ADVERTISEMENT

ಪುರಲೆ: ಎಸ್‌ಟಿಪಿ ಕಾಮಗಾರಿ ತಡೆದು ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 24 ಜೂನ್ 2019, 12:39 IST
Last Updated 24 ಜೂನ್ 2019, 12:39 IST
ಶಿವಮೊಗ್ಗ ಸಮೀಪದ ಪುರಲೆ ಬಳಿ ನಿರ್ಮಾಣವಾಗುತ್ತಿರುವ ಮಲಿನ ನೀರು ಶುದ್ಧೀಕರಣ ಘಟಕ ಸ್ಥಗಿತಕ್ಕೆ ಆಗ್ರಹಿಸಿ ಸೋಮವಾರ ಪುರಲೆ, ಗುರುಪುರ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.
ಶಿವಮೊಗ್ಗ ಸಮೀಪದ ಪುರಲೆ ಬಳಿ ನಿರ್ಮಾಣವಾಗುತ್ತಿರುವ ಮಲಿನ ನೀರು ಶುದ್ಧೀಕರಣ ಘಟಕ ಸ್ಥಗಿತಕ್ಕೆ ಆಗ್ರಹಿಸಿ ಸೋಮವಾರ ಪುರಲೆ, ಗುರುಪುರ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.   

ಶಿವಮೊಗ್ಗ: ಮಲಿನ ನೀರು ಶುದ್ಧೀಕರಣ ಘಟಕ (ಎಸ್‌ಟಿಪಿ) ಕಾಮಗಾರಿ ತಡೆದು ಸೋಮವಾರ ಪುರಲೆ, ಗುರುಪುರ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.

ಪುರಲೆ ಸರ್ವೆ ನಂಬರ್ 33/ಪಿರಲ್ಲಿ ಸುಮಾರು 2.36 ಎಕರೆ ಗೋಮಾಳ ಜಾಗವಿದೆ. ಸರ್ಕಾರದ ಆದೇಶ ಇಲ್ಲದಿದ್ದರೂ ಈ ಸ್ಥಳದಲ್ಲಿ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಎಂಜಿನಿಯರ್‌ಗಳು, ಗುತ್ತಿಗೆದಾರರು ನಿಯಬಾಹಿರವಾಗಿ ಕಾಮಗಾರಿ ಆರಂಭಿಸಿದ್ದಾರೆ. ಈ ಯೋಜನೆ ಮುಂದುವರಿಸಲು ಬಿಡುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಯೋಜನೆಯ ಸ್ಥಳ ಜನವಸತಿ ಪ್ರದೇಶದ ಮಧ್ಯಭಾಗದಲ್ಲಿದೆ. ಪುರಲೆ, ಹೊಸಬಡಾವಣೆ ಪುರಲೆ, ಗುರುಪುರ, ಮಂಜುನಾಥ ಬಡಾವಣೆಗಳು ತೀವ್ರಗತಿಯಲ್ಲಿ ಬೆಳೆಯುತ್ತಿವೆ. ಈ ಭಾಗದಲ್ಲಿ ಆಸ್ಪತ್ರೆ, ಶಾಲೆಗಳು ಇವೆ. ಈ ಯೋಜನೆ ಅನುಷ್ಠಾನಗೊಂಡರೆ ಸುತ್ತಮುತ್ತಲಿನ ಬಡಾವಣೆಗಳ ಜನರು ಗಂಭೀರ ಸಮಸ್ಯೆ ಎದುರಿಸಬೇಕಾಗುತ್ತದೆ. ನಗರದ ಕಲ್ಮಶ ಇಲ್ಲಿಗೆ ಹರಿಸುವುದರಿಂದ ಆರೋಗ್ಯದ ಸಮಸ್ಯೆ, ಸ್ವಚ್ಛತೆಯ ಕೊರತೆ ಕಾಣುತ್ತದೆ. ಹಾಗಾಗಿ, ತಕ್ಷಣ ನಿರ್ಜನ ಪ್ರದೇಶಕ್ಕೆ ಈ ಯೋಜನೆ ಸ್ಥಳಾಂತರಿಸಬೇಕು ಎಂದು ಒತ್ತಾಯಿಸಿದರು.

ADVERTISEMENT

ಈ ಯೋಜನೆ ಪರಿಣಾಮ ಸುತ್ತಮುತ್ತಲಿನ ಪ್ರದೇಶದಲ್ಲಿ ದುರ್ವಾಸನೆ ಹರಡುತ್ತದೆ. ಈ ಪ್ರದೇಶದ ನಾಗರಿಕರು ಜೀವನ ನಡೆಸುವುದು ಕಷ್ಟವಾಗುತ್ತದೆ. ಸಂಕ್ರಾಮಿಕ ರೋಗಗಳು ಹರಡುತ್ತವೆ. ಅಂತರ್ಜಲವು ಕಲುಷಿತಗೊಳ್ಳುತ್ತದೆ ಎಂದು ಕಳವಳ ವ್ಯಕ್ತಪಡಿಸಿದರು.

ಜೂನ್‌ 20ರಂದು ಈ ಯೋಜನೆ ವಿರೋಧಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದರು. ಸ್ಥಳಕ್ಕೆ ಭೇಟಿ ನೀಡಿದ್ದ ಜಿಲ್ಲಾಧಿಕಾರಿ ಈ ಯೋಜನೆ ನಿಲ್ಲಿಸಲು ತಮ್ಮಿಂದ ಸಾಧ್ಯವಿಲ್ಲ. ಇದು ಜಿಲ್ಲಾಡಳಿತದ ಯೋಜನೆಯಲ್ಲ. ಉನ್ನತ ಅಧಿಕಾರಿಗಳ ಬಳಿ ಚರ್ಚಿಸಬೇಕು ಎಂದು ತಿಳಿಸಿದ್ದರು. ಯೋಜನೆ ಸ್ಥಗಿತಗೊಳಿಸುವವರೆಗೂ ಹೋರಾಟ ಮುಂದುವರಿಸುತ್ತೇವೆ ಎಂದು ಎಚ್ಚರಿಸಿದರು.

ಸ್ಥಳಕ್ಕೆ ಭೇಟಿ ನೀಡಿದ ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಶ್ರೀಕಾಂತ್, ಮಾಜಿ ಮೇಯರ್ ನಾಗರಾಜ ಕಂಕಾರಿ, ಮುಖ್ಯಮಂತ್ರಿ ಬಳಿಗೆ ಗ್ರಾಮಸ್ಥರ ನಿಯೋಗ ತೆರಳಿ ಮನವಿ ಸಲ್ಲಿಸಲು ಸಲಹೆ ನೀಡಿದರು.

ಮಾಜಿ ಶಾಸಕ ಎಚ್.ಎಂ.ಚಂದ್ರಶೇಖರಪ್ಪ, ಪಾಲಿಕೆ ಮಾಜಿ ಸದಸ್ಯ ಮೋಹನ್‌ ರೆಡ್ಡಿ, ಗ್ರಾಮದ ಮುಖಂಡರಾದ ಚಂದ್ರಪ್ಪ, ಕುಮಾರ್, ಕಾರ್ತಿಕ್‌, ಶಿವಕುಮಾರ್ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.