ADVERTISEMENT

ಜನರಿಗೆ ಜೆಲ್ಲಿ, ಕಲ್ಲು, ಮರಳು ಸಿಗದಿದ್ದರೆ ಪ್ರತಿಭಟನೆ

ಕೆಡಿಪಿ ಸಭೆಯಲ್ಲಿ ಶಾಸಕ ಆರಗ ಜ್ಞಾನೇಂದ್ರ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2021, 12:47 IST
Last Updated 18 ಫೆಬ್ರುವರಿ 2021, 12:47 IST
ತೀರ್ಥಹಳ್ಳಿ ಶಾಂತವೇರಿ ಗೋಪಾಲಗೌಡ ರಂಗಮಂದಿರದಲ್ಲಿ ಗುರುವಾರ ಶಾಸಕ ಆರಗ ಜ್ಞಾನೇಂದ್ರ ಅಧ್ಯಕ್ಷತೆಯಲ್ಲಿ ಕೆಡಿಪಿ ಸಭೆ ನಡೆಯಿತು
ತೀರ್ಥಹಳ್ಳಿ ಶಾಂತವೇರಿ ಗೋಪಾಲಗೌಡ ರಂಗಮಂದಿರದಲ್ಲಿ ಗುರುವಾರ ಶಾಸಕ ಆರಗ ಜ್ಞಾನೇಂದ್ರ ಅಧ್ಯಕ್ಷತೆಯಲ್ಲಿ ಕೆಡಿಪಿ ಸಭೆ ನಡೆಯಿತು   

ತೀರ್ಥಹಳ್ಳಿ: ‘ಜನರಿಗೆ ಜೆಲ್ಲಿ, ಕಲ್ಲು, ಮರಳು ಸಿಗುತ್ತಿಲ್ಲ. ಹುಣಸೋಡು ಸ್ಫೋಟದ ನಂತರ ಕಲ್ಲುಗಣಿಗಾರಿಕೆಯನ್ನು ನಿಲ್ಲಿಸಲಾಗಿದೆ. ಹುಣಸೋಡು ಸ್ಫೋಟಕ್ಕೆ ಗಣಿ ವಿಜ್ಞಾನ, ಪೊಲೀಸ್ ಇಲಾಖೆಯ ಕಾನೂನು ಬಾಹಿರ ಒಳ ಒಪ್ಪಂದ ಕಾರಣ. ನಮಗೆ ಜಲ್ಲಿ, ಮರಳು ಬೇಕು. ಕಾನೂನುಬದ್ಧವಾಗಿದ್ದ ಕ್ವಾರಿಗಳನ್ನು ನಿಲ್ಲಿಸಿ ಅಭಿವೃದ್ಧಿ ಹಾಳು ಮಾಡಲು ಹೊರಟಿದ್ದೀರಿ. ಜಿಲ್ಲಾಡಳಿತ ಕಾನೂನುಬದ್ಧ ಕಲ್ಲುಕ್ವಾರಿಗೆ ಅನುಮತಿ ನೀಡದೇ ಇದ್ದರೆ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸುತ್ತೇನೆ’ ಎಂದು ಕರ್ನಾಟಕ ರಾಜ್ಯ ಗೃಹಮಂಡಳಿ ಅಧ್ಯಕ್ಷ ಆರಗ ಜ್ಞಾನೇಂದ್ರ ಎಚ್ಚರಿಕೆ ನೀಡಿದರು.

ಗುರುವಾರ ಪಟ್ಟಣದಲ್ಲಿ ನಡೆದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಜಿಲ್ಲಾಧಿಕಾರಿಯನ್ನು ಅಧಿಕಾರಿಗಳು ತಪ್ಪುದಾರಿಗೆ ಎಳೆಯುತ್ತಿದ್ದಾರೆ. ಕಾನೂನುಬದ್ಧವಾಗಿ ಗಣಿಗಾರಿಕೆ ನಡೆಸುವವರಿಗೆ ಇದರಿಂದ ತೊಂದರೆಯಾಗಿದೆ. ನಾನು ಅಕ್ರಮ ಸ್ಫೋಟದ ಪರವಿಲ್ಲ. ಅನುಮತಿ ಪಡೆದ ತಜ್ಞರಿಂದ ಬಂಡೆ ಸ್ಫೋಟಿಸಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ಜನರಿಗೆ ಕಚ್ಚಾಸಾಮಗ್ರಿ ಸಿಗುವಂತೆ ನೋಡಿಕೊಳ್ಳಬೇಕು. ಮರಳಿನ ದರ ಹೆಚ್ಚಿಸಿ ಕೃತಕ ಅಭಾವ ಸೃಷ್ಠಿಸಲಾಗುತ್ತಿದೆ. ಇದು ತಪ್ಪಬೇಕು’ ಎಂದರು.

