ADVERTISEMENT

ತಾಯಿ–ಮಗುವಿನ ಜೀವ ಉಳಿಸಿದ ಎನ್ಎಚ್ ವೈದ್ಯರ ತಂಡ

-

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2025, 4:43 IST
Last Updated 12 ಡಿಸೆಂಬರ್ 2025, 4:43 IST

ಶಿವಮೊಗ್ಗ: ತೀವ್ರ ರಕ್ತದೊತ್ತಡದ (ಪ್ರೀ ಎಕ್ಲಾಂಪ್ಸಿಯಾ) ಎಂಬ ಅಪಾಯಕಾರಿ ಸಮಸ್ಯೆಗೆ ಒಳಗಾಗಿದ್ದ ಗರ್ಭಿಣಿಗೆ ಸಹ್ಯಾದ್ರಿ ನಾರಾಯಣ ಆಸ್ಪತ್ರೆಯ ವೈದ್ಯರು ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸುವ ಮೂಲಕ ತಾಯಿಗೆ ದೃಷ್ಟಿ ಮರಳಿಸಿದ್ದಾರೆ. ಅವಧಿ ಪೂರ್ವ ಜನಿಸಿದ ಮಗುವಿಗೆ ಜೀವದಾನ ಮಾಡಿದ್ದು, ತಾಯಿ–ಮಗು ಇಬ್ಬರೂ ಆರೋಗ್ಯವಾಗಿದ್ದಾರೆ.

ಈ ಶಸ್ತ್ರಚಿಕಿತ್ಸೆಯ ಬಗ್ಗೆ ಆಸ್ಪತ್ರೆಯ ಪ್ರಸೂತಿ ಮತ್ತು ಸ್ತ್ರೀರೋಗ ವಿಭಾಗದ ತಜ್ಞ ವೈದ್ಯ ರಾಘವೇಂದ್ರ ಭಟ್ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

25 ವರ್ಷದ ಯುವತಿ ಗರ್ಭಿಣಿಯಾಗಿ ಎಲ್ಲವೂ ಸರಿಯಾಗಿದ್ದರೂ, ಅವರ ರಕ್ತದೊತ್ತಡ ಮಾತ್ರ ನಿಯಂತ್ರಣಕ್ಕೆ ಬರುತ್ತಿರಲಿಲ್ಲ. ಏಳನೇ ತಿಂಗಳಿಗೆ ಕಾಲಿಟ್ಟಾಗ, ಅವರಿಗೆ ದಿಢೀರನೇ ಕಣ್ಣು ಕಾಣಿಸದಂತಾಯಿತು. ಪರಿಸ್ಥಿತಿ ತೀವ್ರ ಹದಗೆಡುತ್ತಿದ್ದರಿಂದ ಸಹ್ಯಾದ್ರಿ ನಾರಾಯಣ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ಕರೆತರಲಾಯಿತು.

ADVERTISEMENT

ಆಸ್ಪತ್ರೆಗೆ ಬಂದಾಗ ರೋಗಿಯ ಸ್ಥಿತಿ ಗಂಭೀರವಾಗಿತ್ತು. ಅಧಿಕ ರಕ್ತದೊತ್ತಡದಿಂದಾಗಿ ‘ಎಕ್ಲಾಂಪ್ಸಿಯಾ' (ಭಾರೀ ಮೂರ್ಛೆ ಬರುವ ಸ್ಥಿತಿ) ಅಪಾಯದಲ್ಲಿದ್ದರು. ಆ ತಕ್ಷಣವೇ ಸ್ತ್ರೀರೋಗ ತಜ್ಞ ರಾಘವೇಂದ್ರ ಭಟ್ ನೇತೃತ್ವದಲ್ಲಿ ತುರ್ತು ಚಿಕಿತ್ಸೆ ಆರಂಭಿಸಿದ ತಂಡ, ‘ರೆಟಿನಾ ಡಿಟ್ಯಾಚ್‌ಮೆಂಟ್' (ಕಣ್ಣಿನ ಪರದೆಯ ಬೇರ್ಪಡಿಕೆ) ಸಮಸ್ಯೆ ಮನಗಂಡು ತುರ್ತಾಗಿ ಶಸ್ತ್ರಚಿಕಿತ್ಸೆ (ಸಿಸೇರಿಯನ್) ಮಾಡಿ ಮಗುವನ್ನು ಹೊರತೆಗೆಯಲು ತೀರ್ಮಾನಿಸಿತು. ಅಂದು ಕೇವಲ 1 ಕೆ.ಜಿ ತೂಕದ ಅವಧಿಪೂರ್ವ ಶಿಶುವಿಗೆ ಆ ತಾಯಿ ಜನ್ಮ ನೀಡಿದ್ದರು ಎಂದರು.‌

