ADVERTISEMENT

ಕುಡಿಯುವ ನೀರಿಗೆ ಆಗ್ರಹಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2019, 14:13 IST
Last Updated 24 ಏಪ್ರಿಲ್ 2019, 14:13 IST

ಶಿವಮೊಗ್ಗ: ಕುಡಿಯುವ ನೀರು ಸೇರಿದಂತೆ ಅಗತ್ಯ ಮೂಲ ಸೌಲಭ್ಯ ಕಲ್ಪಿಸಲು ಆಗ್ರಹಿಸಿ ಬುಧವಾರ ಜಿಲ್ಲಾಧಿಕಾರಿ ಕಚೇರಿ ಎದುರು ವಿರುಪಿನಕೊಪ್ಪ ಆಶ್ರಯ ಬಡಾವಣೆ ನಿವಾಸಿಗಳು ಪ್ರತಿಭಟನೆ ನಡೆಸಿದರು.

ನಗರಪಾಲಿಕೆ ವಾಜಪೇಯಿ ನಗರ ವಸತಿ ಯೋಜನೆ ಅಡಿ 2011ರಲ್ಲಿ ಎಪಿಎಂಸಿ ಕಾರ್ಮಿಕರಿಗೆ 670 ಆಶ್ರಯ ಮನೆಗಳನ್ನು ನಿರ್ಮಾಣ ಮಾಡಿತ್ತು. 300 ಮನೆಗಳಲ್ಲಿ ಜನರು ವಾಸ ಮಾಡುತ್ತಿದ್ದಾರೆ. ಉಳಿದ ಮನೆಗಳು ಖಾಲಿ ಇವೆ. ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದೆ. ಯಾವುದೇ ಮೂಲ ಸೌಕರ್ಯಗಳಿಲ್ಲ ಎಂದು ದೂರಿದರು.

ಕೊಳವೆ ಬಾವಿಯಲ್ಲಿ ಸರಿಯಾಗಿ ನೀರು ಬಾರದ ಕಾರಣ 2 ಕೀ.ಮೀ. ದೂರ ಹೋಗಿ ಕುಡಿಯುವ ನೀರು ಹೊತ್ತು ತರುತ್ತಿದ್ದೇವೆ. ಕಿರು ವಾಟರ್ ಟ್ಯಾಂಕ್, ಕೊಳವೆ ಬಾವಿಯ ನೀರಿನಲ್ಲಿ ಹುಳುಗಳು ಬರುತ್ತಿವೆ. ಬೀದಿ ದೀಪದ ವ್ಯವಸ್ಥೆ ಇಲ್ಲ. ಈ ಕಾಲೊನಿ ಪಾಲಿಕೆಯ ಯಾವ ವಾರ್ಡ್‌ ವ್ಯಾಪ್ತಿಗೆ ಬರುತ್ತದೆ ಎಂಬ ಮಾಹಿತಿಯೇ ಇಲ್ಲ. ಕಸ ವಿಲೇವಾರಿ ಮಾಡದೇ ಹಲವು ತಿಂಗಳಾಗಿವೆ ಎಂದು ನೋವು ತೋಡಿಕೊಂಡರು.

ADVERTISEMENT

ಚುನಾವಣಾ ಸಮಯದಲ್ಲಿ ವಿವಿಧ ಪಕ್ಷಗಳ ಮುಖಂಡರು ಆಶ್ವಾಸನೆ ನೀಡಿದರು. ಚುನಾವಣೆ ಮುಗಿದರೂ ನೀರಿನ ವ್ಯವಸ್ಥೆ ಕಲ್ಪಿಸಿಲ್ಲ. ಹಲವು ಬಾರಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ್ದರೂ ಕ್ರಮ ಕೈಗೊಂಡಿರುವುದಿಲ್ಲ ಎಂದು ಆರೋಪಿಸಿದರು.

ಆಶ್ರಯ ಬಡಾವಣೆ ನಿವಾಸಿಗಳ ಸಂಘದ ಅಧ್ಯಕ್ಷ ಹನುಮಂತಪ್ಪ, ಕಾರ್ಯದರ್ಶಿ ಹುಚ್ಚಪ್ಪ, ಚಂದ್ರಪ್ಪ, ಶಿವಕುಮಾರ್ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.