ತೀರ್ಥಹಳ್ಳಿ : ಸಾಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅರಮನೆ ಬ್ಯಾಣದ ಸುಮಾರು 80 ಎಕರೆ ಜಾಗಕ್ಕೆ ಅಕ್ರಮ ದಾಖಲೆ ಸೃಷ್ಟಿಯಾಗಿದೆ. ಸರ್ವೆ ಇಲಾಖೆಯ ಸಿಬ್ಬಂದಿ ಮೂಲ ದಾಖಲೆ ನಾಶ ಮಾಡುತ್ತಿದ್ದಾರೆ. ಭೂಮಿ ಕಬಲಿಸಲು ಮುಂದಾಗಿರುವ ದಂಧೆಕೋರರಿಗೆ ಅವಕಾಶ ಕೊಡುವುದಿಲ್ಲ ಎಂದು ಶಾಸಕ ಆರಗ ಜ್ಞಾನೇಂದ್ರ ಎಚ್ಚರಿಸಿದರು.
ಸೋಮವಾರ ತಾಲೂಕು ಕಚೇರಿ ಮುಂಭಾಗ ಅರಮನೆ ಬ್ಯಾಣ ಉಳಿಸಿ ಹೋರಾಟ ಸಮಿತಿ ಹಮ್ಮಿಕೊಂಡಿದ್ದ ಪ್ರತಿಭಟನಾ ಧರಣಿ ಸಭೆ ಉದ್ದೇಶಿಸಿ ಕಂದಾಯ, ಅರಣ್ಯ, ಭೂ ಮಾಪನಾ ಇಲಾಖೆ ಅಧಿಕಾರಿಗಳನ್ನು ಸಾರ್ವಜನಿಕವಾಗಿ ತೀವ್ರ ತರಾಟೆಗೆ ತೆಗೆದುಕೊಂಡು ಅವರು ಅಕ್ರಮದ ವಿರುದ್ಧ ತೀವ್ರ ತರಾಟೆ ತೆಗೆದುಕೊಂಡರು.
2008ರಿಂದ ಅರಮನೆ ಬ್ಯಾಣ ಪ್ರದೇಶ ಉಳಿಸಬೇಕು ಎಂದು ಗ್ರಾಮಸ್ಥರು ಹೋರಾಟ ನಡೆಸುತ್ತಿದ್ದಾರೆ. ನಕ್ಷೆಯ ಮೂಲ ದಾಖಲೆ ಇಲ್ಲದೆ ಪೋಡಿ ದಾಖಲೆ ಸಿದ್ದಪಡಿಸಿ ಭೂ ಖರೀದಿಗೆ ದಾಖಲೆಗಳ ನೆರವು ನೀಡಿದ್ದಾರೆ. ಈ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಯಬೇಕು. ಅರಣ್ಯ, ಕಂದಾಯ ಸಚಿವರಿಗೆ ಸಮಗ್ರ ದೂರು ಮಾಹಿತಿ ಸಲ್ಲಿಸುತ್ತೇನೆ ಎಂದರು.
ಗ್ರಾಮ ನಕಾಶೆ ದಾಖಲೆ ತಿದ್ದಿ ನಕಲಿ ದಾಖಲೆ ಸೃಷ್ಟಿಸಿ ಭೂ ಮಾಲೀಕತ್ವ ನೀಡುವ ದಂಧೆಗೆ ಕಡಿವಾಣ ಹಾಕಬೇಕು. ದುಡ್ಡಿದವನಿಗೆ ಭೂಮಿ ಕಬಳಿಸಲು ಬಿಡುವುದಿಲ್ಲ. ಭೂ ಖರೀಸಿದ ವ್ಯಕ್ತಿಯ ಪತ್ನಿ 20 ವರ್ಷದಿಂದ ಭೂ ಮಾಪನ ಇಲಾಖೆಯಲ್ಲಿ ಜಾಂಡ ಹೂಡಿದ್ದು ಆಕೆ ಎಲ್ಲರನ್ನು ಹೆದರಿಸಿ ನಕಲಿ ದಾಖಲೆ ಸೃಷ್ಟಿ ಮಾಡುತ್ತಿದ್ದಾಳೆ. ಪತಿ, ತಾಯಿ ಹೆಸರಲ್ಲಿ ಜಾಗ ಖರೀದಿ ಮಾಡಲು ದಾಖಲೆ ಸೃಷ್ಟಿ ಮಾಡಿರುವ ಹಿಂದೆ ಆಕೆಯ ಕೈವಾಡ ಇದೆ. ತಕ್ಷಣ ಆಕೆಯನ್ನು ಬೇರೆ ಕಡೆ ವರ್ಗಾಹಿಸಲು ಜಿಲ್ಲಾಧಿಕಾರಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಭೂ ಸುಧಾರಣೆ ಕಾಯಿದೆ ನಿಯಮದಡಿ 1982ರಲ್ಲಿ ಹೆಚ್ಚುವರಿ ಜಮೀನು ಹೆಸರಲ್ಲಿ ದಲಿತರಿಗೆ, ಭೂ ರಹಿತರಿಗೆ ಸರ್ಕಾರ ಮಂಜೂರು ಮಾಡಿದೆ. ಸಾಗುವಳಿ, ಸ್ವಾಧೀನ ಅನುಭವದಲ್ಲಿ ಇಲ್ಲದ ಜಮೀನು ಇದಾಗಿದ್ದು ಅಕ್ರಮ ದಾಖಲೆ ಅಡಿ ದುಡ್ಡಿರುವ ವ್ಯಕ್ತಿ ಖರೀದಿ ಮಾಡಲು ಅವಕಾಶ ನೀಡಿರುವುದು ತಪ್ಪು ಎಂದರು.
