ADVERTISEMENT

ಜಾತಿ ಗಣತಿ ಬಹಿರಂಗಕ್ಕೆ ಆಗ್ರಹಿಸಿ ನಾಳೆ ಧರಣಿ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2018, 14:27 IST
Last Updated 4 ಡಿಸೆಂಬರ್ 2018, 14:27 IST

ಶಿವಮೊಗ್ಗ: ರಾಜ್ಯ ಸರ್ಕಾರ ನಡೆಸಿದ್ದ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯ (ಜಾತಿ ಗಣತಿ) ವರದಿಯನ್ನು ಸ್ವೀಕರಿಸಿ, ಜಾರಿಗೊಳಿಸಬೇಕು ಎಂದು ಆಗ್ರಹಿಸಿ ಜಿಲ್ಲಾ ಹಿಂದುಳಿದ ಜಾತಿಗಳ ಒಕ್ಕೂಟ ಡಿ. 6ರಂದು ಬೆಳಿಗ್ಗೆ 11ಕ್ಕೆ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಧರಣಿ ಸತ್ಯಾಗ್ರಹ ಹಮ್ಮಿಕೊಂಡಿದೆ.

2013-–14ನೇ ಸಾಲಿನಲ್ಲಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯ ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ಮುಖಾಂತರ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಹಾಗೂ ಜಾತಿವಾರು ಸಮೀಕ್ಷೆ ನಡೆಸಿದ್ದರು. ಈ ಸಮೀಕ್ಷೆ ಉಪಯುಕ್ತವಾಗಿದೆ. ಆದರೆ, ಇದುವರೆಗೂ ಸರ್ಕಾರ ಈ ವರದಿ ಸ್ವೀಕರಿಸಿಲ್ಲ ಎಂದು ಕಾರ್ಯಕ್ರಮದ ಆಯೋಜಕ ಆರ್.ಕೆ. ಸಿದ್ದರಾಮಣ್ಣ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ದೂರಿದರು.

ಸಮೀಕ್ಷೆಗಾಗಿ ಸುಮಾರು ₨ 200 ಕೋಟಿ ವೆಚ್ಚ ಮಾಡಿತ್ತು. ಸುಮಾರು 1.33 ಲಕ್ಷ ಸಿಬ್ಬಂದಿ ಮನೆಮನೆಗೆ ತೆರಳಿ ಮಾಹಿತಿ ಸಂಗ್ರಹಿಸಿದ್ದಾರೆ. ಈ ವರದಿ ಬಹಿರಂಗ ಮಾಡಿದರೆ ಎಲ್ಲ ಹಿಂದುಳಿದ ವರ್ಗಗಳು ಸಮಾಜದ ಮುಖ್ಯವಾಹಿನಿಗೆ ಬರಲು ಸಾಧ್ಯವಾಗುತ್ತದೆ. ಸರ್ಕಾರದ ಅನುದಾನ ಪಡೆಯಲು ಅನುಕೂಲವಾಗುತ್ತದೆ ಎಂದು ವಿವರ ನೀಡಿದರು.

ADVERTISEMENT

ಜಿಲ್ಲಾ ಹಿಂದುಳಿದ ಜಾತಿಗಳ ಒಕ್ಕೂಟದ ಅಧ್ಯಕ್ಷ ವಿ.ರಾಜು ಮಾತನಾಡಿ, ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಅವರ ಶತಮಾನೋತ್ಸವದ ಅಂಗವಾಗಿ ನಗರದ ಸರ್ವಜ್ಞ ವೃತ್ತದ ಬಳಿ ₨ 5 ಕೋಟಿ ವೆಚ್ಚದಲ್ಲಿ ದೇವರಾಜ್ ಅರಸು ಭವನ ನಿರ್ಮಾಣಕ್ಕೆ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಶಂಕುಸ್ಥಾಪನೆ ನೆರವೇರಿಸಿದ್ದರು. ಕಾಮಗಾರಿಯೂ ಆರಂಭವಾಗಿತ್ತು. ಈಗ ಈ ಕಾಮಗಾರಿ ಸ್ಥಗಿತಗೊಂಡಿದೆ. ಜಿಲ್ಲಾಡಳಿತ ತ್ವರಿತ ಕಾಮಗಾರಿಗೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಒಕ್ಕೂಟದ ಅಧ್ಯಕ್ಷ ವಿ. ರಾಜು, ಪ್ರಧಾನ ಕಾರ್ಯದರ್ಶಿ ಎಸ್.ಬಿ. ಅಶೋಕ್‌ಮೂರ್ತಿ, ಖಜಾಂಚಿ ಟಿ. ರಾಜೇಶ್, ಡಾ.ಜಿ.ಡಿ. ನಾರಾಯಣಪ್ಪ, ಹುಲ್ತಿಕೊಪ್ಪ ಶ್ರೀಧರ್, ಗುಣಸೆರಾಮಸ್ವಾಮಿ, ಅರುಣ್‌ಕುಮಾರ್, ಅಬ್ದುಲ್ ವಾಯಿಬ್, ಏಸುದಾಸ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.