ADVERTISEMENT

‘ಕಾನೂನುಬಾಹಿರವಾಗಿ ನಡೆಯುತ್ತಿದ್ದ ಕಲ್ಲು ಕ್ವಾರಿಗಳನ್ನು ನಿಲ್ಲಿಸಲಾಗಿದೆ. ಅನುಮತಿ ಪಡೆದ ಕ್ವಾರಿಗಳು ಕಾರ್ಯನಿರ್ವಹಿಸುತ್ತಿವೆ. ತಾಲ್ಲೂಕಿನಲ್ಲಿ 14 ಮರಳು ಕ್ವಾರಿಗಳಲ್ಲಿ 4 ಕ್ವಾರಿಗಳಿಗೆ ಅವಕಾಶ ನೀಡಲಾಗಿದೆ. ಸ್ಥಳೀಯರ ಬಳಕೆಗೆ ಪಂಚಾಯಿತಿ ಮಟ್ಟದಲ್ಲಿ ಹಳ್ಳ, ತೊರೆಗಳಲ್ಲಿ 27 ಸ್ಥಳ ಗುರುತಿಸಿದ್ದು, 18 ರಲ್ಲಿ ಪಂಚಾಯಿತಿಗೆ ಹಣ ಪಾವತಿಸಿ ಮರಳು ಪಡೆಯಲು ಅವಕಾಶ ನೀಡಲಾಗಿದೆ’ ಎಂದು ಭೂ ಮತ್ತು ಗಣಿ ವಿಜ್ಞಾನ ಇಲಾಖೆಯ ಕಿರಿಯ ವಿಜ್ಞಾನಿ ಅವಿನಾಶ್ ಸಭೆಗೆ ಮಾಹಿತಿ ನೀಡಿದರು.

‘ಮರಳಿನ ದರ ಹೆಚ್ಚಿಸಿ ಕೃತಕ ಅಭಾವ ಸೃಷ್ಟಿಸಲಾಗುತ್ತಿದೆ. ಮೇಲಿನ ಕುರುವಳ್ಳಿ ಕಲ್ಲು ಕ್ವಾರಿಯಲ್ಲಿ ಕಲ್ಲುಗಣಿಗೆ ಅವಕಾಶ ನೀಡದೇ ತೊಂದರೆ ಮಾಡಲಾಗುತ್ತಿದೆ. ಕಲ್ಲು ಒಡೆಯುವುದನ್ನೇ ಇಲ್ಲಿನ ಕಾರ್ಮಿಕರು ಬದುಕಿಗೆ ಆಶ್ರಯಿಸಿದ್ದಾರೆ. ಈಗ ಬಂಡೆಯಲ್ಲಿ ಕೆಲಸ ಇಲ್ಲದೇ ಇರುವುದರಿಂದ ಕಾರ್ಮಿಕರು ತಮಿಳುನಾಡಿಗೆ ವಲಸೆ ಹೋಗುತ್ತಿದ್ದಾರೆ. ಕಾನೂನು ಬಾಹಿರವಾಗಿ ಬಂಡೆ ಒಡೆಯುತ್ತಿದ್ದರೆ ಅದನ್ನು ಕಾನೂನುಬದ್ಧ ಮಾಡಿ ಅನುಮತಿ ನೀಡಿ. ಕಾರ್ಮಿಕರನ್ನು ಕಳ್ಳರನ್ನಾಗಿಸಬೇಡಿ. ಇದರಿಂದ ಸರ್ಕಾರಕ್ಕೆ ಆದಾಯ ಬರುತ್ತದೆ. ಜನರಿಗೆ ಕಲ್ಲು ಸಿಗುತ್ತದೆ’ ಎಂದು ಆರಗ ಜ್ಞಾನೇಂದ್ರ ಹೇಳಿದರು.

‘ತುಂಗಾ ಆಣೆಕಟ್ಟೆಯಲ್ಲಿ ಮಂಡಗದ್ದೆ ಬಳಿ ಹೆಚ್ಚು ನೀರು ನಿಲ್ಲುತ್ತಿಲ್ಲ. ಮರಳು ಮಿಶ್ರಿತ ಹೂಳು ತುಂಬಿದೆ. ಸಾವಿರಾರು ಲೋಡ್ ಮರಳು ಅಕ್ರಮವಾಗಿ ಸಾಗಾಟವಾಗುತ್ತಿದೆ. ಅರಣ್ಯ, ಗಣಿ ವಿಜ್ಞಾನ, ಪೊಲೀಸ್ ಇಲಾಖೆ ಕೈಕಟ್ಟಿ ಕೂತಿದೆ’ ಎಂದು ತಾಲ್ಲೂಕು ಪಂಚಾಯಿತಿ ಸದಸ್ಯ ಬೇಗುವಳ್ಳಿ ಕವಿರಾಜ್ ದೂರಿದರು.

