೆ ಹೊಸ ಸಾಲ ನೀಡಲು ಸಾಧ್ಯವಾಗುತ್ತಿಲ್ಲ ಎಂದು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ದೂರಿದರು.

ನಬಾರ್ಡ್ ಕೃಷಿ ಕ್ಷೇತ್ರಕ್ಕೆ ಮೊದಲು ನೀಡುತ್ತಿದಂತೆ ಸಾಲ ನೀಡಬೇಕು. ರಾಜ್ಯದ ಸಹಕಾರಿ ಬ್ಯಾಂಕುಗಳೂ ರೈತರಿಗೆ ಕೊಡುವ ಸಾಲದ ಮೊತ್ತ ಕಡಿಮೆ ಮಾಡುತ್ತಾ ಬಂದಿವೆ. ಇದರಿಂದ ಬಿತ್ತನೆ ಮತ್ತಿತರ ಕಾರ್ಯಗಳಿಗೆ ತೊಂದರೆಯಾಗಿದೆ.
ರಾಜ್ಯ ಸರ್ಕಾರ ಸಾಲ ಮನ್ನಾ ಪ್ರಯೋಜನ ರೈತರಿಗೆ ತಲುಪಿಲ್ಲ. 22 ಲಕ್ಷ ಸಾಲ ಪಡೆದ ರೈತರಲ್ಲಿ 19 ಲಕ್ಷ ಸಾಲಮನ್ನಾ ಪ್ರಯೋಜನಕ್ಕೆ ಅರ್ಹರಾಗಿದ್ದಾರೆ. ಹಣ ರೈತರ ಖಾತೆಗೆ ತುಂದಿದ್ದರೂ, ಬ್ಯಾಂಕ್‌ಗಳ ನಡೆಯಿಂದ ರೈತರಿಗೆ ಪ್ರಯೋಜನವಾಗಿಲ್ಲ ಎಂದರು.

ADVERTISEMENT

ಶಿವಮೊಗ್ಗ ಡಿಸಿಸಿ ಬ್ಯಾಂಕ್‌ನಲ್ಲಿ ₨ 139 ಕೋಟಿ ಸಾಲ ಮನ್ನಾ ಆಗಿದೆ. ಸರ್ಕಾರದಿಂದ ಇದುವರೆಗೆ ₨ 72 ಕೋಟಿ ಬಿಡುಗಡೆಯಾಗಿದೆ. ₨ 67 ಕೋಟಿ ಬಿಡುಗಡೆಯಾಗಬೇಕಾಗಿದೆ. ಬಂದ ಎಲ್ಲ ₨ 72 ಕೋಟಿಯನ್ನೂ ಡಿಸಿಸಿ ಬ್ಯಾಂಕ್ ಅಫೆಕ್ಸ್ ಬ್ಯಾಂಕ್‌ಗೆ ತುಂಬಲಾಗಿದೆ. ಶೇ 9ರಂತೆ ಪಡೆದ ಠೇವಣಿ ಹಣದಿಂದ ₨ 460 ಕೋಟಿ ಸಾಲ ನೀಡಲಾಗಿದೆ. ಬೇರೆ ಜಿಲ್ಲೆಗಳಲ್ಲಿ ಠೇವಣಿ ಹಣ ಇಲ್ಲದ ಕಾರಣ ರೈತರಿಗೆ ಸಾಲ ಕೊಡುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಪರಸ್ಪರ ಆರೋಪ, ಪ್ರತ್ಯಾರೋಪ:ರಾಜ್ಯ ಸರ್ಕಾರ, ಕೇಂದ್ರ ಸರ್ಕಾರ ರೈತರ ನೆರವಿಗೆ ಬರುವ ಬದಲು ಪರಸ್ಪರ ಆರೋಪ, ಪ್ರತ್ಯಾರೋಪ ಮಾಡುತ್ತಾ ಸಮಯ ವ್ಯರ್ಥ ಮಾಡುತ್ತಿವೆ. ಇದರಿಂದ ರೈತರು ಬಲಿಪಶು ಆಗುತ್ತಿದ್ದಾರೆ. ಸಹಕಾರಿ ಸಂಘಗಳು ದಿವಾಳಿಯಾಗುತ್ತಿವೆ. ತಕ್ಷಣ ಸರ್ಕಾರಗಳು ಸಹಾಯಧನ ನೀಡಬೇಕಿದೆ. ಸ್ಥಳೀಯ ಬಂಡವಾಳ ಸಂಗ್ರಹವೂ ಆಗುತ್ತಿಲ್ಲ. ರೈತರಿಗೂ ಸಾಲ ಸಿಗುತ್ತಿಲ್ಲ ಎಂದು ವಿವರ ನೀಡಿದರು.

ನಬಾರ್ಡ್‌ಶೇ 75ರಷ್ಟು ಸಾಲದ ಹಣ ನೀಡಬೇಕು. ರಾಜ್ಯ ಸರ್ಕಾರ ಸಾಲ ಮನ್ನಾದ ಪೂರ್ಣ ಹಣ ಬಿಡುಗಡೆ ಮಾಡಬೇಕು. ರೈತರಿಗೆ ಬಡ್ಡಿ ರಹಿತ ಸಾಲ ವಿತರಿಸಬೇಕು.ಬ್ಯಾಂಕ್‌ಗಳು ಹೆಚ್ಚು ಠೇವಣಿ ಸಂಗ್ರಹಿಸಬೇಕು. ರೈತರಿಗೆ ತಕ್ಷಣ ಹೊಸ ಸಾಲ ನೀಡಬೇಕು ಎಂದು ಆಗ್ರಹಿಸಿದರು.

ಪತ್ರಿಕಾಗೋಷ್ಠಿಯಲ್ಲಿ ರೈತ ಮುಖಂಡರಾದ ಕಡಿದಾಳು ಶಾಮಣ್ಣ, ಬುದ್ಧಿವಂತರ ಚಂದ್ರಪ್ಪ, ಪಿ.ಶೇಖರಪ್ಪ, ಕೆ.ರಾಘವೇಂದ್ರ, ಈಶಣ್ಣ, ಪರಮಶಿವಯ್ಯ, ಪಂಚಾಕ್ಷರಿ, ಜಗದೀಶ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.