ADVERTISEMENT

ವರ್ತಮಾನದ ಸಂಕಟ; ಕೋಮುವಾದ ನಿರ್ಮೂಲನೆಯೇ ಉತ್ತರ

ಕರ್ನಾಟಕ ದಲಿತ ನೌಕರರ ಒಕ್ಕೂಟ, ಡಿಎಸ್‌ಎಸ್‌ನಿಂದ ನಾರಾಯಣಗುರು, ಪೆರಿಯಾರ್ ಜಯಂತಿ ಆಚರಣೆ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2022, 3:09 IST
Last Updated 20 ಸೆಪ್ಟೆಂಬರ್ 2022, 3:09 IST
ಶಿವಮೊಗ್ಗದಲ್ಲಿ ಭಾನುವಾರ ಆಯೋಜಿಸಿದ್ದ ನಾರಾಯಣಗುರು ಮತ್ತು ಪೆರಿಯಾರ್‌ ರಾಮಸ್ವಾಮಿ ನಾಯ್ಕರ್ ಅವರ ಜಯಂತಿ ಕಾರ್ಯಕ್ರಮವನ್ನು ಪ್ರಾಧ್ಯಾಪಕ ಡಾ. ಮೋಹನ್ ಚಂದ್ರಗುತ್ತಿ ಉದ್ಘಾಟಿಸಿದರು
ಶಿವಮೊಗ್ಗದಲ್ಲಿ ಭಾನುವಾರ ಆಯೋಜಿಸಿದ್ದ ನಾರಾಯಣಗುರು ಮತ್ತು ಪೆರಿಯಾರ್‌ ರಾಮಸ್ವಾಮಿ ನಾಯ್ಕರ್ ಅವರ ಜಯಂತಿ ಕಾರ್ಯಕ್ರಮವನ್ನು ಪ್ರಾಧ್ಯಾಪಕ ಡಾ. ಮೋಹನ್ ಚಂದ್ರಗುತ್ತಿ ಉದ್ಘಾಟಿಸಿದರು   

ಶಿವಮೊಗ್ಗ: ಮೇಲ್ವರ್ಗದವರಿಂದ ವಿರಚಿತವಾದ ಇತಿಹಾಸವನ್ನೇ ಪರಮ ಸತ್ಯವೆಂದು ಭಾವಿಸಲಾಗಿದೆ ಮತ್ತು ಪ್ರತಿನಿತ್ಯ ಅದರ ಸ್ಮರಣೆ ಹಾಗೂ ಆನಂದದಲ್ಲಿ ನಾವಿದ್ದೇವೆ. ಇಂತ ಹೊತ್ತಲ್ಲಿ ತಳಸಮುದಾಯಗಳ ಚರಿತ್ರೆ ಕಟ್ಟುವುದು ಯಾವಾಗ? ಬದುಕನ್ನು ಕಟ್ಟಿಕೊಳ್ಳುವುದು ಯಾವಾಗ? ಈ ನಿಟ್ಟಿನಲ್ಲಿ ಚಿಂತಿಸಿ, ಪ್ರಾಯೋಗಿಕ ವಿಧಾನಗಳ ಬಳಸಿ ಪರಿವರ್ತನೆ ತರುವ ಮೂಲಕ ತಳಸಮುದಾಯಗಳಿಗೆ ಘನತೆ, ಸ್ವಾಭಿಮಾನ ದೊರಕಿಸಿ ಕೊಟ್ಟವರು ನಾರಾಯಣಗುರು ಎಂದು ಸಹ್ಯಾದ್ರಿ ಕಾಲೇಜಿನ ಪ್ರಾಧ್ಯಾಪಕ ಡಾ. ಮೋಹನ್ ಚಂದ್ರಗುತ್ತಿ ಹೇಳಿದರು.

ಶಿವಮೊಗ್ಗದಲ್ಲಿ ಭಾನುವಾರ ಕರ್ನಾಟಕ ದಲಿತ ನೌಕರರ ಒಕ್ಕೂಟ, ಶಿವಮೊಗ್ಗ ಮತ್ತು ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಂಟಿಯಾಗಿ ಆಯೋಜಿಸಿದ್ದ ನೆಲಮೂಲದ ಚಿಂತಕರಾದ ನಾರಾಯಣಗುರು ಮತ್ತು ಪೆರಿಯಾರ್‌ ರಾಮಸ್ವಾಮಿ ನಾಯ್ಕರ್ ಅವರ ಜಯಂತಿ ಕಾರ್ಯಕ್ರಮದಲ್ಲಿ ಅವರು ವಿಶೇಷ ಉಪನ್ಯಾಸ ನೀಡಿದರು.

