ADVERTISEMENT

ಹಸಿರುಮಕ್ಕಿ ಸೇತುವೆ ಕಾಮಗಾರಿ ವಿಳಂಬ; ಪಾದಯಾತ್ರೆ

ಮುಳುಗಡೆ ಸಂತ್ರಸ್ತರ ಸಂಪರ್ಕ ಕೊಂಡಿ: ಮಾಜಿ ಸಚಿವ ಕಾಗೋಡು ತಿಮ್ಮಪ್ಪ

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2022, 4:32 IST
Last Updated 27 ಸೆಪ್ಟೆಂಬರ್ 2022, 4:32 IST
ಹೊಸನಗರ ತಾಲ್ಲೂಕು ಹಸಿರುಮಕ್ಕಿ ಸೇತುವೆ ಕಾಮಗಾರಿ ವಿಳಂಬ ವಿರೋಧಿಸಿ ಕಾಗೋಡು ತಿಮ್ಮಪ್ಪ ನೇತೃತ್ವದಲ್ಲಿ ಪಾದಯಾತ್ರೆ ನಡೆಯಿತು.
ಹೊಸನಗರ ತಾಲ್ಲೂಕು ಹಸಿರುಮಕ್ಕಿ ಸೇತುವೆ ಕಾಮಗಾರಿ ವಿಳಂಬ ವಿರೋಧಿಸಿ ಕಾಗೋಡು ತಿಮ್ಮಪ್ಪ ನೇತೃತ್ವದಲ್ಲಿ ಪಾದಯಾತ್ರೆ ನಡೆಯಿತು.   

ಹೊಸನಗರ: ‘ಹಸಿರುಮಕ್ಕಿ ಕೇವಲ ಸೇತುವೆಯಲ್ಲ. ಅದೊಂದು ಇಲ್ಲಿನ ಜನರ ಬದುಕಿನ ಸೇತುವೆ ಆಗಿದೆ. ಇದರ ಕಾಮಗಾರಿ ವಿಳಂಬ ಮಾಡುತ್ತಿರುವುದು ಸರಿಯಲ್ಲ’ ಎಂದು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಹೇಳಿದರು.

ತಾಲ್ಲೂಕಿನ ನಿಟ್ಟೂರು ಬಳಿಯ ಹಸಿರುಮಕ್ಕಿ ಹಿನ್ನೀರು ತೀರದಲ್ಲಿ ನಿರ್ಮಾಣವಾಗುತ್ತಿರುವ ಸೇತುವೆ ವಿಳಂಬ ಧೋರಣೆ ಖಂಡಿಸಿ ಇಲ್ಲಿನ ಕಾಂಗ್ರೆಸ್ ಘಟಕ ಹಮ್ಮಿಕೊಂಡಿದ್ದ ಪ್ರತಿಭಟನಾ ಪಾದಯಾತ್ರೆಯಲ್ಲಿ ಅವರು ಮಾತನಾಡಿದರು.

‘ಹಸಿರುಮಕ್ಕಿ ಸೇತುವೆ ಮಂಜೂರು ಮಾಡಿಸಲು ಸಾಕಷ್ಟು ಶ್ರಮ ಹಾಕಿದ್ದೆ. ನಂತರದ ದಿನಗಳಲ್ಲಿ ಸೇತುವೆ ಕಾಮಗಾರಿ ಆರಂಭವಾಗಿತ್ತು. ಆದರೆ ಈಗ ಕಾಮಗಾರಿ ಸ್ಥಗಿತವಾಗಿದೆ. ಶರಾವತಿ ಮಕ್ಕಳು ನಾಡಿನ ಬೆಳಕಿಗಾಗಿ ಸಾಕಷ್ಟು ಕಷ್ಟನಷ್ಟ ಅನುಭವಿಸಿದ್ದಾರೆ. ಇಲ್ಲಿ ಹುಟ್ಟಿದ್ದೇವೆ. ಎಷ್ಟು ದಿನ ಕಷ್ಟ ಅನುಭವಿಸಬೇಕೋ ಗೊತ್ತಿಲ್ಲ’ ಎಂದರು.

