ADVERTISEMENT

ಮಳೆ ಹಾನಿ: ಸಂತ್ರಸ್ತರಿಗೆ ಪರಿಹಾರ ನೀಡಿ

ಅಧಿಕಾರಿಗಳಿಗೆ ಶಾಸಕ ಎಚ್.ಹಾಲಪ್ಪ ಹರತಾಳು ಸೂಚನೆ

​ಪ್ರಜಾವಾಣಿ ವಾರ್ತೆ
Published 18 ಜುಲೈ 2021, 5:48 IST
Last Updated 18 ಜುಲೈ 2021, 5:48 IST
ಸಾಗರದ ನಗರಸಭೆ ರಂಗಮಂದಿರದಲ್ಲಿ ಶಾಸಕ ಎಚ್. ಹಾಲಪ್ಪ ಹರತಾಳು ಶನಿವಾರ ಮಳೆಹಾನಿ ಕುರಿತು ಅಧಿಕಾರಿಗಳೊಂದಿಗೆ ಸಮಾಲೋಚನಾ ಸಭೆ ನಡೆಸಿದರು
ಸಾಗರದ ನಗರಸಭೆ ರಂಗಮಂದಿರದಲ್ಲಿ ಶಾಸಕ ಎಚ್. ಹಾಲಪ್ಪ ಹರತಾಳು ಶನಿವಾರ ಮಳೆಹಾನಿ ಕುರಿತು ಅಧಿಕಾರಿಗಳೊಂದಿಗೆ ಸಮಾಲೋಚನಾ ಸಭೆ ನಡೆಸಿದರು   

ಸಾಗರ: ತಾಲ್ಲೂಕಿನಲ್ಲಿ ಒಂದು ವಾರದಿಂದ ಅಧಿಕ ಪ್ರಮಾಣದಲ್ಲಿ ಮಳೆಯಾಗಿದ್ದು, ಮಳೆ ಹಾನಿ ಸಂತ್ರಸ್ತರಿಗೆಶೀಘ್ರ ಪರಿಹಾರ ನೀಡಬೇಕು ಎಂದು ಶಾಸಕ ಎಚ್. ಹಾಲಪ್ಪ ಹರತಾಳು ಅಧಿಕಾರಿಗಳಿಗೆ ಸೂಚಿಸಿದರು.

ನಗರಸಭೆ ರಂಗಮಂದಿರದಲ್ಲಿ ಶನಿವಾರ ಮಳೆ ಹಾನಿ ಕುರಿತು ಅಧಿಕಾರಿಗಳೊಂದಿಗೆ ನಡೆದ ಸಮಾ
ಲೋಚನಾ ಸಭೆಯಲ್ಲಿ ಮಾತನಾಡಿದರು.

ಮಳೆಯಿಂದಾಗಿ ಹಾನಿ ಉಂಟಾದಾಗ ನಷ್ಟದ ಅಂದಾಜು ಪಟ್ಟಿಯನ್ನು ಸಮರ್ಪಕವಾಗಿ ತಯಾರಿಸಬೇಕು. ನಷ್ಟ ಅನುಭವಿಸಿದವರಿಗೆ ಸಾಧ್ಯವಾದಷ್ಟು ಮಟ್ಟಿಗೆ ಸರ್ಕಾರದಿಂದ ಹೆಚ್ಚಿನ ಪರಿಹಾರ ದೊರಕುವಂತೆ ನೋಡಿ
ಕೊಳ್ಳಬೇಕು. ಲೋಕೋಪಯೋಗಿ ಇಲಾಖೆ, ಜಿಲ್ಲಾ ಪಂಚಾಯಿತಿ ವ್ಯಾಪ್ತಿಗೆ ಬರುವ ರಸ್ತೆ, ಸೇತುವೆಗಳಿಗೆ ಹಾನಿ ಉಂಟಾಗಿದ್ದಲ್ಲಿ ಈ ಬಗ್ಗೆ ಶೀಘ್ರ ಸರ್ಕಾರಕ್ಕೆ ವರದಿ ಸಲ್ಲಿಸಬೇಕು. ಇವುಗಳ ದುರಸ್ತಿಗೆ ಅಗತ್ಯ ಅನುದಾನವನ್ನು ಸರ್ಕಾರದಿಂದ ಕೊಡಿಸಲಾಗುವುದು ಎಂದು ಹೇಳಿದರು.

ADVERTISEMENT

ಕೋವಿಡ್ ಮೂರನೇ ಅಲೆ ಬರುವ ಕುರಿತು ತಜ್ಞರು ಎಚ್ಚರಿಕೆ ನೀಡುತ್ತಲೇ ಇದ್ದಾರೆ. ಹೀಗಾಗಿ ಮೂರನೇ ಅಲೆಯನ್ನು ಎದುರಿಸಲು ತಾಲ್ಲೂಕು ಆಡಳಿತ ಸಜ್ಜಾಗಬೇಕು. ಆಸ್ಪತ್ರೆಗಳಿಗೆ ಅಗತ್ಯವಿರುವ ಪರಿಕರ ಕೂಡಲೇ ಪೂರೈಸಲಾಗುವುದು ಎಂದರು.

ತಾಲ್ಲೂಕಿನಲ್ಲಿ ಕೋವಿಡ್ ಲಸಿಕೆ ಕೊರತೆ ಕುರಿತು ಪ್ರಸ್ತಾಪಿಸಿದ ಅವರು, ‘ದೇಶದ ಎಲ್ಲೆಡೆ ಲಸಿಕೆ ಕೊರತೆ ಇರುವುದು ಕಂಡುಬಂದಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ಲಸಿಕೆ ನೀಡುವಲ್ಲಿ ಸಾಗರ ಮೂರನೇ ಸ್ಥಾನದಲ್ಲಿದೆ. ಮುಂದಿನ ದಿನಗಳಲ್ಲಿ ಲಸಿಕೆ ಕೊರತೆಯಾಗದಂತೆ ನೋಡಿಕೊಳ್ಳಲಾಗುವುದು’ ಎಂದರು.

ಉಪವಿಭಾಗಾಧಿಕಾರಿ ಡಾ.ನಾಗರಾಜ್ ಎಲ್., ‘ಮಳೆಗಾಲದಲ್ಲಿ ಯಾವುದೇ ಅಧಿಕಾರಿಗಳು ಕೇಂದ್ರ ಸ್ಥಾನ
ಬಿಟ್ಟು ತೆರಳದಂತೆ ಸೂಚನೆ ನೀಡಲಾಗಿದೆ. ಅದನ್ನು ಉಲ್ಲಂಘಿಸುವವರ ಮೇಲೆ ಶಿಸ್ತುಕ್ರಮ ಕೈಗೊಳ್ಳಲಾಗುತ್ತದೆ’ ಎಂದು ಎಚ್ಚರಿಸಿದರು.

ತಹಶೀಲ್ದಾರ್ ಚಂದ್ರಶೇಖರ್ ನಾಯ್ಕ್, ತಾಲ್ಲೂಕು ಪಂಚಾಯಿತಿ ಇಒ ಪುಷ್ಪಾ ಕಮ್ಮಾರ್, ಡಿವೈಎಸ್ಪಿ ವಿನಾಯಕ ಎನ್. ಶೆಟಗೇರಿ, ನಗರಸಭೆ ಪೌರಾಯುಕ್ತ ಎಚ್.ಕೆ. ನಾಗಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.