ADVERTISEMENT

ಹೊಸನಗರ: ಗಾಳಿ–ಮಳೆಯ ಲಾಸ್ಯ

​ಪ್ರಜಾವಾಣಿ ವಾರ್ತೆ
Published 18 ಜೂನ್ 2021, 5:07 IST
Last Updated 18 ಜೂನ್ 2021, 5:07 IST
ಹೊಸನಗರ ತಾಲ್ಲೂಕು ಹುಲಿಕಲ್ ಘಾಟಿ ರಸ್ತೆಯ ಅಂಚಿನಲ್ಲಿರುವ ಬಾಳೆಬರೆ ಜಲಪಾತ ಮೈದುಂಬಿ ಧುಮ್ಮಿಕ್ಕುತ್ತಿದೆ.
ಹೊಸನಗರ ತಾಲ್ಲೂಕು ಹುಲಿಕಲ್ ಘಾಟಿ ರಸ್ತೆಯ ಅಂಚಿನಲ್ಲಿರುವ ಬಾಳೆಬರೆ ಜಲಪಾತ ಮೈದುಂಬಿ ಧುಮ್ಮಿಕ್ಕುತ್ತಿದೆ.   

ಹೊಸನಗರ: ತಾಲ್ಲೂಕಿನಲ್ಲಿ ಮೂರು ದಿನಗಳಿಂದ ಮಳೆ ಮುಂದುವರಿದಿದೆ. ಮಂಗಳವಾರ ಬೆಳಿಗ್ಗೆಯಿಂದಲೇ ಮಳೆ ಬಿರುಸಾಗಿದ್ದು, ಗುರುವಾರ ಸಹ ಭಾರಿ ಪ್ರಮಾಣದಲ್ಲಿ ಬಿರುಗಾಳಿ ಮಳೆ ಸುರಿದಿದೆ.

ಶೀತ ಮಿಶ್ರಿತ ಸುಳಿಗಾಳಿ ಬೀಸುತ್ತಿದ್ದು, ಜನರು ಮನೆಯಿಂದ ಹೊರ ಬರಲು ಅಂಜುತ್ತಿದ್ದಾರೆ. ಇದರ ಮಧ್ಯೆ ದಿಢೀರ್ ಮಳೆ ವ್ಯಾಪಿಸಿದೆ.

ದಕ್ಷಿಣ ಕನ್ನಡ ಜಿಲ್ಲೆಗೆ ಹೊಂದಿಕೊಂಡಿರುವ ನಗರ ಹೋಬಳಿಯ ಘಾಟಿ ಪ್ರದೇಶದಲ್ಲಿ ಭಾರಿ ಪ್ರಮಾಣದ ಬಿರುಗಾಳಿಯಿಂದ ಕೂಡಿದ ಮಳೆ ಬಿದ್ದಿದೆ. ಇಲ್ಲಿನ ಜಲಾನಯನ ಪ್ರದೇಶದಲ್ಲೂ ಮಳೆ–ಗಾಳಿ ಜೋರಾಗಿದೆ. ನಗರ ಮತ್ತು ಹುಂಚಾ ಹೋಬಳಿಯಲ್ಲಿ ಮಂಜು ಮುಸುಕಿದ ವಾತಾವರಣ ವ್ಯಾಪಿಸಿದ್ದು, ಜನರ ಸಂಚಾರಕ್ಕೆ ಅಡ್ಡಿಯಾಗಿದೆ. ಇಲ್ಲಿ ಗಾಳಿ ಮಳೆಗೆ ಗಿಡಮರಗಳು ಧರೆಗುರುಳಿವೆ. ರಸ್ತೆಗೆ ಅಡ್ಡಲಾಗಿ ಬಿದ್ದ ಮರದಿಂದ ಅಲ್ಲಿಲ್ಲಿ ವಾಹನ ಸಂಚಾರಕ್ಕೆ ತೊಂದರೆಯಾಗಿದೆ. ಕೊಲ್ಲೂರು ಘಾಟಿ ಮಾರ್ಗದಲ್ಲಿ ಗಿಡಮರಗಳು ರಸ್ತೆಗೆ ಬಿದ್ದಿದ್ದು, ಸಂಚಾರ ಅಸ್ತವ್ಯಸ್ತವಾಗಿದೆ. ಕಸಬ, ಕೆರೆಹಳ್ಳಿ ಹೋಬಳಿಗಳಲ್ಲೂ ಉತ್ತಮ ಮಳೆಯಾಗಿದೆ.

ADVERTISEMENT

ಮಳೆಗಾಲ ಪೂರ್ವಸಿದ್ಧತೆಯಲ್ಲಿ ತೊಡಗಿರುವ ಕೃಷಿಕರಿಗೆ ಇದೀಗ ಎಡೆಬಿಡದೆ ಸುರಿಯುತ್ತಿರುವ ಮಳೆ ತುಂಬಾ ತೊಂದರೆ ನೀಡಿದೆ. ತಾಲ್ಲೂಕಿನಲ್ಲಿ ಶುಂಠಿ ನಾಟಿ, ಬಿತ್ತನೆ ಬರದಿಂದ ಸಾಗಿದ್ದು, ಗಾಳಿ–ಮಳೆ ಇದಕ್ಕೆ ಅಡ್ಡಿ ಪಡಿಸಿದೆ.

ಅಡಿಕೆ ತೋಟದ ಕೆಲಸ ಕಾರ್ಯಗಳಿಗೂ ಗಾಳಿ ಮಳೆಯಿಂದ ಹಿನ್ನಡೆ ಆಗಿದೆ. ಬಿಟ್ಟೂಬಿಡದೆ ಸುರಿಯುತ್ತಿರುವ ಗಾಳಿ ಮಳೆಯಿಂದಾಗಿ ಅಡಿಕೆ ಮಣಿ ಉದುರುತ್ತಿವೆ. ಮರಗಳು ಧರೆಗುರುಳುತ್ತಿವೆ.

ಪಟ್ಟಣದ ಆರ್.ಕೆ.ರಸ್ತೆ ಮತ್ತಿತರ ಕಡೆಗಳಲ್ಲಿ ಚರಂಡಿ ಸಮರ್ಪಕವಾಗಿಲ್ಲದ ಕಾರಣ ಮಳೆ ನೀರು ರಸ್ತೆ ಮೇಲೆ ಹರಿಯುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.