ADVERTISEMENT

ಆತಂಕ ದೂರ ಮಾಡಿದ ಆರಿದ್ರಾ

​ಪ್ರಜಾವಾಣಿ ವಾರ್ತೆ
Published 6 ಜುಲೈ 2022, 4:00 IST
Last Updated 6 ಜುಲೈ 2022, 4:00 IST
ಹೊಸನಗರ ತಾಲ್ಲೂಕು ಮಾಸ್ತಿಕಟ್ಟೆಯಲ್ಲಿ ಸುರಿದ ಭಾರೀ ಮಳೆ
ಹೊಸನಗರ ತಾಲ್ಲೂಕು ಮಾಸ್ತಿಕಟ್ಟೆಯಲ್ಲಿ ಸುರಿದ ಭಾರೀ ಮಳೆ   

ಹೊಸನಗರ: ತಾಲ್ಲೂಕಿನಲ್ಲಿ ಮಳೆ ಮುಂದುವರಿದಿದ್ದು, ಮೂರು ದಿನಗಳಿಂದ ತಾಲ್ಲೂಕಿನಲ್ಲಿ ಮಳೆ ಆರ್ಭಟ ಜೋರಾಗಿದೆ.

ತಾಲ್ಲೂಕಿನ ನಗರ ಹೋಬಳಿಯಲ್ಲಿ ಭಾರಿ ಮಳೆ ಸುರಿಯುತ್ತಿದೆ. ಇಲ್ಲಿನ ಜಲಾನಯನ ಪ್ರದೇಶದಲ್ಲಿ ಬೆಳಿಗ್ಗೆಯಿಂದ ಬಿರುಸಿನ ಗಾಳಿ ಜತೆ ಮಳೆ ಸುರಿಯುತ್ತಿದೆ.

ಜಲಾನಯನ ಪ್ರದೇಶವಾದ ಮಾಣಿಯಲ್ಲಿ 23.5 ಸೆಂ.ಮೀ ಮಳೆ ಸುರಿದಿದ್ದು, ಜಿಲ್ಲೆಯಲ್ಲಿಯೇ ಅತಿಹೆಚ್ಚು ಮಳೆ ಇಲ್ಲಿ ಬಂದಿದೆ.

ADVERTISEMENT

ಮೃಗಶಿರ ಮಳೆ ಕೈಕೊಟ್ಟಿದ್ದು, ಆರಿದ್ರಾ ಮಳೆಯೂ ಮೊದಲ ಪಾದದಲ್ಲಿ ಸುರಿದಿರಲಿಲ್ಲ. ವಾಡಿಕೆ ಮಳೆಯಲ್ಲಿ ತೀವ್ರ ಕುಸಿತವಾಗಿತ್ತು. ಆರಿದ್ರಾ ಮಳೆ ಅಂತ್ಯಕ್ಕೆ ಬಾರಿ ಪ್ರಮಾಣದಲ್ಲಿ ಸುರಿದು ಆತಂಕವನ್ನು ದೂರ ಮಾಡಿದೆ.

ಉಡುಪಿ ಜಿಲ್ಲೆಗೆ ಹೊಂದಿಕೊಂಡಿರುವ ಇಲ್ಲಿನ ಹುಲಿಕಲ್ ಮತ್ತು ನಾಗೋಡಿ ಘಾಟ್ ಪ್ರದೇಶದಲ್ಲಿ ಮಳೆ ತೀವ್ರತೆ ಹೆಚ್ಚಿದೆ. ಸಂಜೆ ವೇಳೆ ಮಂಜು ಮುಸುಕಿದ ವಾತಾವರಣ ಇದ್ದು, ಘಾಟಿ ರಸ್ತೆ ಸಂಚಾರ ದುಸ್ತರವಾಗಿದೆ. ಇಲ್ಲಿನ ಮಾಣಿ, ಸಾವೇಹಕ್ಕಲು, ಚಕ್ರಾ ಜಲಾಶಯ ಪ್ರದೇಶದಲ್ಲಿ ಶೀತಗಾಳಿ ಬೀಸುತ್ತಿದ್ದು, ಗಾಳಿಯೊಂದಿಗೆ ಮಳೆ ಸುರಿಯುತ್ತಿದೆ.

