ADVERTISEMENT

ಭೂ ಸ್ವಾಧೀನ ಕಾಯ್ದೆ ವಾಪಸ್‌ ಪಡೆಯಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2019, 12:22 IST
Last Updated 2 ಮಾರ್ಚ್ 2019, 12:22 IST
ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿ ಮುಂದೆ ಶನಿವಾರ ರೈತ ಸಂಘದ ಕಾರ್ಯಕರ್ತರು ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು.
ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿ ಮುಂದೆ ಶನಿವಾರ ರೈತ ಸಂಘದ ಕಾರ್ಯಕರ್ತರು ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು.   

ಶಿವಮೊಗ್ಗ: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ರಾಜ್ಯ ರೈತಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಮುಂದೆ ಶನಿವಾರ ಪ್ರತಿಭಟನೆ ನಡೆಸಿದರು.

ಬ್ರಿಟಿಷ್ ಸರ್ಕಾರ ರೂಪಿಸಿದ್ದ ಭೂ ಸ್ವಾಧೀನ ಕಾಯ್ದೆಯನ್ನು ಯುಪಿಎ ನೇತೃತ್ವದ ಕೇಂದ್ರ ಸರ್ಕಾರ ರದ್ದುಪಡಿಸಿ, ಹೊಸ ಕಾಯ್ದೆ ಜಾರಿಗೆ ತಂದಿತ್ತು. ಕೇಂದ್ರ ಅಥವಾ ರಾಜ್ಯ ಸರ್ಕಾರ ಯಾವುದೇ ಉದ್ದೇಶಕ್ಕೆ ಖಾಸಗಿ ಭೂಮಿ ಸ್ವಾಧೀನಪಡಿಸಿಕೊಳ್ಳುವ ಮೊದಲು ಸಂತ್ರಸ್ತರ ಸಮ್ಮತಿ ಪಡೆಯಬೇಕು. ಭೂಮಿ ಕಳೆದುಕೊಳ್ಳುವವರಿಗೆ ಸೂಕ್ತ ಪುನರ್ವಸತಿ, ಪುನರ್ ವ್ಯವಸ್ಥೆ ಮತ್ತು ಪರಿಹಾರ ನಿಗದಿ ಮಾಡಬೇಕು ಎಂದು ನಮೂದಿಸಿತ್ತು. ಆದರೆ, ನಂತರ ಅಧಿಕಾರಕ್ಕೆ ಬಂದ ಎನ್‌ಡಿಎ ಸರ್ಕಾರ ಸುಗ್ರೀವಾಜ್ಞೆ ಮೂಲಕ ಕಾಯ್ದೆಗೆ ತಿದ್ದುಪಡಿ ತರಲು ಪ್ರಯತ್ನಿಸಿ ಮುಖಭಂಗ ಅನುಭವಿಸಿತ್ತು ಎಂದು ದೂರಿದರು.

ಭೂಸ್ವಾಧೀನ ಕಾಯ್ದೆ 2013ರ ಮೂಲ ಉದ್ದೇಶಗಳಿಗೆ ವ್ಯತಿರಿಕ್ತವಾಗಿ ಇರುವ ಈಗಿನ ರಾಜ್ಯ ಸರ್ಕಾರದ ತಿದ್ದುಪಡಿ ಮಸೂದೆಯೂ ರೈತ ವಿರೋಧಿಯಾಗಿದೆ. ಭೂಮಿ ಕಳೆದುಕೊಳ್ಳುವವರ ಹಿತಾಸಕ್ತಿ ಕಡೆಗಣಿಸಲಾಗಿದೆ. ಪರಿಹಾರ ಮೊತ್ತ ಪಡೆಯುವಲ್ಲಿ ರೈತರಿಗೆ ಅನ್ಯಾಯವಾಗುತ್ತದೆ. ಮೈತ್ರಿ ಸರ್ಕಾರ ಕೂಡಲೇ ತಿದ್ದುಪಡಿ ಮಸೂದೆ ವಾಪಾಸ್ ಪಡೆಯಬೇಕು. ರೈತ ವಿರೋಧಿ ಕಾನೂನು ಜಾರಿಗೆ ಕಡಿವಾಣ ಹಾಕಬೇಕು ಎಂದು ಆಗ್ರಹಿಸಿದರು.

ADVERTISEMENT

ಪಿಎಲ್‌ಡಿ ಬ್ಯಾಂಕುಗಳಲ್ಲಿ ರೈತರು ಪಡೆದಿರುವ ಎಲ್ಲ ಸಾಲವನ್ನೂ ಮನ್ನಾ ಮಾಡಬೇಕು ಎಂದು ಒತ್ತಾಯಿಸಿದರು.

ರೈತಸಂಘದ ಮುಖಂಡರಾದ ಕೆ.ಟಿ.ಗಂಗಾಧರ್, ವೀರೇಶ್ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.