ADVERTISEMENT

‘ಕಾಂತರಾಜ ವರದಿ ಜಾರಿಯಾದರೆ ಸಾಮಾಜಿಕ ನ್ಯಾಯ ಸಿದ್ಧಾಂತ ಅನುಷ್ಠಾನ’

​ಪ್ರಜಾವಾಣಿ ವಾರ್ತೆ
Published 29 ಫೆಬ್ರುವರಿ 2024, 15:36 IST
Last Updated 29 ಫೆಬ್ರುವರಿ 2024, 15:36 IST
ತೀ.ನ.ಶ್ರೀನಿವಾಸ್.
ತೀ.ನ.ಶ್ರೀನಿವಾಸ್.   

ಸಾಗರ: ‘ಕಾಂತರಾಜ ವರದಿ ಜಾರಿಗೆ ಬಂದರೆ ನಿಜವಾದ ಅರ್ಥದಲ್ಲಿ ಸಾಮಾಜಿಕ ನ್ಯಾಯದ ಸಿದ್ಧಾಂತ ಅನುಷ್ಠಾನಗೊಳ್ಳುತ್ತದೆ. ಆದರೆ, ಈ ವರದಿಯನ್ನು ಜಾರಿಗೊಳಿಸಲು ವಿವಿಧ ಪಕ್ಷಗಳ ಮುಖಂಡರು ವಿರೋಧಿಸುವ ಮೂಲಕ ಹಿಂದುಳಿದ ವರ್ಗಗಳ ವಿರೋಧಿ ನೀತಿಯನ್ನು ಅನುಸರಿಸುತ್ತಿದ್ದಾರೆ’ ಎಂದು ಮಲೆನಾಡು ಭೂರಹಿತರ ಹೋರಾಟ ವೇದಿಕೆ ಜಿಲ್ಲಾ ಸಂಚಾಲಕ ತೀ.ನ. ಶ್ರೀನಿವಾಸ್ ಆರೋಪಿಸಿದರು.

‘ಕಾಂತರಾಜ ವರದಿಯ ಅನುಷ್ಠಾನಕ್ಕೆ ವಿರೋಧಿಸುತ್ತಿರುವ ಮುಖಂಡರ ಪಕ್ಷಕ್ಕೆ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಜನರು ತಕ್ಕ ಪಾಠ ಕಲಿಸಬೇಕು’ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಮನವಿ ಮಾಡಿದರು.

‘ಸಾಮಾಜಿಕ ನ್ಯಾಯದ ಪ್ರತಿಪಾದಕ ಎಂದು ಹೇಳಿಕೊಳ್ಳುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಂವಿಧಾನದ ಬಗ್ಗೆ ಪ್ರತಿದಿನವೂ ಭಾಷಣ ಮಾಡುತ್ತಾರೆ. ಆದರೆ ₹ 165 ಕೋಟಿ ವೆಚ್ಚ ಮಾಡಿ ಸಿದ್ಧಗೊಂಡಿರುವ ಕಾಂತರಾಜ ವರದಿಯನ್ನು ಜಾರಿಗೊಳಿಸಲು ಅವರು ಹಿಂಜರಿಯುತ್ತಿದ್ದಾರೆ’ ಎಂದು ದೂರಿದರು.

ADVERTISEMENT

‘ಕಾಂತರಾಜ ವರದಿಯನ್ನು ಜಾರಿಗೆ ತರದಂತೆ ಹಲವು ಪ್ರಮುಖ ಸಮುದಾಯಗಳ ಮುಖಂಡರು ಸಿದ್ದರಾಮಯ್ಯ ಅವರ ಮೇಲೆ ಒತ್ತಡ ತರುತ್ತಿದ್ದಾರೆ. ಹೀಗಾಗಿ ಸಿದ್ದರಾಮಯ್ಯ ವರದಿ ಜಾರಿಗೆ ಹಿಂದೇಟು ಹಾಕುತ್ತಿದ್ದಾರೆ’ ಎಂದು ಆರೋಪಿಸಿದರು.

ಕೂಡಲೆ ಕಾಂತರಾಜ ವರದಿ ಜಾರಿಗೊಳ್ಳದಿದ್ದರೆ ಹಿಂದುಳಿದ ಸಮುದಾಯದ ಎಲ್ಲರೂ ಒಟ್ಟಾಗಿ ಪ್ರತಿಭಟನೆ ನಡೆಸುವುದು ಅನಿವಾರ್ಯವಾಗುತ್ತದೆ ಎಂದು ಎಚ್ಚರಿಸಿದರು.

ಪ್ರಮುಖರಾದ ಅಮೃತ್ ರಾಸ್, ಸೈಯದ್ ನೂರುಲ್ಲಾ ಹಕ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.