ನಾರಾಯಣಗುರು ಮತ್ತು ಪೆರಿಯಾರ್ ನಮ್ಮ ವರ್ತಮಾನದ ಸಂಕಟ ಮತ್ತು ಸವಾಲುಗಳಿಗೆ ಪರಿಹಾರವಾಗಬಲ್ಲರು. ಪ್ರತಿನಿತ್ಯ ನಮ್ಮೆದುರಿಗೆ ಸನಾತನ ಮಾದರಿಗಳು ವಿಜೃಂಭಿಸುತ್ತಿವೆ, ಅವು ನಮ್ಮ ಎಲ್ಲಾ ತಳಮೂಲದ ತಿಳಿವಕೆಗಳನ್ನು ಅಳಿಸಿ ನಮ್ಮನ್ನು, ನಮ್ಮ ಯುವ ತಲೆಮಾರನ್ನು ವಿಸ್ಮೃತಿಗೆ ತಳ್ಳುತ್ತಿವೆ. ಈ ನಿಟ್ಟಿನಲ್ಲಿ ಮುಂದಿನ ತಲೆಮಾರುಗಳ ಬದುಕನ್ನು ನೆನಸಿಕೊಂಡರೆ ಬಹಳ ಆತಂಕವಾಗುತ್ತದೆ. ಈ ಆತಂಕದ ಹೊತ್ತಿನಲ್ಲಿ ಮುಂದಿನ ತಲೆಮಾರಿಗೆ ಆದರ್ಶದ ಮಾದರಿಗಳನ್ನು ಕಟ್ಟುವ ಹೊಣೆಗಾರಿಕೆ ನಮ್ಮ ಮೇಲಿದೆ ಎಂದರು.

ADVERTISEMENT

ಕುವೆಂಪು ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಡಾ. ಸಣ್ಣರಾಮ ನಮ್ಮ ಮೆದುಳನ್ನು ಹೊಕ್ಕು ನಮ್ಮನ್ನು ಆಳುತ್ತಿರುವ ಬ್ರಾಹ್ಮಣ್ಯವನ್ನು ಹೊರತೆಗೆಯಲು ಕುವೆಂಪು ಹೇಳಿದಂತೆ ವೈಚಾರಿಕತೆಯ ಜೋಡು ನಳಿಕೆ ಬಂದೂಕಿನಿಂದ ಗುಂಡು ಹೊಡೆಯಬೇಕು, ಆ ಗುಂಡು ನಮ್ಮ ತಲೆಗೆ ತಾಗಬೇಕು. ಆಗ ನಮ್ಮತಲೆಯಲ್ಲಿರುವ ಕೋಮುವಾದದ ಅಮಲು ನಿರ್ಮೂಲನೆಯಾಗುತ್ತದೆ, ಸ್ವಚ್ಚ ಸಮಾಜ ನಿರ್ಮಾಣವಾಗುತ್ತದೆ ಎಂದು ಹೇಳಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತಾಡಿದ ಡಿಎಸ್‍ಎಸ್ ರಾಜ್ಯ ಸಂಚಾಲಕ ಎಂ ಗುರುಮೂರ್ತಿ, ನಾರಾಯಣ ಗುರು, ಪೆರಿಯಾರ್‌ ಅವರ ಸುಧಾರಣಾ ಕ್ರಮಗಳು ಶೋಷಿತ ಸಮುದಾಯಗಳಿಗೆ ಪ್ರೇರಣೆ ಆಗಬೇಕು ಎಂದರು.

ಉಪನ್ಯಾಸ ನೀಡಿದ ಮತ್ತೋರ್ವ ವಿದ್ವಾಂಸ, ಸಾಗರದ ಐಟಿಐನ ಆಡಳಿತಾಧಿಕಾರಿ ಸೂರ್ಯಪ್ರಕಾಶ್ ಮಾತನಾಡಿ, ಇತಿಹಾಸದ ಮಹಾನ್ ಪುರುಷರ ಚಿಂತನೆಗಳು ಪ್ರಸ್ತುತದಲ್ಲಿ ಸುಳ್ಳಿನ ಉಸುಕಿನಲ್ಲಿ ಹೂತು ಹೋಗಿರುವ ಸಂದರ್ಭದಲ್ಲಿ
ಇಂತಹ ವಿಚಾರ ಗೋಷ್ಠಿ ಮೂಲಕ ಪೆರಿಯಾರ್‌ ಚಿಂತನೆ ಗಳನ್ನು ಮುಂದಿನ ಜನಾಂಗಕ್ಕೆ ತಲುಪಿಸುವ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ ಎಂದರು. ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕ ಬಸವರಾಜಪ್ಪ, ಎಂ.ಗುರುಮೂರ್ತಿ
ಡಾ. ಸಣ್ಣರಾಮ ಅವನ್ನು ಸನ್ಮಾನಿಸಲಾಯಿತು.

ಪ್ರೊ. ಬಿ.ಎಲ್.ರಾಜು ಅಧ್ಯಕ್ಷತೆ ವಹಿಸಿದ್ದರು. ಆರ್ ಟಿಓ ಅಧಿಕಾರಿ ಎನ್. ಮಂಜುನಾಥ್ ಪ್ರಾಸ್ತಾವಿಕವಾಗಿ ಮಾತಾಡಿದರು. ವೇದಿಕೆಯಲ್ಲಿ ನಿವೃತ್ತ ಪ್ರಾಂಶುಪಾಲ ಶಿವಬಸಪ್ಪ, ಸಾವಿತ್ರಿಬಾಯಿಫುಲೆ ಶಿಕ್ಷಕಿಯರ ಸಂಘದ ಅಧ್ಯಕ್ಷೆ ರಾಧಮ್ಮ ಉಪಸ್ಥಿದ್ದರು.

ಶಿಕ್ಷಕರಾದ ಅಣ್ಣಪ್ಪ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕ ಮಾಲತೇಶ್ ಸ್ವಾಗತಿಸಿದರು ನೀಲಪ್ಪ
ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.