ಶಿಕಾರಿಪುರದ ಎಸ್‌ಬಿಐ ಆಧಾರ್ ಸೇವಾ ಕೇಂದ್ರದಲ್ಲಿ ಆಧಾರ್ ತಿದ್ದಪಡಿಗೆ ಸರತಿ ನಿಂತಿರುವ ಜನ
ಶಿಕಾರಿಪುರ: ಆಧಾರ್ ದಾಖಲೆ ತಿದ್ದುಪಡಿ ಮಾಡುವುದಕ್ಕೆ ತಾಲ್ಲೂಕಿನ ಜನರು ತೀವ್ರ ತೊಂದರೆ ಎದುರಿಸುತ್ತಿದ್ದಾರೆ. ಕೆಲಸವನ್ನೆಲ್ಲ ಬಿಟ್ಟು ನಿತ್ಯ ಕಚೇರಿಗೆ ಅಲೆಯುವುದೇ ಕಾಯಕವಾದರೂ ಸಮಸ್ಯೆಗೆ ಪರಿಹಾರ ದೊರೆಯುತ್ತಿಲ್ಲ.
ಪಟ್ಟಣದ ಅಂಚೆ ಕಚೇರಿ, ಭಾರತೀಯ ಸ್ಟೇಟ್ ಬ್ಯಾಂಕ್ ಶಾಖೆಗಳಲ್ಲಿ ಮಾತ್ರ ಆಧಾರ್ ತಿದ್ದುಪಡಿ ಕೇಂದ್ರಗಳಿವೆ. ಅಲ್ಲಿ ಮೊದಲು ಟೋಕನ್ ಪಡೆದ 20 ಜನರಿಗೆ ಮಾತ್ರ ಸೇವೆ ಸಿಗುತ್ತದೆ. ಟೋಕನ್ ಪಡೆಯುವುದಕ್ಕಾಗಿ ಜನರು ಬೆಳಿಗ್ಗೆ 4 ಗಂಟೆಗೆ ಬಂದು ಸರದಿಯಲ್ಲಿ ನಿಲ್ಲುತ್ತಿದ್ದಾರೆ. 5 ಗಂಟೆಗೆ ಬಂದರೆ 20ಕ್ಕಿಂತ ಹೆಚ್ಚು ಜನರಿರುತ್ತಾರೆ ಎನ್ನುವ ಕಾರಣಕ್ಕೆ ವಾಪಸ್ ಹೋಗುವ ಸ್ಥಿತಿ ಇದೆ.
ನಿತ್ಯ 150ಕ್ಕೂ ಹೆಚ್ಚು ಜನರು ಆಧಾರ್ ತಿದ್ದುಪಡಿಗಾಗಿ ಪಟ್ಟಣಕ್ಕೆ ಬರುತ್ತಾರೆ. ಅದರಲ್ಲಿ 40ರಿಂದ 50 ಜನರಿಗೆ ಮಾತ್ರ ಸೇವೆ ಸಿಗುತ್ತಿದೆ. ಹಲವು ತಾಂತ್ರಿಕ ಕಾರಣಕ್ಕೆ ತಿರಸ್ಕೃತ ಆಗುವ ಕಾರ್ಡ್‌ಗಳ ಸಂಖ್ಯೆಯೂ ಹೆಚ್ಚಾಗಿದೆ. ಅವರು ಪುನಃ ಹೊಸದಾಗಿ ತಿದ್ದುಪಡಿ ಮಾಡಿಸುವ ಅನಿವಾರ್ಯತೆ ಎದುರಾಗಿದೆ.
