ADVERTISEMENT

ತಿರಸ್ಕೃತಗೊಂಡ ಅರ್ಜಿದಾರರಿಗೂ ಭೂ ಹಕ್ಕು ನೀಡಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2019, 12:48 IST
Last Updated 14 ಸೆಪ್ಟೆಂಬರ್ 2019, 12:48 IST

ಶಿವಮೊಗ್ಗ: ಜಿಲ್ಲೆಯಲ್ಲಿ ಭೂಮಿ ಹಕ್ಕುಪತ್ರಕ್ಕಾಗಿ ಅರ್ಜಿ ಸಲ್ಲಿಸಿ, ತಿರಸ್ಕೃತಗೊಂಡ ಎಲ್ಲ ಅರ್ಜಿದಾರರಿಗೂ ಹಕ್ಕುಪತ್ರ ನೀಡಬೇಕು. ಪೋಡಿ-ದುರಸ್ತಿ ಹಾಗೂ ಚೆಕ್ಕುಬಂದಿ ಮಾಡಿಕೊಡಬೇಕು ಎಂದು ಬಹುಜನ ಸಮಾಜ ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಎ.ಡಿ.ಶಿವಪ್ಪ ಆಗ್ರಹಿಸಿದರು.

ನಮೂನೆ 50, 53 ಹಾಗೂ 57ರ ಅಡಿಯಲ್ಲಿ ಜಿಲ್ಲೆಯಲ್ಲಿ ಭೂಮಿ ಹಕ್ಕುಪತ್ರಕ್ಕಾಗಿ ಸಲ್ಲಿಸಲಾಗಿದ್ದ ಅರ್ಜಿಗಳಲ್ಲಿ 2,14,962 ಅರ್ಜಿಗಳು ತಿರಸ್ಕೃತಗೊಂಡಿವೆ. ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿ ಕನಿಷ್ಠ 5 ಎಕರೆ ಒಳಗಿನ ಬಡವರಿಗೆ ಹಕ್ಕು ಪತ್ರ ನೀಡಬೇಕೆಂದು ಆಗ್ರಹಿಸಿದರು.

ಜಿಲ್ಲೆಯ ಕಂದಾಯ ಭೂಮಿಯಲ್ಲಿ ಬಗರ್ ಹುಕುಂ ಸಾಗುವಳಿ ಮಾಡಿದ ಸಾವಿರಾರು ಸಾಗುವಳಿದಾರರಿಗೆ 1979-–80ರಲ್ಲಿ ಹಕ್ಕುಪತ್ರ ನೀಡಲಾಗಿತ್ತು. ಆದರೆ, ಇಲ್ಲಿಯವರೆಗೂ ಪೋಡಿ-ದುರಸ್ತಿ ಮಾಡಿಕೊಟ್ಟಿಲ್ಲ. ಈಗ ಒಕ್ಕಲೆಬ್ಬಿಸುವ ಹುನ್ನಾರ ನಡೆದಿದೆ ಎಂದು ದೂರಿದರು.

ADVERTISEMENT

ಅರಣ್ಯ ಹಕ್ಕು ಅಧಿನಿಯಮ -2005ರ ಅಡಿ ಅರಣ್ಯವಾಸಿಗಳಾದ ಆದಿವಾಸಿ, ಬುಡಕಟ್ಟು ಜನಾಂಗದವರು ಜಮೀನು ಹಕ್ಕುಪತ್ರಕ್ಕಾಗಿ ಅರ್ಜಿ ಸಲ್ಲಿಸಿದ್ದರು. 32,364 ಅರ್ಜಿಗಳನ್ನು ತ್ವರಿತವಾಗಿ ಸಕ್ರಮಗೊಳಿಸಬೇಕು ಎಂದು ಒತ್ತಾಯಿಸಿದರು.

ಸರ್ಕಾರಿ ಜಾಗದಲ್ಲಿ ಮನೆ ಕಟ್ಟಿಕೊಂಡ ಜನರ 18,387 ಅರ್ಜಿಗಳನ್ನು ಸಕ್ರಮ ಮಾಡಬೇಕು. ಮನೆ ಹಕ್ಕುಪತ್ರ ಕೊಡಿಸಲು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಲೋಕೇಶ್ ತಮ್ಮಡಿಹಳ್ಳಿ, ಲಕ್ಷ್ಮೀಪತಿ, ಜಿ.ಸಂಗಪ್ಪ, ಡಿ.ರವಿ, ಮಾರುತಿ, ಮಂಜುನಾಥ್, ಶಿವರುದ್ರಪ್ಪ, ಎಚ್.ನರಸಪ್ಪ ಇದ್ದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.