ADVERTISEMENT

ಸಹ್ಯಾದ್ರಿನಾರಾಯಣ ಆಸ್ಪತ್ರೆಯಲ್ಲಿ 1,000 ಪ್ರಾಸ್ಟೇಟ್ ಶಸ್ತ್ರಚಿಕಿತ್ಸೆ ಯಶಸ್ವಿ

ಮೂತ್ರ ವಿಸರ್ಜನೆ ಸಂಬಂಧಿತ ಸಮಸ್ಯೆ; ಸಹ್ಯಾದ್ರಿ ನಾರಾಯಣ ಆಸ್ಪತ್ರೆಯ ಮಹತ್ವದ ಸಾಧನೆ

​ಪ್ರಜಾವಾಣಿ ವಾರ್ತೆ
Published 25 ಜನವರಿ 2026, 4:29 IST
Last Updated 25 ಜನವರಿ 2026, 4:29 IST
ಡಾ. ಯು.ಕೆ. ಅವಿನಾಶ್
ಡಾ. ಯು.ಕೆ. ಅವಿನಾಶ್   

ಶಿವಮೊಗ್ಗ: ನಗರದ ಸಹ್ಯಾದ್ರಿ ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯು ಪ್ರಾಸ್ಟೇಟ್ ಸಮಸ್ಯೆಗಳಿಗೆ ಪರಿಹಾರ ನೀಡುವ ಅತ್ಯಾಧುನಿಕ ‘ಟ್ರಾನ್ಸ್ಯುರೆಥ್ರಲ್ ರಿಸೆಕ್ಷನ್ ಆಫ್ ದಿ ಪ್ರಾಸ್ಟೇಟ್’ (ಟಿಯುಆರ್‌ಪಿ) ಶಸ್ತ್ರಚಿಕಿತ್ಸೆಯನ್ನು 1000ಕ್ಕೂ ಹೆಚ್ಚು ರೋಗಿಗಳಿಗೆ ಯಶಸ್ವಿಯಾಗಿ ನಡೆಸಿದೆ ಎಂದು ಕನ್ಸಲ್ಟೆಂಟ್ ಯೂರಲಾಜಿಸ್ಟ್ ಡಾ. ಪ್ರಭುಲಿಂಗ ವೈ. ಕೊಣ್ಣೂರ ತಿಳಿಸಿದರು.

‘ಪ್ರಾಸ್ಟೇಟ್ ಗ್ರಂಥಿಯ ಹಿಗ್ಗುವಿಕೆಯಿಂದ ಉಂಟಾಗುವ ಮೂತ್ರ ವಿಸರ್ಜನೆ ಸಂಬಂಧಿತ ಸಮಸ್ಯೆಗಳಿಗೆ ಈ ಶಸ್ತ್ರಚಿಕಿತ್ಸೆಯನ್ನು ಮಾಡಲಾಗುತ್ತದೆ. ನಾನು ಹಾಗೂ ಡಾ.ಯು.ಕೆ.ಅವಿನಾಶ್ ನೇತೃತ್ವದ ತಜ್ಞರ ತಂಡ ಯಶಸ್ವಿಯಾಗಿ ನೆರವೇರಿಸಿದೆ’ ಎಂದು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದರು.

ಈ ಸಾಧನೆಯಿಂದ ಶಿವಮೊಗ್ಗ ಹಾಗೂ ಸುತ್ತಮುತ್ತಲಿನ ಜಿಲ್ಲೆಗಳ ರೋಗಿಗಳಿಗೆ ಪ್ರಾಸ್ಟೇಟ್ ಚಿಕಿತ್ಸೆಯ ಪ್ರಮುಖ ಕೇಂದ್ರವಾಗಿ ಸಹ್ಯಾದ್ರಿ ನಾರಾಯಣ ಆಸ್ಪತ್ರೆ ಗುರುತಿಸಿಕೊಂಡಿದೆ ಎಂದರು.

ADVERTISEMENT

ಆರಂಭದಲ್ಲಿ ಆಸ್ಪತ್ರೆಯು ಸಾಂಪ್ರದಾಯಿಕ ಎಲೆಕ್ಟ್ರೋಕಾಟರಿ ತಂತ್ರಜ್ಞಾನವನ್ನು ಬಳಸಿಕೊಂಡು ಟಿಯುಆರ್‌ಪಿ ಶಸ್ತ್ರಚಿಕಿತ್ಸೆ ನಡೆಸುತ್ತಿತ್ತು. ಆದರೆ ವೈದ್ಯಕೀಯ ಕ್ಷೇತ್ರದ ಬೆಳವಣಿಗೆಗೆ ತಕ್ಕಂತೆ ಇದೀಗ ಸುಧಾರಿತ 100 ವ್ಯಾಟ್ ಹೋಲ್ಮಿಯಂ ಲೇಸರ್ ತಂತ್ರಜ್ಞಾನ ಅಳವಡಿಸಿಕೊಳ್ಳಲಾಗಿದೆ. ಶಸ್ತ್ರಚಿಕಿತ್ಸೆ ವೇಳೆ ರಕ್ತನಾಳಗಳು ಸೀಲ್ ಆಗುವುದರಿಂದ ರಕ್ತಸ್ರಾವ ತೀರಾ ಕಡಿಮೆ ಇರುತ್ತದೆ ಎಂದು ತಿಳಿಸಿದರು. 

