ADVERTISEMENT

ಚುರುಕುಗೊಂಡ ಕೃಷಿ ಕಾರ್ಯ; ಸಿಗದ ಐ.ಇ.ಟಿ. ಭತ್ತದ ತಳಿ

​ಪ್ರಜಾವಾಣಿ ವಾರ್ತೆ
Published 8 ಜುಲೈ 2022, 5:26 IST
Last Updated 8 ಜುಲೈ 2022, 5:26 IST
ಕೋಣಂದೂರು ಸಮೀಪದ ಮಕ್ಕಿಬೈಲಿನಲ್ಲಿ ನಾಟಿಗಾಗಿ ಸಿದ್ದವಾಗುತ್ತಿರುವ ಸಸಿ ಮುಡಿ
ಕೋಣಂದೂರು ಸಮೀಪದ ಮಕ್ಕಿಬೈಲಿನಲ್ಲಿ ನಾಟಿಗಾಗಿ ಸಿದ್ದವಾಗುತ್ತಿರುವ ಸಸಿ ಮುಡಿ   

ಕೋಣಂದೂರು: ರಾಜ್ಯದಾದ್ಯಂತ ಕಳೆದ ಮೂರು ದಿಗನಳಿಂದ ಉತ್ತಮವಾಗಿ ಸುರಿಯುತ್ತಿರುವ ಪುನರ್ವಸು ಮಳೆ ಮಲೆನಾಡಿನಲ್ಲಿ ಕೃಷಿ ಚಟುವಟಿಕೆಗೆ ಚುರುಕು ಮೂಡಿಸಿದೆ.

ಭತ್ತದ ಗದ್ದೆಗಳಲ್ಲಿ ಗೊಬ್ಬರ ಹಾಕುವ, ಸಸಿ ಮಡಿ ಹಾಕುವ ಕಾಯಕ ಭರದಿಂದ ಸಾಗುತ್ತಿದೆ. ಎತ್ತು– ಕೋಣಗಳ ಬದಲಾಗಿ ಟ್ರ್ಯಾಕ್ಟರ್, ಟಿಲ್ಲರ್‌ಗಳು ಗದ್ದೆಯಲ್ಲಿ ಸದ್ದು ಮಾಡುತ್ತಿವೆ. ಭತ್ತದ ಗದ್ದೆಯನ್ನು ಸಿದ್ಧಗೊಳಿಸಿ ಸಸಿ ಮುಡಿ ಸಿದ್ಧತೆ ನಡೆದಿದೆ. ನೀರಿನ ಗದ್ದೆಗಳಲ್ಲಿ ಮಾತ್ರ ಸಸಿ ಮುಡಿ ಹಾಕಲಾಗುತ್ತಿದ್ದು, ಮಳೆ ಆಶ್ರಿತ ಮಕ್ಕಿ ಗದ್ದೆಗಳಲ್ಲಿ ಈ ಪ್ರಕ್ರಿಯೆ ತುಸು ವಿಳಂಬವಾಗಲಿದೆ.

ಮಲೆನಾಡಿನ ಶೇ 95ರಷ್ಟು ಕೃಷಿಕರು ಸಾಂಪ್ರದಾಯಿಕ ತಳಿಯಾದ ಐ.ಇ.ಟಿ. ಭತ್ತವನ್ನು ಬಳಸುತ್ತಾರೆ. ಆದರೆ, ರೈತ ಸಂಪರ್ಕ ಕೇಂದ್ರದಲ್ಲಿ ಐ.ಇ.ಟಿ. ಭತ್ತ ಸಿಗುತ್ತಿಲ್ಲ ಎಂಬುದು ಮಲೆನಾಡಿನ ಬಹುತೇಕ ಕೃಷಿಕರ ಆರೋಪ. ಈ ತಳಿಯಿಂದ ಭತ್ತದ ಜೊತೆ ಜಾನುವಾರುಗಳಿಗೆ ಸಾಕಷ್ಟು ಪ್ರಮಾಣದ ಹುಲ್ಲು (ಮೇವು) ಸಹ ಸಿಗುತ್ತದೆ.

ADVERTISEMENT

ಮಳೆ ಆಶ್ರಿತ ಮಕ್ಕಿಗದ್ದೆಗಳಲ್ಲಿ ಮಾತ್ರ ಭತ್ತದ ಅಲ್ಪಾವಧಿ ತಳಿಗಳಾದ ಎಂ.ಟಿ.ಯು.1001, ಐ.ಇ.ಟಿ. ತುಂಗಾ, ಜೆ.ಜಿ.ಎಲ್, ಆರ್.ಎನ್.ಆರ್. ಇತರ ತಳಿಗಳನ್ನು ವಾಣಿಜ್ಯ ಉದ್ದೇಶಕ್ಕಾಗಿ ಬೆಳೆಯುತ್ತಾರೆ.

ಕೃಷಿ ಕಾರ್ಮಿಕರ ಅಲಭ್ಯತೆ, ರಸಗೊಬ್ಬರಗಳ ಬೆಲೆ ಏರಿಕೆ, ಭತ್ತಕ್ಕೆ ಉತ್ತಮ ಧಾರಣೆ ಇಲ್ಲದಿರುವುದರಿಂದ ಬಹುತೇಕ ಭತ್ತದ ಗದ್ದೆಗಳು ಈಚೆಗೆ ಅಡಿಕೆ ತೋಟಗಳಾಗಿ ಮಾರ್ಪಡುತ್ತಿವೆ. ಕೊರೊನಾ ನಂತರದಲ್ಲಿ ನಗರಗಳಿಂದ ಹಳ್ಳಿಗಳತ್ತ ಮುಖ ಮಾಡಿರುವ ಬಹುತೇಕ ಯುವಕರು ವಾಣಿಜ್ಯ ಬೆಳೆಗಳಾದ ಅಡಿಕೆ, ಕಾಫಿ, ಶುಂಠಿಗಳತ್ತ ಚಿತ್ತ ಹರಿಸುತ್ತಿದ್ದಾರೆ.

ಮಲೆನಾಡಿನಲ್ಲಿ ನಿರಂತರ ಸುರಿಯುತ್ತಿರುವ ಮಳೆಯಿಂದ ಪ್ರಮುಖ ವಾಣಿಜ್ಯ ಬೆಳೆಯಾದ ಅಡಿಕೆಗೆ ಕೊಳೆ ರೋಗದ ಆತಂಕ ಎದುರಾಗಿದೆ. ರೈತರು ಈಗಾಗಲೇ ಒಂದೆರಡು ಬಾರಿ ಔಷಧ ಸಿಂಪಡಿಸಿದ್ದಾರೆ. ಮಳೆ ಹೀಗೆಯೇ ಮುಂದುವರಿದರೆ ಕೊಳೆ ರೋಗ ಹೆಚ್ಚಾಗುವ ಸಾಧ್ಯತೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.