ಆಧಾರ್ ಕಾರ್ಡ್ ತಿದ್ದುಪಡಿ ಸಮರ್ಪಕವಾಗಿ ಆಗುತ್ತಿಲ್ಲ ಎಂದು ಜನರು ಶಾಸಕರ ಮನೆಗೆ ತೆರಳಿ ಅಳಲು ತೋಡಿಕೊಂಡಿದ್ದಾರೆ. ತಹಶೀಲ್ದಾರ್ ಕಚೇರಿಗೆ ತೆರಳಿ ಮನವಿ ಸಲ್ಲಿಸಿದ್ದಾರೆ. ಆದರೂ ಸಮಸ್ಯೆ ಪರಿಹಾರ ಆಗಿಲ್ಲ. ಹಣ ಇದ್ದವರು ಶಿವಮೊಗ್ಗ, ಬೆಂಗಳೂರಿಗೆ ತೆರಳಿ ತಿದ್ದುಪಡಿ ಮಾಡಿಸುತ್ತಿದ್ದಾರೆ. ಗ್ರಾಮೀಣ ಪ್ರದೇಶದ ಬಡವರು ಇಲ್ಲಿಯೇ ತಿದ್ದುಪಡಿ ಮಾಡಿಸುವುದಕ್ಕೆ ನಿತ್ಯ ಕಚೇರಿ ಅಲೆಯುತ್ತಿದ್ದಾರೆ ಎಂದು ಸಾರ್ವಜನಿಕರೊಬ್ಬರು ಅಳಲು ತೋಡಿಕೊಂಡರು.
ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಳ: ಸ್ಕಾಲರ್‌ಶಿಪ್ ಅರ್ಜಿ ಹಾಕಲು, ವಿದ್ಯಾರ್ಥಿ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಮಾಡಲು, ಶಾಲೆ ದಾಖಲೆ, ಬ್ಯಾಂಕ್ ದಾಖಲೆಯಲ್ಲಿ ಇದ್ದಂತೆ ಆಧಾರ್ ಕಾರ್ಡ್‌ನಲ್ಲಿ ಹೆಸರು, ತಂದೆ ಹೆಸರು, ವಿಳಾಸ, ಇನಿಶಿಯಲ್, ಜನ್ಮದಿನಾಂಕ ಒಂದೇ ಆಗಬೇಕಿದೆ. ತಾಲ್ಲೂಕಿನ 1,400 ವಿದ್ಯಾರ್ಥಿಗಳಲ್ಲಿ 250ಕ್ಕೂ ಹೆಚ್ಚು ವಿದ್ಯಾರ್ಥಿಗಳದ್ದು ವ್ಯತ್ಯಾಸವಿದೆ. ಅದನ್ನು ಸರಿಪಡಿಸದಿದ್ದರೆ ಸ್ಕಾಲರ್‌ಶಿಪ್ ಬರುವುದಿಲ್ಲ ಎನ್ನುವ ಕಾರಣಕ್ಕೆ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ದಾಖಲೆ ತಿದ್ದುಪಡಿಗೆ ಆಧಾರ್ ಕೇಂದ್ರಕ್ಕೆ ಎಡತಾಕುತ್ತಿದ್ದಾರೆ.
ತಪ್ಪಾಗುವಿಕೆ ಹೆಚ್ಚಳ: ಆಧಾರ್ ಕೇಂದ್ರದ ಸಿಬ್ಬಂದಿ ಹೇಳುವ ದಾಖಲೆಯನ್ನು ಜನರು ತರುವುದಿಲ್ಲ. ಜನರು ನೀಡಿದ ದಾಖಲೆ ಮೂಲಕ ತಿದ್ದುಪಡಿ ಮಾಡಿದರೆ ಕಾರ್ಡ್ ತಿರಸ್ಕೃತ ಆಗುತ್ತದೆ. ದಾಖಲೆ ಹೊಂದಾಣಿಕೆ, ತಾಂತ್ರಿಕ ಸಮಸ್ಯೆ ಸೇರಿ ಶೇ 30–40ರಷ್ಟು ಕಾರ್ಡ್ ತಿರಸ್ಕೃತಗೊಳ್ಳುತ್ತಿವೆ. ಮೂರು ತಿಂಗಳಿಂದ ಹೊಸ ಕಾರ್ಡ್ ಯಾವುದೂ ಜನರೇಟ್ ಆಗಿಲ್ಲ. ಕಾರ್ಡ್ ತಿರಸ್ಕೃತಗೊಂಡರೆ ಜನರು ಸಿಬ್ಬಂದಿ ಜತೆ ಮಾತಿನ ಚಕಮಕಿ ನಡೆಸುತ್ತಾರೆ. ಆನ್‌ಲೈನ್‌ನಲ್ಲಿ ದೂರು ದಾಖಲಿಸುವುದು ಮಾಡುತ್ತಾರೆ. ಸರಿಯಾದ ದಾಖಲೆ ಮಾಹಿತಿ, ಪರಿಶೀಲನೆ ಕೆಲಸಕ್ಕೆ ಹೆಚ್ಚಿನ ಸಮಯ ವ್ಯಯವಾಗುತ್ತಿದೆ.
