ತ್ಯಾಗರ್ತಿ: ಅನಿಯಮಿತ ಲೋಡ್ ಶೆಡ್ಡಿಂಗ್‌ನಿಂದಾಗಿ ಗ್ರಾಮದಲ್ಲಿ ನೀರು ಲಭ್ಯವಾಗುತ್ತಿಲ್ಲ ಎಂದು ಗೌತಮಪುರ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಅಶೋಕ್ ನರಸೀಪುರ ಆರೋಪಿಸಿದರು.
ಸಮೀಪದ ಗೌತಮಪುರ ಗ್ರಾಮ ಪಂಚಾಯಿತಿ ಮುಂಭಾಗ ಹಮ್ಮಿಕೊಂಡಿದ್ದ ಧರಣಿಯನ್ನು ಉದ್ದೇಶಿಸಿ ಮಾತನಾಡಿದರು.
ಪ್ರತಿಯೊಬ್ಬರಿಗೂ ಶುದ್ಧ ಕುಡಿಯುವ ನೀರನ್ನು ಪೂರೈಸಬೇಕು ಎಂಬ ಉದ್ದೇಶ ಹೊಂದಲಾಗಿದೆ. ಆದರೆ ವಿದ್ಯುತ್ ಸಮಸ್ಯೆಯಿಂದಾಗಿ ಯೋಜನೆ ನೆರವೇರುತ್ತಿಲ್ಲ ಎಂದು ಹೇಳಿದರು.
ಜಲಾಶಯದ ಅಕ್ಕಪಕ್ಕದ ಭೂಮಿಯಲ್ಲಿನ ರೈತರು ಬೆಳೆ ಸಂರಕ್ಷಣೆಗೆ ರಾಸಾಯನಿಕವನ್ನು ಸಿಂಪಡಿಸುತ್ತಿದ್ದು, ಅದು ನೇರವಾಗಿ ಜಲಾಶಯವನ್ನು ಸೇರುತ್ತಿದೆ. ಇದೇ ನೀರು ಪ್ರತಿ ಮನೆಗಳಿಗೆ ಸರಬರಾಜಾಗುತ್ತಿದ್ದು, ಈ ನೀರನ್ನು ಕುಡಿದು ಹಲವರು ಸಾಂಕ್ರಾಮಿಕ ರೋಗಗಳಿಂದ ನರಳುತ್ತಿದ್ದಾರೆ.ಈ ಬಗ್ಗೆ ಸಂಬಂಧಪಟ್ಟ ಇಲಾಖೆ ಸಿಬ್ಬಂದಿ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಈ ಸಮಸ್ಯೆಗೆ ಪರಿಹಾರ ಸಿಗದಿದ್ದರೆ ತಾಲ್ಲೂಕು ವಿಕಾಸಸೌಧದ ಎದುರು ಧರಣಿ ಮಾಡಲಾಗುತ್ತದೆ ಎಂದು ಗೌತಮಪುರ ಗ್ರಾಮ ಪಂಚಾಯಿತಿ ಸದಸ್ಯ ಪರಮೇಶ್ ಕಣ್ಣೂರ್ ಎಚ್ಚರಿಕೆ ನೀಡಿದರು.
ಗ್ರಾಮ ಪಂಚಾಯಿತಿ ಸದಸ್ಯರಾದ ಬೂದ್ಯಪ್ಪ ಹೊಸಕೊಪ್ಪ, ಶಿವಕುಮಾರ್, ಶಕುಂತಲಾ, ಗೀತಾ, ಶಶಿರೇಖಾ, ಕಸ್ತೂರಿ ಧರಣಿಯಲ್ಲಿ ಭಾಗಿಯಾಗಿದ್ದರು.
ಧರಣಿ ನಡೆಯುವ ಸ್ಥಳಕ್ಕೆ ವಿದ್ಯುತ್ ಇಲಾಖೆ ಸಹಾಯಕ ಎಂಜಿನಿಯರ್ ಯೋಗೇಂದ್ರಪ್ಪ ಟಿ. ಆಗಮಿಸಿ, ‘ಆನಂದಪುರದ ಎಂಇಎಸ್ಎಸ್‌ನಲ್ಲಿ ಅಗತ್ಯಕ್ಕಿಂತ ಹೆಚ್ಚಿನ ವಿದ್ಯುತ್ ಹರಿದು ಹೋಗುತ್ತಿದೆ. ಅಲ್ಲದೇ ಅಂಬಲಿಗೊಳ–ಆನಂದಪುರ ವಿದ್ಯುತ್ ಸ್ಥಾವರದಿಂದ ದೂರವಿರುವುದರಿಂದ ಸರಬರಾಜಿನಲ್ಲಿ ಸಮಸ್ಯೆಯಾಗುತ್ತಿದೆ. ರಾತ್ರಿ ತ್ರೀ ಫೇಸ್ ವಿದ್ಯುತ್ ನೀಡಲಾಗುತ್ತಿದೆ. ತ್ಯಾಗರ್ತಿಯಲ್ಲಿ ವಿದ್ಯುತ್ ಶೇಖರಣ ಕೇಂದ್ರ ಪ್ರಾರಂಭವಾಗುವವರೆಗೆ ಈ ಸಮಸ್ಯೆಗೆ ಪರಿಹಾರವಿಲ್ಲ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.