ಈ ವಿಧಾನವು ವಯಸ್ಸಾದವರು, ರಕ್ತ ತೆಳುವಾಗುವ ಔಷಧ ಸೇವಿಸುವ ರೋಗಿಗಳು ಸೇರಿದಂತೆ ಹಲವರಿಗೆ ಹೆಚ್ಚು ಸುರಕ್ಷಿತವಾಗಿದೆ. ನೋವು, ಆಸ್ಪತ್ರೆಯಲ್ಲಿ ಇರಬೇಕಾದ ಅವಧಿ ಹಾಗೂ ಕ್ಯಾಥೆಟರ್ ಅವಶ್ಯಕತೆಯೂ ಕಡಿಮೆಯಾಗುತ್ತದೆ. ದೊಡ್ಡ ಗಾತ್ರದ ಪ್ರಾಸ್ಟೇಟ್ ಸಮಸ್ಯೆಗಳಿಗೂ ಇದು ಪರಿಣಾಮಕಾರಿ ಚಿಕಿತ್ಸೆಯಾಗಿದೆ ಎಂದು ವಿವರಿಸಿದರು.

ಮೂತ್ರ ವಿಸರ್ಜನೆಯಲ್ಲಿ ತೊಂದರೆ, ಮೂತ್ರದ ಹರಿವು ಕಡಿಮೆಯಾಗುವುದು, ರಾತ್ರಿ ವೇಳೆ ಪದೇಪದೇ ಮೂತ್ರಕ್ಕೆ ಹೋಗುವುದು ಅಥವಾ ಮೂತ್ರಕೋಶ ಸಂಪೂರ್ಣ ಖಾಲಿಯಾಗದಿರುವ ಲಕ್ಷಣಗಳು ಕಂಡುಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು. ಆರಂಭಿಕ ಹಂತದಲ್ಲೇ ರೋಗ ಪತ್ತೆಯಾದರೆ ಚಿಕಿತ್ಸೆ ಹೆಚ್ಚು ಪರಿಣಾಮಕಾರಿಯಾಗುತ್ತದೆ ಎಂದರು.

ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ವರ್ಗೀಸ್ ಪಿ. ಜಾನ್ ಮಾತನಾಡಿ, ಸಹ್ಯಾದ್ರಿ ನಾರಾಯಣ ಆಸ್ಪತ್ರೆಯಲ್ಲಿ ಅತ್ಯಾಧುನಿಕ ಲೇಸರ್ ಶಸ್ತ್ರಚಿಕಿತ್ಸೆ ಲಭ್ಯವಿರುವುದರಿಂದ, ಮಲೆನಾಡು ಹಾಗೂ ನೆರೆಯ ಜಿಲ್ಲೆಗಳ ರೋಗಿಗಳು ಇನ್ನು ಮುಂದೆ ಉತ್ತಮ ಚಿಕಿತ್ಸೆಗಾಗಿ ಬೆಂಗಳೂರಿನಂತಹ ಮಹಾನಗರಗಳಿಗೆ ಹೋಗುವ ಅಗತ್ಯವಿಲ್ಲ ಎಂದರು.

ಡಾ. ಪ್ರಭುಲಿಂಗ ವೈ. ಕೊಣ್ಣೂರ
1000 ಶಸ್ತ್ರಚಿಕಿತ್ಸೆಗಳ ಯಶಸ್ಸು ಕೇವಲ ಒಂದು ಸಂಖ್ಯೆಯಲ್ಲ. ಇದು ರೋಗಿಗಳು ನಮ್ಮ ಮೇಲಿಟ್ಟಿರುವ ನಂಬಿಕೆಯ ಪ್ರತೀಕ. ಹೋಲ್ಮಿಯಂ ಲೇಸರ್ ತಂತ್ರಜ್ಞಾನ ಹೆಚ್ಚು ನಿಖರ ಸುರಕ್ಷಿತ ಹಾಗೂ ಪರಿಣಾಮಕಾರಿ ಚಿಕಿತ್ಸೆಯಾಗಿದೆ
ಡಾ. ಪ್ರಭುಲಿಂಗ ವೈ. ಕೊಣ್ಣೂರ ಕನ್ಸಲ್ಟೆಂಟ್ ಯೂರಲಾಜಿಸ್ಟ್
ಲೇಸರ್ ತಂತ್ರಜ್ಞಾನದಿಂದ ಅಡ್ಡಪರಿಣಾಮಗಳು ತೀರಾ ಕಡಿಮೆ. ರೋಗಿಗಳು ಶೀಘ್ರವಾಗಿ ತಮ್ಮ ದೈನಂದಿನ ಚಟುವಟಿಕೆಗಳಿಗೆ ಮರಳುತ್ತಿದ್ದಾರೆ. ಇದುವರೆಗೆ ಕಂಡ ಫಲಿತಾಂಶಗಳು ಅತ್ಯಂತ ಉತ್ತೇಜನಕಾರಿ
ಡಾ. ಅವಿನಾಶ್ ಯು.ಕೆ. ಕನ್ಸಲ್ಟೆಂಟ್ ಯೂರಲಾಜಿಸ್ಟ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.