ಹೆಚ್ಚಿನ ಕೇಂದ್ರಗಳಿಲ್ಲ: ಈ ಮೊದಲು ಪಟ್ಟಣದಲ್ಲಿ ಹೆಚ್ಚಿನ ಆಧಾರ್ ಸೇವಾ ಕೇಂದ್ರಗಳಿದ್ದವು. ದಿನಕ್ಕೆ ಎಷ್ಟು ಬೇಕಾದರೂ ಕಾರ್ಡ್ ತಿದ್ದುಪಡಿ ಮಾಡಲಾಗುತ್ತಿತ್ತು. ಈಗ ಎರಡು ಕೇಂದ್ರವಿದ್ದು, ದಿನಕ್ಕೆ 20 ಮಾತ್ರ ತಿದ್ದುಪಡಿ ಆಗುತ್ತಿವೆ. ಸರ್ವರ್ ಸಮಸ್ಯೆ ಕಾರಣಕ್ಕೆ ಒಮ್ಮೊಮ್ಮೆ 10 ಜನರಿಗೂ ಸೇವೆ ತಲುಪುವುದಿಲ್ಲ. ತಹಶೀಲ್ದಾರ್ ಕಚೇರಿಯಲ್ಲಿ ಕೇಂದ್ರ ತೆರೆಯುವುದಕ್ಕೆ ಸಿಬ್ಬಂದಿ ಕೊರತೆ ಪ್ರಮುಖ ಸಮಸ್ಯೆಯಾಗಿದೆ. ಅದನ್ನು ನಿವಾರಿಸಬೇಕು. ಕರ್ನಾಟಕ ಒನ್, ಗ್ರಾಮ ಒನ್ ಕೇಂದ್ರಗಳು, ತಹಶೀಲ್ದಾರ್ ಕಚೇರಿಯಲ್ಲಿ ತಿದ್ದುಪಡಿ ಕೇಂದ್ರ ಆರಂಭಿಸಬೇಕು. ಆಗ ಒತ್ತಡ ಕಡಿಮೆ ಆಗಬಹುದು ಎನ್ನುವುದು ನಾಗರಿಕರ ಒತ್ತಾಯ.
ಅಂಚೆ ಕಚೇರಿಯಲ್ಲಿನ ಆಧಾರ್ ಸೇವಾ ಕೇಂದ್ರಕ್ಕೆ ಭೇಟಿನೀಡಿ ಜನರ ಸಮಸ್ಯೆ ಆಲಿಸಿದ್ದೇನೆ. ಹೊಸ ಕೇಂದ್ರ ಆರಂಭಕ್ಕೆ ಜಿಲ್ಲಾಧಿಕಾರಿಗೆ ಸೂಚಿಸಿದ್ದು, ಆದಷ್ಟು ಬೇಗ ಕ್ರಮ ಕೈಗೊಳ್ಳುವ ನಿರೀಕ್ಷೆ ಇದೆ.ಬಿ.ವೈ.ವಿಜಯೇಂದ್ರ ಶಾಸಕ, ಶಿಕಾರಿಪುರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.