ADVERTISEMENT

ಸೇತುವೆ ವಿಳಂಬಕ್ಕೆ ಹಾಲಪ್ಪ ಕಾರಣ: ‘ನಾಲ್ಕುವರೆ ವರ್ಷಗಳು ಕಳೆದರೂ ಕಾಮಗಾರಿ ಕಡೆ ಗಮನಹರಿಸದ ಶಾಸಕ ಎಚ್. ಹಾಲಪ್ಪ ಹರತಾಳು ಈಗ ಬಂದು ತಾಂತ್ರಿಕ ಕಾರಣದಿಂದ ಸ್ಥಗಿತಗೊಂಡಿದೆ ಎನ್ನುತ್ತಾರೆ. ಆದರೆ, ಕಾಮಗಾರಿ ವಿಳಂಬಕ್ಕೆ ಅವರೇ ನೇರ ಕಾರಣ’ ಎಂದು ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ವಾಗ್ದಾಳಿ ನಡೆಸಿದರು.

ಹೆಜ್ಜೆ ಹಾಕಿದ ಕಾಗೋಡು: ಕೆ.ಬಿ.ಸರ್ಕಲ್‌ನಿಂದ ಹಸಿರುಮಕ್ಕಿವರೆಗೆ ಪಾದಯಾತ್ರೆ ಮೂಲಕ 7 ಕಿ.ಮೀ. ದೂರ ಪ್ರತಿಭಟನೆ ಪಾದಯಾತ್ರೆ ನಡೆಸಲಾಯಿತು. 93 ವರ್ಷದ ಕಾಗೋಡು ತಿಮ್ಮಪ್ಪ ಅವರು ಕೂಡ ಕೆಲಹೊತ್ತು ಪಾದಯಾತ್ರೆಯಲ್ಲಿ ಹೆಜ್ಜೆ ಹಾಕಿ ಗಮನ ಸೆಳೆದರು.

ಮಾಜಿ ಸಚಿವ ಕಿಮ್ಮನೆ ರತ್ನಾಕರ್, ಅಪೆಕ್ಸ್ ಬ್ಯಾಂಕ್ ಮಾಜಿ ಅಧ್ಯಕ್ಷ ಆರ್.ಎಂ. ಮಂಜುನಾಥಗೌಡ, ಡಾ.ರಾಜನಂದಿನಿ, ಕಲಗೋಡು ರತ್ನಾಕರ್, ಮಲ್ಲಿಕಾರ್ಜುನ್ ಹಕ್ರೆ, ತೀ.ನಾ.ಶ್ರೀನಿವಾಸ್ ಮಾತನಾಡಿದರು.

ನಿಟ್ಟೂರು ಕಾಂಗ್ರೆಸ್ ಅಧ್ಯಕ್ಷ ನಾಗೇಂದ್ರ ಜೋಗಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಜಿ.ನಾಗರಾಜ್, ನಗರ ಅಧ್ಯಕ್ಷ ಕರುಣಾಕರ ಶೆಟ್ಟಿ, ಯುವ ಒಕ್ಕೂಟದ ಅಧ್ಯಕ್ಷ ಮಾಸ್ತಿಕಟ್ಟೆ ಸುಬ್ರಹ್ಮಣ್ಯ, ಅಮ್ರಪಾಲಿ ಸುರೇಶ್, ಬಂಡಿ ರಾಮಚಂದ್ರ, ಗುರುಶಕ್ತಿ ವಿದ್ಯಾಧರ್, ಹಾಲಗದ್ದೆ ಉಮೇಶ್, ಚಂದ್ರಮೌಳಿ ಗೌಡ, ಆದರ್ಶ ಹುಂಚದ ಕಟ್ಟೆ, ಕೂಡ್ಲುಕೊಪ್ಪ ಸುರೇಶ್, ಚಂದಯ್ಯ ಜೈನ್, ವಿಶ್ವನಾಥ ನಾಗೋಡಿ, ಚಂದ್ರಶೇಖರ ಶೆಟ್ಟಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.