ನೈಸರ್ಗಿಕ ಸಂಪತ್ತು ಹೇರಳವಾಗಿದ್ದು ಬೆಂಕಿ ಹಾಕಿ ಅರಣ್ಯ ಪರಿಸರವನ್ನು ನಾಶ ಮಾಡಲಾಗಿದೆ. ಅರಣ್ಯ ಇಲಾಖೆ ಕೇವಲ ₹3,000 ಮಾತ್ರ ದಂಡ ವಿಧಿಸಿದೆ. ಅರಣ್ಯ ಇಲಾಖೆ ಅಧಿಕಾರಿಗಳಿಗೆ ಕನಿಷ್ಟ ಜವಾಬ್ದಾರಿ ಇದ್ದರೆ ಸ್ಥಳಕ್ಕೆ ಭೇಟಿ ನೀಡಿ ಪೂರ್ಣ ವಿಷಯ ಸಂಗ್ರಹಿಸಿ ವರದಿ ನೀಡಬೇಕೆಂದು ಪಟ್ಟು ಹಿಡಿದರು.
ಪ್ರಮುಖರಾದ ಕೋಗೋಡು ಸುಬ್ಬಯ್ಯ, ಶ್ರೀಧರ್ ಆಚಾರ್, ಟಿಎಪಿಸಿಎಂಎಸ್ ಅಧ್ಯಕ್ಷ ನಾಗರಾಜ ಶೆಟ್ಟಿ, ತಾ.ಪಂ. ಮಾಜಿ ಸದಸ್ಯ ಚಂದುವಳ್ಳಿ ಸೋಮಶೇಖರ್, ಸಾಲೂರು ಗ್ರಾ.ಪಂ.ಅಧ್ಯಕ್ಷೆ ಮಂಜುಳಾ ಇದ್ದರು. ಜಿಲ್ಲಾಧಿಕಾರಿ ಆದೇಶದ ಮೇರೆಗೆ ಉಪವಿಭಾಗಾಧಿಕಾರಿ ಸತ್ಯನಾರಾಯಣ್ ಅರಮನೆ ಬ್ಯಾಣ ಪ್ರದೇಶಕ್ಕೆ ಭೇಟಿ ನೀಡಿದರು. ಅರಣ್ಯ ಇಲಾಖೆ ಸ್ಥಳದಲ್ಲಿ ಆಗಿರುವ ಪರಿಸರ ನಾಶದ ಕೃತ್ಯ ಕುರಿತು ಪರಿಶೀಲಿಸಲಿದೆ ಎಂದು ಎಸಿಎಫ್ ಮಧುಸೂಧನ್ ಭರವಸೆ ನೀಡಿದರು. ಅರಣ್ಯ, ಭೂಮಿ ನಾಶದ ಕುರಿತಂತೆ ಸಾಕ್ಷ್ಯಚಿತ್ರವನ್ನು ಪ್ರತಿಭಟನಕಾರರು ಪ್ರದರ್ಶಿಸಿದರು.
2 ತಿಂಗಳ ಹಿಂದೆ ವಿವಾದಿತ ಪ್ರದೇಶದ ಭೂ ಮಾಪನ ಇಲಾಖೆಗೆ ಪತ್ರ ಬರೆದಿದ್ದೇನೆ. ಈವರೆಗೂ ಉತ್ತರ ಬಂದಿಲ್ಲ ಸಾರ್. ಸ್ಥಳಕ್ಕೆ ತೆರಳಿ ಸೂಕ್ತ ಮಾಹಿತಿ ಪಡೆದು ಕ್ರಮ ವಹಿಸಲಾಗುತ್ತದೆ ಎಂದು ತಹಸೀಲ್ದಾರ್ ಎಸ್. ರಂಜಿತ್ ಉತ್ತರಿಸಿದರು.