ತಾಯಿ ಮತ್ತು ಮಗು ಇಬ್ಬರೂ ಐಸಿಯುನಲ್ಲಿ ತೀವ್ರ ಆರೋಗ್ಯ ಸವಾಲುಗಳನ್ನು ಎದುರಿಸಿದರು. ತಾಯಿಗೆ ಮೆದುಳಿನ ತೊಂದರೆಯಾದ ‘ಎನ್ಸೆಫಲೋಪತಿ' ಕಾಣಿಸಿಕೊಂಡಾಗ, ಸಹ್ಯಾದ್ರಿ ನಾರಾಯಣ ಆಸ್ಪತ್ರೆ ನರರೋಗ ತಜ್ಞೆ ರೂಪಾ ಅವರು ಅದನ್ನೂ ಯಶಸ್ವಿಯಾಗಿ ಸರಿಪಡಿಸಿದರು. ಐಸಿಯುನಲ್ಲಿ ನಾಲ್ಕು ದಿನ ಇದ್ದ ನಂತರ, ತಾಯಿಯನ್ನು ವಾರ್ಡ್‌ಗೆ ಸ್ಥಳಾಂತರಿಸಲಾಯಿತು. ಮೂರು ದಿನಗಳಲ್ಲಿ ಆಕೆಯ ದೃಷ್ಟಿ ಸುಧಾರಿಸಿತು ಎಂದರು.

ಡಾ. ಶಶಿಧರ ಹೆಗ್ಡೆ ಮಾತನಾಡಿ, ಅವಧಿ ಪೂರ್ವ ಜನಿಸಿದ ಮಗುವನ್ನು ಎನ್‌ಐಸಿಯುನಲ್ಲಿ ಇಡಲಾಯಿತು. ಮಗುವಿನ ಬಹುತೇಕ ಅಂಗಗಳು ಪೂರ್ಣವಾಗಿ ಬೆಳೆದಿಲ್ಲದ ಕಾರಣ, ಅದನ್ನು 45 ದಿನಗಳ ಕಾಲ ತೀವ್ರ ನಿಗಾದಲ್ಲಿ ಇಡಬೇಕಾಯಿತು. ಹೃದಯ ಬಡಿತ ಕಡಿಮೆ ಇತ್ತು, ಉಸಿರಾಡಲು ಕಷ್ಟವಿತ್ತು. ಹಾಗಾಗಿ, ಮಗುವನ್ನು ನಿರಂತರ ಆಮ್ಲಜನಕ ಬೆಂಬಲದೊಂದಿಗೆ ವೆಂಟಿಲೇಟರ್‌ನಲ್ಲಿ ಇಡಲಾಗಿತ್ತು. ಒಮ್ಮೆ ಹೃದಯ ಬಡಿತ ನಿಂತಾಗ ಸಿಪಿಆರ್ ನೀಡಿ ಮತ್ತೆ ಚೇತರಿಸಿಕೊಂಡಿತು ಎಂದರು.

ಸಹ್ಯಾದ್ರಿ ನಾರಾಯಣ ಆಸ್ಪತ್ರೆಯ ಮಾರುಕಟ್ಟೆ ವಿಭಾಗದ ಮುಖ್ಯಸ್ಥ  ಎಸ್.ಎನ್.ಶೈಲೇಶ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.