ADVERTISEMENT

ಆರಂಭವಾಗದ ನ್ಯೂಮಳಲಿ ಶಾಲೆ: ಪ್ರತಿಭಟನೆ

ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧಿಕಾರಿಗಳಿಂದ ತ್ವರಿತ ಸ್ಪಂದನ

​ಪ್ರಜಾವಾಣಿ ವಾರ್ತೆ
Published 18 ಮೇ 2022, 4:32 IST
Last Updated 18 ಮೇ 2022, 4:32 IST
ಹೊಸನಗರ ತಾಲ್ಲೂಕು ನ್ಯೂ ಮಳಲಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಪೋಷಕರ ಪ್ರತಿಭಟನೆ ಹಿನ್ನೆಲೆಯಲ್ಲಿ ಶಾಲಾ ಆರಂಭದ ಎರಡನೇ ದಿನ ಮಕ್ಕಳಿಗೆ ಹೂಗುಚ್ಛ, ಲಡ್ಡು ನೀಡಿ ಸ್ವಾಗತಿಸಲಾಯಿತು.
ಹೊಸನಗರ ತಾಲ್ಲೂಕು ನ್ಯೂ ಮಳಲಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಪೋಷಕರ ಪ್ರತಿಭಟನೆ ಹಿನ್ನೆಲೆಯಲ್ಲಿ ಶಾಲಾ ಆರಂಭದ ಎರಡನೇ ದಿನ ಮಕ್ಕಳಿಗೆ ಹೂಗುಚ್ಛ, ಲಡ್ಡು ನೀಡಿ ಸ್ವಾಗತಿಸಲಾಯಿತು.   

ಹೊಸನಗರ: ರಾಜ್ಯದಾದ್ಯಂತ ಸೋಮವಾರದಿಂದ ಸರ್ಕಾರಿ ಶಾಲೆಗಳು ಆರಂಭಗೊಂಡಿದ್ದರೂ ತಾಲ್ಲೂಕಿನ ಕರಿಮನೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನ್ಯೂಮಳಲಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಬಾಗಿಲು ತೆಗೆಯದಿರುವುದನ್ನು ಖಂಡಿಸಿ ಪೋಷಕರ ಪ್ರತಿಭಟನೆ ನಡೆಸಿದರು.

ಶಾಲೆಯಲ್ಲಿ 12 ಮಕ್ಕಳು ವ್ಯಾಸಂಗ ಮಾಡುತ್ತಿದ್ದು, ಶಾಲೆಗೆ ಬಂದರೂ ಬಾಗಿಲು ತೆರೆಯದ ಕಾರಣ ಜಗಲಿ ಮೇಲೆ ಕುಳಿತು ವಾಪಸಾಗಿದ್ದರು. ಇದರಿಂದ ಅಸಮಧಾನಗೊಂಡ ಪೋಷಕರು ಮಂಗಳವಾರ ಮಕ್ಕಳ ಜೊತೆ ಶಾಲೆಗೆ ಬಂದು ಶಿಕ್ಷಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ನ್ಯೂಮಳಲಿ ಶಾಲೆಗೆ 2 ಕಾಯಂ ಶಿಕ್ಷಕ ಹುದ್ದೆ ಇದ್ದರೂ, ಯಾವುದೇ ಶಿಕ್ಷಕರನ್ನು ನೀಡಿಲ್ಲ. ಕೂಡಲೇ ಶಿಕ್ಷಕರನ್ನು ನೇಮಿಸಬೇಕು. ಶಾಲೆಯನ್ನು ಆರಂಭಿಸಬೇಕು ಎಂದು ಪೋಷಕರು ಪಟ್ಟುಹಿಡಿದರು.

ADVERTISEMENT

ಪ್ರತಿಭಟನೆ ಸುದ್ದಿ ತಿಳಿಯುತ್ತಿದ್ದಂತೆ ಜಿಲ್ಲಾ ಪಂಚಾಯಿತಿ ಸಿಇಒ ವೈಶಾಲಿ, ಡಿಡಿಪಿಒ ಪರಮೇಶ್ವರಪ್ಪ ಅವರು ಪೋಷಕರೊಂದಿಗೆ ದೂರವಾಣಿಯಲ್ಲಿ ಮಾತನಾಡಿ, ‘ಹೊಸ ನೇಮಕಾತಿಗೆ ಪರೀಕ್ಷೆ ನಡೆಯುತ್ತಿದೆ. ಶಿಕ್ಷಕರ ನಿಯೋಜನೆಯಲ್ಲಿ ನ್ಯೂಮಳಲಿ ಶಾಲೆಗೆ ಆದ್ಯತೆ ನೀಡಲಾಗುವುದು. ಅಲ್ಲಿಯವರೆಗೆ ಸಹಕರಿಸಬೇಕು’ ಎಂದು ಮನವಿ ಮಾಡಿದರು.

ಬಿಇಒ ವೀರಭದ್ರಪ್ಪ ಅವರ ಸೂಚನೆ ಮೇರೆಗೆ ಶಾಲೆಗೆ ದೌಡಾಯಿಸಿದ ಸಿಆರ್‌ಪಿ ಕೆ.ಆರ್. ರವಿ, ಇಸಿಒ ಪರಮೇಶ್ವರ, ಸ್ಥಳೀಯರಾದ ಜಗದೀಶ ಎಂಬುವವರನ್ನು ತಿಥಿ ಶಿಕ್ಷಕರಾಗಿ ನೇಮಿಸಿ, ಕಾರ್ಯನಿರ್ವಹಿಸಲು ಸೂಚಿಸಿದರು.

ಡಿಡಿಪಿಐ ಅವರ ಭರವಸೆಯಂತೆ ಮುಂದಿನ ದಿನಗಳಲ್ಲಿ ಶಾಲೆಗೆ ಕಾಯಂ ಶಿಕ್ಷಕರನ್ನು ನೀಡಬೇಕು. ಇಲ್ಲದಿದ್ದರೆ ಮತ್ತೆ ಪ್ರತಿಭಟನೆ ನಡೆಸಲಾಗುವುದು ಎಂದು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಪಾಂಡುಗೌಡ ಎಚ್ಚರಿಸಿದರು.

ಲಡ್ಡು ನೀಡಿ ಸ್ವಾಗತ: ಶಾಲೆಗೆ ಬಂದ ಮಕ್ಕಳನ್ನು ಶಿಕ್ಷಣ ಇಲಾಖೆ ಅಧಿಕಾರಿಗಳು ಖುದ್ದು ಸ್ವಾಗತಿಸಿದ್ದು ವಿಶೇಷವಾಗಿತ್ತು. ಹೂಗುಚ್ಛ ನೀಡಿ ಲಡ್ಡು ವಿತರಿಸಿ ಸಂಭ್ರಮದ ಮೂಲಕ ಮಕ್ಕಳನ್ನು ಶಾಲೆಗೆ ಬರಮಾಡಿ ಕೊಳ್ಳಲಾಯಿತು. ಪೋಷಕರಾದ ಉಮೇಶ ಗಾಣದಗದ್ದೆ, ಮಂಜುನಾಥ ಹೊಂಗೆಬೈಲು, ಉಮೇಶ್ ಮಳಲಿ, ಸುರೇಶ ಹಾಲಗದ್ದೆ, ದಿವ್ಯಾ ಉಮೇಶ್, ಪವಿತ್ರಾ, ಅಂಬಿಕಾ, ಪ್ರಭಾ ಜ್ಯೋತಿ, ವಸಂತಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.