ADVERTISEMENT

20ರಂದು ಭೂ ಸುಧಾರಣೆ ಕಾಯ್ದೆ ತಿದ್ದುಪಡಿ ವಿರೋಧಿಸಿ ಪ್ರತಿಭಟನೆ

ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2020, 14:03 IST
Last Updated 16 ಸೆಪ್ಟೆಂಬರ್ 2020, 14:03 IST
ಕಿಮ್ಮನೆ ರತ್ನಾಕರ್
ಕಿಮ್ಮನೆ ರತ್ನಾಕರ್   

ಸಾಗರ: ರಾಜ್ಯ ಸರ್ಕಾರ ಸುಗ್ರೀವಾಜ್ಞೆ ಮೂಲಕ ಭೂ ಸುಧಾರಣೆ ಕಾಯ್ದೆಗೆ ತಿದ್ದುಪಡಿ ತಂದಿರುವುದನ್ನು ವಿರೋಧಿಸಿ ಭೂ ಸುಧಾರಣೆ ಕಾಯ್ದೆ ಜಾರಿಗೆ ಬರಲು ಕಾರಣವಾದ ಐತಿಹಾಸಿಕ ‘ಕಾಗೋಡು ಸತ್ಯಾಗ್ರಹ’ ನಡೆದ ತಾಲ್ಲೂಕಿನ ಕಾಗೋಡು ಗ್ರಾಮದಲ್ಲಿ ಸೆ.20ರಂದು ಬೆಳಿಗ್ಗೆ 11ಕ್ಕೆ ಪ್ರತಿಭಟನಾ ಸಭೆ ಆಯೋಜಿಸಲಾಗಿದೆ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ತಿಳಿಸಿದರು.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಪ್ರತಿಭಟನಾ ಸಭೆಯಲ್ಲಿ ಹಿರಿಯ ಸಮಾಜವಾದಿ ಮುಖಂಡ ಬಿ.ಆರ್. ಪಾಟೀಲ್, ವಿಧಾನಸಭೆಯ ಮಾಜಿ ಅಧ್ಯಕ್ಷ ರಮೇಶ್ ಕುಮಾರ್, ಮಾಜಿ ಸಚಿವ ಎಚ್.ಸಿ. ಮಹಾದೇವಪ್ಪ ಸೇರಿ ಹಲವು ಪ್ರಮುಖರು ಭಾಗವಹಿಸಲಿದ್ದಾರೆ. ಈ ಮೂಲಕ ಸೆ. 21ರಂದು ನಡೆಯಲಿರುವ ರಾಜ್ಯದ ವಿಧಾನಸಭೆ ಅಧಿವೇಶನದಲ್ಲಿ ಭೂ ಸುಧಾರಣೆ ಕಾಯ್ದೆ ತಿದ್ದುಪಡಿ ವಿಧೇಯಕವನ್ನು ಹಿಂದಕ್ಕೆ ಪಡೆಯುವಂತೆ ಒತ್ತಾಯಿಸಲಾಗುವುದು’ ಎಂದು ತಿಳಿಸಿದರು.

ಭೂ ಸುಧಾರಣೆ ಕಾಯ್ದೆಗೆ ತಿದ್ದುಪಡಿ ತಂದಿರುವುದು ‘ಉಳುವವನೆ ಹೊಲದೊಡೆಯ’ ಎಂಬ ಘೋಷಣೆಯ ತತ್ವಕ್ಕೆ ವಿರುದ್ಧವಾಗಿದೆ. ಕಪ್ಪು ಹಣ ಹೊಂದಿರುವ ಬಂಡವಾಳಶಾಹಿಗಳಿಗೆ ಕೃಷಿಭೂಮಿಯನ್ನು ಖರೀದಿಸಲು ಈ ಮೂಲಕ ರಾಜ್ಯ ಸರ್ಕಾರ ಮುಕ್ತ ಅವಕಾಶ ಮಾಡಿಕೊಟ್ಟಂತಾಗಿದೆ. ಈ ಸಂಬಂಧ ಜನಜಾಗೃತಿ ಮೂಡಿಸಲಾಗುವುದು ಎಂದು ಹೇಳಿದರು.

ADVERTISEMENT

ಹಲವು ರೀತಿಯ ಕಾನೂನು ತಿದ್ದುಪಡಿಗಳ ಮೂಲಕ ಸಂವಿಧಾನವನ್ನು ತಿದ್ದುಪಡಿ ಮಾಡದೆಯೇ ಸಂವಿಧಾನದ ಪ್ರಮುಖ ಆಶಯಗಳನ್ನು ಬುಡಮೇಲು ಮಾಡುವ ಕೃತ್ಯಕ್ಕೆ ಬಿಜೆಪಿ ಮುಂದಾಗಿದೆ. ಕೋವಿಡ್ ನೆಪದಲ್ಲಿ ವಿರೋಧ ಪಕ್ಷಗಳ ಪ್ರತಿಭಟನೆಯ ಹಕ್ಕನ್ನೇ ಹಲವು ನಿರ್ಬಂಧಗಳನ್ನು ಹೇರುವ ಮೂಲಕ ಕಸಿಯಲಾಗುತ್ತಿದೆ. ಜಿಲ್ಲೆಯ ಮಾಜಿ ಶಾಸಕರೊಬ್ಬರು ಸೂಕ್ತ ಚಿಕಿತ್ಸೆ ನೀಡದೆ ಸಾವನ್ನಪ್ಪಿರುವುದು ಹದಗೆಟ್ಟಿರುವ ಪರಿಸ್ಥಿತಿಯ ದ್ಯೋತಕ ಎಂದು ಟೀಕಿಸಿದರು.

ಮಾಜಿ ಸಚಿವ ಕಾಗೋಡು ತಿಮ್ಮಪ್ಪ, ‘ಭೂ ಸುಧಾರಣಾ ಕಾಯ್ದೆಗೆ ರಾಜ್ಯ ಸರ್ಕಾರ ತಿದ್ದುಪಡಿ ತಂದಿರುವುದು ಜನವಿರೋಧಿ ನೀತಿ. ಕೃಷಿಗೆ ಈ ಕಾಯ್ದೆ ಮಾರಕವಾಗಿದ್ದು, ಕ್ರಮೇಣ ಭೂಮಿ ಎನ್ನುವುದು ಕೇವಲ ಉಳ್ಳವರ ಸ್ವತ್ತು ಆಗಲಿದೆ. ಹೀಗಾಗಿ ತಿದ್ದುಪಡಿಯನ್ನು ವಿರೋಧಿಸುವುದು ಅನಿವಾರ್ಯ’ ಎಂದರು.

ಕಾಂಗ್ರೆಸ್ ಮುಖಂಡರಾದ ಬಿ.ಆರ್. ಜಯಂತ್, ಐ.ಎನ್. ಸುರೇಶ್ ಬಾಬು, ಅನಿತಾಕುಮಾರಿ, ಕಲಗೋಡು ರತ್ನಾಕರ್, ಕೆ.ಎಸ್. ಪ್ರಶಾಂತ್, ತುಕಾರಾಂ ಶಿರವಾಳ, ತಾರಾಮೂರ್ತಿ, ಮಹಾಬಲ ಕೌತಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.