ADVERTISEMENT

ಬಾಡಿಗೆ ಮನೆ ಸಂತ್ರಸ್ತರಿಗೂ ವಸತಿ ಭಾಗ್ಯ

ಮುಖ್ಯಮಂತ್ರಿ ಯಡಿಯೂರಪ್ಪ ಸೂಚನೆಯಂತೆ ಮನೆಗಳ ನಿರ್ಮಾಣ: ಶಿವಕುಮಾರ್

​ಪ್ರಜಾವಾಣಿ ವಾರ್ತೆ
Published 20 ಆಗಸ್ಟ್ 2019, 10:58 IST
Last Updated 20 ಆಗಸ್ಟ್ 2019, 10:58 IST
ಕೆ.ಬಿ.ಶಿವಕುಮಾರ್
ಕೆ.ಬಿ.ಶಿವಕುಮಾರ್   

ಶಿವಮೊಗ್ಗ: ಜಿಲ್ಲೆಯಲ್ಲಿ ಪ್ರವಾಹ, ಮಳೆಗೆ ಸಿಲುಕಿ ಸಂಪೂರ್ಣ ಮನೆ ಕಳೆದುಕೊಂಡವರಿಗೆ ₨ 5 ಲಕ್ಷ ಪರಿಹಾರ, ನೆರೆ ಸಮಯದಲ್ಲಿ ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತಿದ್ದು ನೆಲೆ ಕಳೆದುಕೊಂಡವರಿಗೂ ವಸತಿ ಯೋಜನೆ ಅಡಿ ಆಶ್ರಯ ಕಲ್ಪಿಸಲಾಗುವುದು ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಹೇಳಿದರು.

ಅತಿವೃಷ್ಟಿ, ಪ್ರವಾಹದಿಂದ ಉಂಟಾಗಿರುವ ಹಾನಿಯ ಅಂದಾಜು ಸಿದ್ಧಪಡಿಸಲಾಗುತ್ತಿದೆ. ಪರಿಹಾರ, ಪುನರ್ವಸತಿ ಕಾರ್ಯ ವ್ಯವಸ್ಥಿತವಾಗಿ ನಡೆಯುತ್ತಿದೆ. ಜಿಲ್ಲೆಯ ಸುಮಾರು 5,500 ಕುಟುಂಬಗಳು ಈ ಬಾರಿ ಸಂಕಷ್ಟಕ್ಕೆ ಸಿಲುಕಿವೆ. 2,400ಕುಟುಂಬಗಳಿಗೆ ತುರ್ತು ಪರಿಹಾರದ ರೂಪದಲ್ಲಿ ತಲಾ ₨ 10ಸಾವಿರ ಅವರ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಲಾಗಿದೆ ಎಂದು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಅತಿವೃಷ್ಟಿಯಿಂದ ಹಾನಿಯಾದ ಮನೆಗಳ ಸಮೀಕ್ಷೆ ಕಾರ್ಯ ನಡೆಸಲಾಗಿದೆ. 492 ಮನೆಗಳಿಗೆ ಸಂಪೂರ್ಣ ಹಾನಿಯಾಗಿದೆ. ಸಣ್ಣಪುಟ್ಟ ಹಾನಿಗೆ ₨ 25ಸಾವಿರ ಹಾಗೂ ಭಾಗಶಃ ಹಾನಿಗೆ ₨ 1 ಲಕ್ಷ ಪರಿಹಾರ ನೀಡಲಾಗುತ್ತಿದೆ. ₨ 3ಸಾವಿರ ಮನೆಗಳು ಭಾಗಶಃ ಹಾನಿಗೀಡಾಗಿವೆ. ಮನೆ ಕಟ್ಟಲು ಕಷ್ಟವಾಗುವವರಿಗೆ ಜಿಲ್ಲಾಡಳಿತವೇ ಮನೆ ನಿರ್ಮಿಸಿ ಕೊಡುತ್ತದೆ ಎಂದು ವಿವರ ನೀಡಿದರು.

ADVERTISEMENT

ಹಾನಿ ವಿವರ:ಜಿಲ್ಲೆಯಲ್ಲಿ 10 ಜನರು ಮೃತಪಟ್ಟಿದ್ದಾರೆ. ಅವರ ಕುಟುಂಬದವರಿಗೆ ತಲಾ ₨ 5 ಲಕ್ಷ ಪರಿಹಾರ ಒದಗಿಸಲಾಗಿದೆ. ನೀರಿನಲ್ಲಿ ಕೊಚ್ಚಿಕೊಂಡು ಹೋಗಿರುವ ಇಬ್ಬರ ಮೃತದೇಹಗಳಿಗಾಗಿ ಹುಡುಕಾಟ ಮುಂದುವರಿದಿದೆ. ಇನ್ನೂ ಮೂರು ದಿನಗಳಲ್ಲಿ ಪತ್ತೆಯಾಗದಿದ್ದರೆ ಪರಿಹಾರ ನೀಡಲಾಗುವುದು ಎಂದರು.

ಇದುವರೆಗೂ 70 ಜಾನುವಾರು ಹಾಗೂ 23 ಸಾವಿರ ಕೋಳಿಗಳು ಮೃತಪಟ್ಟಿವೆ. ಇವುಗಳ ಮಾಲೀಕರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಪರಿಹಾರ ಜಮೆ ಮಾಡಲಾಗುವುದು.

ಶಾಶ್ವತ ಪರಿಹಾರ ಪರಿಶೀಲನೆ:ಶಿವಮೊಗ್ಗ ನಗರದಲ್ಲಿ ಅನಧಿಕೃತವಾಗಿ ನಿರ್ಮಾಣಗೊಂಡಿರುವ ಮನೆಗಳು ಪದೇ ಪದೇ ಪ್ರವಾಹಕ್ಕೆ ತುತ್ತಾಗುತ್ತಿವೆ. ಶಾಶ್ವತ ಪರಿಹಾರ ಕಂಡುಕೊಳ್ಳುವ ಅಗತ್ಯವಿದೆ. ಮಹಾನಗರ ಪಾಲಿಕೆ ಜತೆ ಚರ್ಚಿಸಿ, ಕ್ರಮ ಕೈಗೊಳ್ಳಲಾಗುವುದು ಎಂದರು.

ಸಾಂಕ್ರಾಮಿಕ ರೋಗಗಳು ಹರಡದಂತೆ ಎಚ್ಚರಿಕೆ:ನೆರೆಯ ಬಳಿಕ ಸಾಂಕ್ರಾಮಿಕ ರೋಗಗಳು ಹರಡದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ. ಆರೋಗ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಕ್ಲೋರಿನೇಶನ್, ಕೀಟನಾಶಕ ಸಿಂಪಡಣೆ ಕಾರ್ಯ ಕೈಗೊಂಡಿದ್ದಾರೆ. ರಕ್ಷಣೆ, ಪರಿಹಾರ ಹಾಗೂ ಪುನರ್ವಸತಿ ಕಾರ್ಯದಲ್ಲಿ ಸಾರ್ವಜನಿಕರು, ಸಂಘ ಸಂಸ್ಥೆಗಳು ಸಕ್ರಿಯವಾಗಿ ಕೈಜೋಡಿಸಿದ್ದಾರೆ. ಕೆಲವು ಸಾಹಸ ಅಕಾಡೆಮಿ ಸದಸ್ಯರು ನೆರವು ನೀಡಿದ್ದಾರೆ ಎಂದು ಸ್ಮರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.