ADVERTISEMENT

ರಾಘವೇಂದ್ರ ನಾಮಪತ್ರ ಸಲ್ಲಿಕೆ: ಬಿಸಿಲು ಲೆಕ್ಕಿಸದೇ ಹೆಜ್ಜೆ ಹಾಕಿದ ಬೆಂಬಲಿಗರು

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2024, 7:08 IST
Last Updated 18 ಏಪ್ರಿಲ್ 2024, 7:08 IST
   

ಶಿವಮೊಗ್ಗ: ಶಿವಮೊಗ್ಗ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಸಂಸದ ಬಿ.ವೈ.ರಾಘವೇಂದ್ರ ನಾಮಪತ್ರ ಸಲ್ಲಿಕೆಗೆ ಇಲ್ಲಿನ ರಾಮಣ್ಣಶ್ರೇಷ್ಠಿ ಪಾರ್ಕ್ ನಿಂದ ಆರಂಭವಾಗಿರುವ ಬಿಜೆಪಿ-ಜೆಡಿಎಸ್ ಬೆಂಬಲಿಗರ ಬೃಹತ್ ಮೆರವಣಿಗೆ ಚುನಾವಣೆಗೆ ಮುನ್ನವೇ ಮೈತ್ರಿ ಪಕ್ಷಗಳ ಶಕ್ತಿ ಪ್ರದರ್ಶನಕ್ಕೆ ಸಾಕ್ಷಿಯಾಗಿದೆ.

ಮುಂಜಾನೆಯಿಂದಲೇ ರಾಮಣ್ಣ ಶ್ರೇಷ್ಠಿ ಪಾರ್ಕ್ ನ ಗಣೇಶನ ಗುಡಿ ಅಂಗಳಕ್ಕೆ ಬೆಂಬಲಿಗರು ದೌಡಾಯಿಸುತ್ತಿದ್ದು, ಗಾಂಧಿ ಬಜಾರ್ ಮುಖ್ಯ ರಸ್ತೆಯಲ್ಲಿ ಭಾರೀ ಸಂಖ್ಯೆಯಲ್ಲಿ ನೆರೆದಿದ್ದಾರೆ. ಬೇಸಿಗೆಯ ಉರಿ ಬಿಸಿಲನ್ನು ಲೆಕ್ಕಿಸದೇ ಎರಡೂ ಪಕ್ಷಗಳ ಬೆಂಬಲಿಗರು ಮೆರವಣಿಗೆಯಲ್ಲಿ ನೆರೆದಿದ್ದು, ಶಿವಮೊಗ್ಗದ ಹೃದಯಭಾಗ ಕೇಸರಿಮಯವಾಗಿ ಮಾರ್ಪಟ್ಟಿದೆ. ಬಿಜೆಪಿ ಬೆಂಬಲಿಗರು ಕೇಸರಿ ಟೋಪಿ, ಹೆಗಲಿಗೆ ಶಾಲು ಹಾಕಿಕೊಂಡಿದ್ದರೆ ಜೆಡಿಎಸ್ ಬೆಂಬಲಿಗರು ಹಸಿರು ಶಾಲು ಧರಿಸಿ ಹೆಜ್ಜೆ ಹಾಕಿದ್ದಾರೆ.

ಮೆರವಣಿಗೆಗೆ ಮುನ್ನ ಬಿ.ವೈ. ರಾಘವೇಂದ್ರ ಇಲ್ಲಿನ ಜಿಲ್ಲಾಧಿಕಾರಿ ಕಚೇರಿಗೆ ಬಂದು ನಾಮಪತ್ರ ಸಲ್ಲಿಸಿದರು. ಈ ವೇಳೆ ಶಿವಮೊಗ್ಗ ಗ್ರಾಮಾಂತರ ಶಾಸಕಿ ಶಾರದಾ ಪೂರ್ಯಾನಾಯ್ಕ, ವಿಧಾನಪರಿಷತ್ ಮಾಜಿ ಸದಸ್ಯ ಭಾನುಪ್ರಕಾಶ್, ಮಾಜಿ ಶಾಸಕ ಹರತಾಳು ಹಾಲಪ್ಪ ಇದ್ದರು.

ADVERTISEMENT

ಮೆರವಣಿಗೆಯಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ, ಎಚ್.ಡಿ.ಕುಮಾರಸ್ವಾಮಿ, ಬಸವರಾಜ ಬೊಮ್ಮಾಯಿ, ಮಾಜಿ ಡಿಸಿಎಂ ಗೋವಿಂದ ಕಾರಜೋಳ ಪಾಲ್ಗೊಳ್ಳಲಿದ್ದಾರೆ.

ಮೆರವಣಿಗೆಯಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದು, ನಗರದ ಪ್ರಮುಖ ವೃತ್ತಗಳಲ್ಲಿ ಜನಜಂಗುಳಿ ಕಾಣಸಿಗುತ್ತಿದೆ.

ಮೆರವಣಿಗೆಯಲ್ಲಿ ಪಾಲ್ಗೊಂಡ ಬೆಂಬಲಿಗರ ದಾಹ ತಣಿಸಲು ವಾಹನಗಳಲ್ಲಿ ನೀರು, ಮಜ್ಜಿಗೆ ತಂದು ವಿತರಿಸಲಾಗುತ್ತಿದೆ.

ಮೆರವಣಿಗೆ ಗಾಂಧಿ ಬಜಾರ್ ಮುಖ್ಯರಸ್ತೆಯ ಮೂಲಕ ಶಿವಪ್ಪ ನಾಯಕ ವೃತ್ತಕ್ಕೆ ಬರಲಿದ್ದು, ಅಲ್ಲಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಸೇರಿದಂತೆ ಮುಖಂಡರಿಗೆ ಬೃಹತ್ ಸೇಬಿನ ಹಾರ ಹಾಕಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಮೆರವಣಿಗೆ ಅಲ್ಲಿಂದ ಅಮೀರ್ ಅಹಮದ್ ವೃತ್ತ, ನೆಹರೂ ರಸ್ತೆ ಮೂಲಕ ಸೀನಪ್ಪ ಶೆಟ್ಟಿ (ಗೋಪಿ ವೃತ್ತ) ವೃತ್ತಕ್ಕೆ ಬರಲಿದೆ. ನಂತರ ಅಲ್ಲಿ ಸಾರ್ವಜನಿಕ ಸಭೆ ನಡೆಯಲಿದೆ.

ಮೆರವಣಿಗೆಗೆ ವಾದ್ಯ ಮೇಳ,ಉ ಗೊಂಬೆ ಮೇಳ, ಡೊಳ್ಳು ತಂಡ ಸಾಥ್ ನೀಡಿವೆ. .

ನಾಮಪತ್ರ ಸಲ್ಲಿಕೆಗೂ ಮುನ್ನ ಬಿ.ವೈ.ರಾಘವೇಂದ್ರ ಕೋಟೆ ಆಂಜನೇಯ ಸ್ವಾಮಿ, ಮಾರಿಕಾಂಬೆ ಹಾಗೂ ರಾಮಣ್ಣ ಶ್ರೇಷ್ಠಿ ಪಾರ್ಕ್ ನ ಗಣೇಶನ ಗುಡಿಯಲ್ಲಿ ಪೂಜೆ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.