ಇದಕ್ಕೆ ಉತ್ತರಿಸಿದ ಶಾಸಕ ಆರಗ ಜ್ಞಾನೇಂದ್ರ, ‘ಹೂಳು ಮಿಶ್ರಿತ ಮರಳು ತೆಗೆಯುವ ಕುರಿತು ಮುಖ್ಯಮಂತ್ರಿಯ ಜೊತೆ ಮಾತನಾಡಿದ್ದೇನೆ. ಎಂಎಸ್‌ಐಎಲ್ ಮೂಲಕ ಮರಳು ವಿತರಣೆಗೆ ಕ್ರಮ ತೆಗದುಕೊಳ್ಳಲಾಗುವುದು. ಒಂದೆರಡು ತಿಂಗಳಲ್ಲಿ ಅನುಮತಿ ಸಿಗಲಿದೆ’ ಎಂದು ಉತ್ತರಿಸಿದರು.

ಮಂಜೂರಾದ ಕಾಮಗಾರಿ ಹಣ ಮಾರ್ಚ್ ಅಂತ್ಯದ ವೇಳೆಗೆ ಬಳಕೆಯಾಗಬೇಕು. ಹಣ ವಾಪಸ್‌ ಹೋಗದಂತೆ ಅಧಿಕಾರಿಗಳು ಎಚ್ಚರವಹಿಸಬೇಕು. ಕೊರೊನಾ ಕಾರಣ ಅಭಿವೃದ್ಧಿಗೆ ಕೊಂಚ ಹಿನ್ನಡೆಯಾಗಿದೆ. ಅದನ್ನು ಮುಂದಿನ ದಿನಗಳಲ್ಲಿ ಸರಿಪಡಿಸಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

‘ತಾಲ್ಲೂಕು ಕಚೇರಿಯನ್ನು ಸ್ಥಳಾಂತರಿಸಲಾಗುವುದು. ಈಗಿನ ಸ್ಥಳದಲ್ಲಿ ಹೊಸ ಕಟ್ಟಡ ನಿರ್ಮಾಣವಾಗಲಿದೆ. ಬಾಳೇಬೈಲಿನಲ್ಲಿ ₹ 56 ಕೋಟಿ ವೆಚ್ಚದಲ್ಲಿ ತುಂಗಾ ನದಿಗೆ ಸೇತುವೆ ನಿರ್ಮಾಣವಾಗಲಿದೆ. ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ತ್ವರಿತವಾಗಿ ನಡೆಯುವಂತೆ ಕ್ರಮ ತಗೆದುಕೊಳ್ಳಲಾಗುತ್ತಿದೆ. ತುಂಗಾ ಮೇಲ್ದಂಡೆ ಯೋಜನೆ ಅಡಿಯಲ್ಲಿ ತಾಲ್ಲೂಕಿಗೆ ₹ 33 ಕೋಟಿ ಹಣ ಮಂಜೂರಾಗಿದೆ’ ಎಂದು ಆರಗ ಮಾಹಿತಿ ನೀಡಿದರು.

ಶಾಲೆ ಆವರಣದಲ್ಲಿ ಬೆಳೆದ ಅಕೇಶಿಯಾ, ನೀಲಗಿರಿ ಮರಗಳ ಕಟಾವಿಗೆ ಅರಣ್ಯ ಇಲಾಖೆ ಸಹಕರಿಸಬೇಕು. ಬಿದ್ದುಹೋಗುತ್ತಿರುವ ಶಾಲೆಗಳ ದುರಸ್ತಿಗೆ ಕ್ರಮ ಕೈಗೊಳ್ಳಬೇಕು ಎಂದು ಸದಸ್ಯರಾದ ಚಂದವಳ್ಳಿ ಸೋಮಶೇಖರ್, ಗೀತಾ ಶೆಟ್ಟಿ, ಜಿಲ್ಲಾ ಪಂಚಾಯಿತಿ ಸದಸ್ಯ ಅಪೂರ್ವ ಶರಧಿ ಒತ್ತಾಯಿಸಿದರು.

ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ನವಮಣಿ, ಉಪಾಧ್ಯಕ್ಷೆ ಯಶೋಧ, ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಟಿ.ಮಂಜುನಾಥ್, ಕಾರ್ಯನಿರ್ವಹಣಾಧಿಕಾರಿ ಆಶಾಲತ ಸೇರಿ ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.