ADVERTISEMENT

ಸಾಗರ| ಆರಗ ಜ್ಞಾನೇಂದ್ರ ಬಂಧನಕ್ಕೆ ಒತ್ತಾಯಿಸಿ ಕಾಂಗ್ರೆಸ್ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2023, 15:49 IST
Last Updated 5 ಆಗಸ್ಟ್ 2023, 15:49 IST
ಸಾಗರದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ದಲಿತರನ್ನು ಅವಮಾನಿಸಿರುವ ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಅವರನ್ನು ಬಂಧಿಸುವಂತೆ ಒತ್ತಾಯಿಸಿ ಶನಿವಾರ ಉಪವಿಭಾಗಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು
ಸಾಗರದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ದಲಿತರನ್ನು ಅವಮಾನಿಸಿರುವ ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಅವರನ್ನು ಬಂಧಿಸುವಂತೆ ಒತ್ತಾಯಿಸಿ ಶನಿವಾರ ಉಪವಿಭಾಗಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು    

ಸಾಗರ: ಇಲ್ಲಿನ ಕಾಂಗ್ರೆಸ್ ಕಾರ್ಯಕರ್ತರು ದಲಿತರನ್ನು ಅವಮಾನಿಸಿರುವ ಶಾಸಕ ಆರಗ ಜ್ಞಾನೇಂದ್ರ ಅವರನ್ನು ಬಂಧಿಸುವಂತೆ ಒತ್ತಾಯಿಸಿ ಶನಿವಾರ ಉಪ ವಿಭಾಗಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

‘ತೀರ್ಥಹಳ್ಳಿಯಲ್ಲಿ ಕಸ್ತೂರಿರಂಗನ್ ವರದಿ ಜಾರಿ ವಿರೋಧಿಸಿ ಈಚೆಗೆ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನಾ ಸಭೆಯಲ್ಲಿ ಆರಗ ಜ್ಞಾನೇಂದ್ರ ಅವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಜಾತಿ ಹಾಗೂ ಬಣ್ಣವನ್ನು ಪ್ರಸ್ತಾಪಿಸಿ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ಈ ಮೂಲಕ ಅವರು ದಲಿತ ಸಮುದಾಯಕ್ಕೆ ಅವಮಾನ ಮಾಡಿದ್ದಾರೆ’ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಆರ್.ಜಯಂತ್ ಹೇಳಿದರು.

‘ಬಿಜೆಪಿಗೆ ದಲಿತರ ಬಗ್ಗೆ ಮೊದಲಿನಿಂದಲೂ ಅಸಡ್ಡೆ ಇದೆ. ಜಾತಿ, ಧರ್ಮದ ವಿಷಬೀಜವನ್ನು ಬಿತ್ತಿ ಮತ ಫಸಲು ತೆಗೆಯುವ ರಾಜಕಾರಣದಲ್ಲಿ ಸದಾ ತೊಡಗಿರುವ ಬಿಜೆಪಿ ಮುಖಂಡರಿಂದ ದಲಿತರು ಹಾಗೂ ಕಪ್ಪು ಬಣ್ಣದ ಕುರಿತು ಅವಹೇಳನಕಾರಿ ಮಾತು ಬಂದಿರುವುದು ಅವರ ಸಂಸ್ಕೃತಿಗೆ ತಕ್ಕುದಾಗಿದೆ’ ಎಂದು ಟೀಕಿಸಿದರು.

ADVERTISEMENT

‘ದಲಿತ ಸಮುದಾಯದವರನ್ನು ಸುಟ್ಟು ಕರಕಲಾಗಿರುವವರು ಎಂಬ ಅರ್ಥದಲ್ಲಿ ಜ್ಞಾನೇಂದ್ರ ಅವರು ಮಾತನಾಡಿರುವುದು ಬಿಜೆಪಿಯಲ್ಲಿ ವರ್ಣಾಶ್ರಮದ ಪದ್ಧತಿಯ ಮನಸ್ಥಿತಿ ಆಳವಾಗಿದೆ ಎಂಬುದಕ್ಕೆ ಸಾಕ್ಷಿಯಾಗಿದೆ’ ಎಂದು ಬ್ಲಾಕ್ ಕಾಂಗ್ರೆಸ್‌ನ ಎಸ್‌ಸಿ ಘಟಕದ ಅಧ್ಯಕ್ಷ ಎಲ್.ಚಂದ್ರಪ್ಪ ದೂರಿದರು.

ಕಾಂಗ್ರೆಸ್‌ನ ಪ್ರಮುಖರಾದ ಸುಮಂಗಲಾ ರಾಮಕೃಷ್ಣ, ಮಧು ಮಾಲತಿ, ಮಹಾಬಲ ಕೌತಿ, ಗಣಪತಿ ಮಂಡಗಳಲೆ, ಡಿ.ದಿನೇಶ್, ಅನ್ವರ್ ಭಾಷಾ, ತಾರಾಮೂರ್ತಿ, ರಫಿಕ್ ಬಾಬಾಜಾನ್, ವಿ.ಶಂಕರ್, ರವಿ ಜಂಬೂರುಮನೆ, ನಾರಾಯಣ ಅರಮನೆಕೇರಿ, ಲಕ್ಷ್ಮಣ್ ಸಾಗರ್, ಸಬೀನಾ ತನ್ವೀರ್, ನಾಗರತ್ನ ನಾರಾಯಣಪ್ಪ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.