ADVERTISEMENT

ಅತಿವೃಷ್ಟಿಯಿಂದ ₹20 ಕೋಟಿಗೂ ಅಧಿಕ ನಷ್ಟ: ಶಾಸಕ ಗೋಪಾಲಕೃಷ್ಣ ಬೇಳೂರು

​ಪ್ರಜಾವಾಣಿ ವಾರ್ತೆ
Published 29 ಜುಲೈ 2025, 6:53 IST
Last Updated 29 ಜುಲೈ 2025, 6:53 IST
ಸಾಗರದ ಉಪವಿಭಾಗಾಧಿಕಾರಿ ಕಚೇರಿಯಲ್ಲಿ ಶಾಸಕ ಗೋಪಾಲಕೃಷ್ಣ ಬೇಳೂರು ಮಳೆ ಹಾನಿ ಪರಿಹಾರದ ಕುರಿತು ಅಧಿಕಾರಿಗಳ ಸಭೆ ನಡೆಸಿದರು
ಸಾಗರದ ಉಪವಿಭಾಗಾಧಿಕಾರಿ ಕಚೇರಿಯಲ್ಲಿ ಶಾಸಕ ಗೋಪಾಲಕೃಷ್ಣ ಬೇಳೂರು ಮಳೆ ಹಾನಿ ಪರಿಹಾರದ ಕುರಿತು ಅಧಿಕಾರಿಗಳ ಸಭೆ ನಡೆಸಿದರು   

ಸಾಗರ: ತಾಲ್ಲೂಕಿನಲ್ಲಿ ಈ ವರ್ಷ ಅತಿವೃಷ್ಟಿಯಿಂದ ₹ 20 ಕೋಟಿಗೂ ಅಧಿಕ ಪ್ರಮಾಣದಲ್ಲಿ ನಷ್ಟ ಸಂಭವಿಸಿದೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ತಿಳಿಸಿದ್ದಾರೆ. 

ಇಲ್ಲಿನ ಉಪವಿಭಾಗಾಧಿಕಾರಿ ಕಚೇರಿಯಲ್ಲಿ ಮಳೆ ಹಾನಿ ಪರಿಹಾರದ ಕುರಿತು ಅಧಿಕಾರಿಗಳೊಂದಿಗೆ ಸೋಮವಾರ ಸಮಾಲೋಚನಾ ಸಭೆ ನಡೆಸಿದ ಅವರು, ಬೆಳೆ ನಷ್ಟ ಅನುಭವಿಸಿರುವ ರೈತರು, ಬೆಳೆಗಾರರಿಗೆ ಪರಿಹಾರ ಕೊಡುವ ಸಂಬಂಧ ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು. 

ಈ ವರ್ಷ ಭಾರಿ ಮಳೆಯ ಕಾರಣ 50 ಅಂಗನವಾಡಿ, 265 ಶಾಲಾ ಕಟ್ಟಡ, 23 ರಸ್ತೆ, 15 ಸೇತುವೆಗೆ ಹಾನಿ ಉಂಟಾಗಿದೆ. ಹಲವೆಡೆ ವಿದ್ಯುತ್ ಕಂಬಗಳು ಮುರಿದು ಹೋಗಿವೆ. 10 ಕಡೆ ಭೂ ಕುಸಿತ ಉಂಟಾಗಿದೆ. ನೂರಕ್ಕೂ ಹೆಚ್ಚು ಮನೆಗಳು ಹಾಗೂ ಭತ್ತ, ಜೋಳ, ಅಡಿಕೆ ಫಸಲಿಗೆ ಹಾನಿ ಉಂಟಾಗಿದ್ದು ನಷ್ಟದ ಕುರಿತು ಅಂದಾಜು ತಯಾರಿಸುವಂತೆ ಅವರು ಅಧಿಕಾರಿಗಳಿಗೆ ತಾಕೀತು ಮಾಡಿದರು. 

ADVERTISEMENT

ತಾಲ್ಲೂಕಿನಲ್ಲಿ ಬಿತ್ತನೆ ಬೀಜ, ರಸಗೊಬ್ಬರಕ್ಕೆ ಯಾವುದೇ ಕೊರತೆಯಿಲ್ಲ. ಬೆಳೆಗೆ ತೊಂದರೆಯಾಗದ ರೀತಿಯಲ್ಲಿ ಗೊಬ್ಬರ, ಕೀಟ ನಾಶಕ ಬಳಸುವ ಸಂಬಂಧ ಕೃಷಿ ಇಲಾಖೆಯಿಂದ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದರು. 

ಅರಣ್ಯ ಪ್ರದೇಶಕ್ಕೆ ಸಾಕು ಪ್ರಾಣಿಗಳನ್ನು ಬಿಡುವಂತಿಲ್ಲ ಎಂಬ ಹೇಳಿಕೆಯನ್ನು ಅರಣ್ಯ ಸಚಿವರು ಹಿಂದಕ್ಕೆ ಪಡೆದಿದ್ದಾರೆ. ತಾಲ್ಲೂಕಿನ ಹಿರಳೆ ಗ್ರಾಮದ ತಿಮ್ಮಪ್ಪ ಎಂಬ ರೈತನ ಶುಂಠಿ ಬೆಳೆಯನ್ನು ಅರಣ್ಯ ಇಲಾಖೆ ನಾಶ ಪಡಿಸಿಲ್ಲ. ಗ್ರಾಮಕ್ಕೆ ಸೇರಿದ ಭೂಮಿಯಲ್ಲಿ ಕೃಷಿ ಮಾಡಿದ್ದರಿಂದ ಕ್ರಮ ಕೈಗೊಳ್ಳಲಾಗಿದೆ. ಆದಾಗ್ಯೂ ರೈತ ಸಂಘ ಪ್ರತಿಭಟನೆ ನಡೆಸಿರುವ ಕ್ರಮ ಸರಿಯಲ್ಲ ಎಂದರು. 

ಮಳೆಗಾಲದ ನಡುವೆಯೂ ವಿದ್ಯುತ್ ಸಂಪರ್ಕವನ್ನು ಸಮರ್ಪಕವಾಗಿ ಕಲ್ಪಿಸಲು ಮೆಸ್ಕಾಂ ಸಿಬ್ಬಂದಿ ಶ್ರಮಿಸುತ್ತಿದ್ದಾರೆ. ಆದರೆ ಕೆಲವೆಡೆ ಉದ್ದೇಶಪೂರ್ವಕವಾಗಿ ಕೆಲವು ಅಧಿಕಾರಿ ಸಿಬ್ಬಂದಿ ತಮ್ಮ ಮೊಬೈಲ್ ಪೋನ್‌ ಅನ್ನು ಸ್ವಿಚ್ ಆಫ್ ಮಾಡಿಕೊಂಡಿರುವ ದೂರುಗಳಿವೆ. ಅಂತಹವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದರು. 

ಉಪವಿಭಾಗಾಧಿಕಾರಿ ವೀರೇಶ್ ಕುಮಾರ್, ತಹಶೀಲ್ದಾರ್ ಚಂದ್ರಶೇಖರ್ ನಾಯ್ಕ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಗುರುಕೃಷ್ಣ ಶೆಣೈ, ಕೃಷಿ ಇಲಾಖೆ ಅಧಿಕಾರಿ ಶಿವಪ್ರಕಾಶ್, ಕ್ಷೇತ್ರ ಶಿಕ್ಷಣಾಧಿಕಾರಿ ಪರಶುರಾಮಪ್ಪ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.