ADVERTISEMENT

ಹೊಳೆಹೊನ್ನೂರು: ಶಾಲೆ ವಿದ್ಯಾರ್ಥಿಗಳ, ಪೋಷಕರ ಪ್ರತಿಭಟನೆ

ಕುಡಿಯುವ ನೀರು, ಶೌಚಾಲಯ ಕಲ್ಪಿಸಲು ಒತ್ತಾಯ

​ಪ್ರಜಾವಾಣಿ ವಾರ್ತೆ
Published 29 ಜುಲೈ 2022, 4:14 IST
Last Updated 29 ಜುಲೈ 2022, 4:14 IST
ಹೊಳೆಹೊನ್ನೂರು ಪಟ್ಟಣದ ಹಳೆಕೊಪ್ಪ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಕುಡಿಯುವ ನೀರು ಹಾಗೂ ಶೌಚಾಲಯದ ವ್ಯವಸ್ಥೆ ಕಲ್ಪಿಸುವಂತೆ ಆಗ್ರಹಿಸಿ ಶಾಲೆ ವಿದ್ಯಾರ್ಥಿಗಳು, ಎಸ್‍ಡಿಎಂಸಿ ಸದಸ್ಯರು ಪ್ರತಿಭಟಿಸಿದರು.
ಹೊಳೆಹೊನ್ನೂರು ಪಟ್ಟಣದ ಹಳೆಕೊಪ್ಪ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಕುಡಿಯುವ ನೀರು ಹಾಗೂ ಶೌಚಾಲಯದ ವ್ಯವಸ್ಥೆ ಕಲ್ಪಿಸುವಂತೆ ಆಗ್ರಹಿಸಿ ಶಾಲೆ ವಿದ್ಯಾರ್ಥಿಗಳು, ಎಸ್‍ಡಿಎಂಸಿ ಸದಸ್ಯರು ಪ್ರತಿಭಟಿಸಿದರು.   

ಹೊಳೆಹೊನ್ನೂರು: ಪಟ್ಟಣದ ಉಪ್ಪಾರ ಬೀದಿಯಲ್ಲಿರುವ ಹಳೆಕೊಪ್ಪ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಕುಡಿಯುವ ನೀರು ಹಾಗೂ ಶೌಚಾಲಯದ ವ್ಯವಸ್ಥೆ ಕಲ್ಪಿಸುವಂತೆ ಆಗ್ರಹಿಸಿ ವಿದ್ಯಾರ್ಥಿಗಳು, ಎಸ್‍ಡಿಎಂಸಿ ಸದಸ್ಯರು ಹಾಗೂ ಸ್ಥಳೀಯ ಮುಖಂಡರು ಪಟ್ಟಣ ಪಂಚಾಯಿತಿ ಕಚೇರಿ ಎದುರು ದಿಢೀರ್ ಪ್ರತಿಭಟನೆ ನಡೆಸಿದರು.

ಶಾಲೆಯಲ್ಲಿ 1ರಿಂದ 5ನೇ ತರಗತಿ ಓದುತ್ತಿರುವ ಸುಮಾರು 40ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇದ್ದಾರೆ. ಆದರೆ, ಅವರಿಗೆ ಕುಡಿಯುವ ನೀರಿನ ಕೊರತೆ ಕಾಡುತ್ತಿದೆ. ಶೌಚಾಲಯ ಇದ್ದರೂ ಬಳಸಲು ಯೋಗ್ಯವಾಗಿಲ್ಲ. ಶೌಚಕ್ಕಾಗಿ ಮನೆಗಳಿಗೆ ಹೋಗಿ ಬರವ ಪರಿಸ್ಥಿತಿ ಇದೆ ಎಂದು ದೂರಿದರು.

ಈ ಬಗ್ಗೆ ಸ್ಥಳೀಯ ಪಂಚಾಯಿತಿ ಕಚೇರಿಗೆ ಹಲವಾರು ಬಾರಿ ಮನವಿ ನೀಡಲಾಗಿದೆ. ಆದರೂ ಸಂಬಂಧಪಟ್ಟ ಅಧಿಕಾರಿಗಳು ಸಮಸ್ಯೆ ಬಗ್ಗೆ ಗಮನ ಹರಿಸುತ್ತಿಲ್ಲ. ತಕ್ಷಣ ಸಮಸ್ಯೆ ಬಗೆಹರಿಸದಿದ್ದರೆ ಉಗ್ರ ಹೋರಾಟ ಮಾಡಲಾಗುವುದು ಎಂದು ಪ್ರತಿಭಟನಕಾರರು ಎಚ್ಚರಿಸಿದರು.

ADVERTISEMENT

ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಎಸ್.ಸತ್ಯನಾರಾಯಣರಾವ್, ‘ಪಂಚಾಯಿತಿ ವತಿಯಿಂದ ತಕ್ಷಣ ಹೆಚ್ಚುವರಿ ನಲ್ಲಿ ಸಂಪರ್ಕ ಕಲ್ಪಿಸಲಾಗುವುದು. ಸದ್ಯಕ್ಕೆ ಶೌಚಾಲಯ ದುರಸ್ತಿ ಮಾಡಿಸಲಾಗುವುದು’ ಎಂದು ಭರವಸೆ ನೀಡಿದ ಬಳಿಕ ಪ್ರತಿಭಟನೆ ಕೈಬಿಡಲಾಯಿತು.

ಎಸ್‍ಡಿಎಂಸಿ ಅಧ್ಯಕ್ಷ ಕೆಂಚಪ್ಪ, ಸ್ಥಳೀಯ ಮುಖಂಡರಾದ ಎಂ.ಹರೀಶ್‍ಕುಮಾರ್, ಎಚ್.ಕೆ.ಶ್ರೀನಿವಾಸ್, ಆರ್.ಉಮೇಶ್, ಪೋಷಕರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.