ಇನ್ನು ಹುಂಚಾ ಹೋಬಳಿ ಕೆರೆಹಳ್ಳಿ, ಕಸಬಾ ಹೋಬಳಿಯಲ್ಲಿ ಸಾಧಾರಣ ಮಳೆ ಸುರಿಯುತ್ತಿದೆ. ತಾಲ್ಲೂಕಿನಲ್ಲಿ ಎಲ್ಲಿಯೂ ಹಾನಿ ಉಂಟಾಗಿಲ್ಲ.

ಮಳೆ ವಿವಿರ: ಮಾಣಿಯಲ್ಲಿ 23.5 ಸೆಂ.ಮೀ, ಹುಲಿಕಲ್ 20 ಸೆಂ.ಮೀ, ಮಾಸ್ತಿಕಟ್ಟೆ 19.3 ಸೆಂ.ಮೀ, ಯಡೂರು 15.7 ಸೆಂ.ಮೀ, ಚಕ್ರಾ 12.7 ಸೆಂ.ಮೀ, ಸಾವೇಹಕ್ಕಲು 10.4 ಸೆಂ.ಮೀ ಮಳೆ ಆಗಿದೆ. ಒಟ್ಟು ಈ ಭಾಗದಲ್ಲಿ 155 ಸೆಂ.ಮೀ ಮಳೆ ದಾಖಲಾಗಿದೆ.

ಧರೆ ಕುಸಿತ ಭೀತಿ

ತಾಲ್ಲೂಕಿನ ಕೆಲವೆಡೆ ಧರೆ ಕುಸಿತ ಭೀತಿ ಎದುರಾಗಿದೆ. ಕಳೆದ ವರ್ಷ ಮಳೆಗಾಲದಲ್ಲಿ ಧರೆ ಕುಸಿತದಿಂದ ಭಾರೀ ಪ್ರಮಾಣ ಹಾನಿ ಸಂಭವಿಸಿದ ಕಾರಣ ಈ ವರ್ಷವೂ ಧರೆ, ಭೂ ಕುಸಿತ ಉಂಟಾಗುತ್ತದೆ ಎಂಬ ಭೀತಿ ಜನರನ್ನು ಕಾಡುತ್ತಿದೆ.

‘ಸಂಪೇಕಟ್ಟೆ, ನಿಟ್ಟೂರು, ಕರಿಮನೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಈ ಹಿಂದೆ ಭೂ ಕುಸಿತ ಉಂಟಾಗಿತ್ತು. ಇನ್ನು ಕೊಲ್ಲೂರು–ಬೈಂದೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಮಳೆಗಾಲದ ದಿನಗಳಲ್ಲಿ ಧರೆ ಕುಸಿತ ಸಾಮಾನ್ಯವಾಗಿದ್ದು, ಈಗ ಸುರಿಯುತ್ತಿರುವ ಮಳೆಗೆ ರಸ್ತೆ ಸಂಚಾರ ಕಡಿತ ಆಗುವ ಅಪಾಯವಿದೆ. ಆದ್ದರಿಂದ ಜಿಲ್ಲಾಡಳಿತ ಧರೆ ಕುಸಿತದ ಬಗ್ಗೆ ಮಂಜಾಗ್ರತೆ ಕ್ರಮ ಅನುಸರಿಸಬೇಕು’ ಎಂದು ನಗರ ಗ್ರಾಮ ಪಂಚಾಯಿತಿ ಅಧ್ಯಕ್ಷ ಕರುಣಾಕರ ಶೆಟ್ಟಿ ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.