ADVERTISEMENT

ಇರುವಕ್ಕಿ: ಕೊಚ್ಚಿಹೋದ ಕಿರು ಸೇತುವೆ, ಸಂಪರ್ಕ ಕಡಿತ

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2022, 4:29 IST
Last Updated 10 ಆಗಸ್ಟ್ 2022, 4:29 IST
ಆನಂದಪುರ ಸಮೀಪದ ಇರುವಕ್ಕಿ ಹಾಗೂ ಕರಡಿಮನೆ ಗ್ರಾಮದ ಸಂಪರ್ಕ ಸೇತುವೆ ಕೊಚ್ಚಿಕೊಂಡು ಹೋಗಿರುವುದು
ಆನಂದಪುರ ಸಮೀಪದ ಇರುವಕ್ಕಿ ಹಾಗೂ ಕರಡಿಮನೆ ಗ್ರಾಮದ ಸಂಪರ್ಕ ಸೇತುವೆ ಕೊಚ್ಚಿಕೊಂಡು ಹೋಗಿರುವುದು   

ಆನಂದಪುರ: ಹಲವು ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದ ರಸ್ತೆಗಳು, ಸೇತುವೆ, ಮನೆ, ಗದ್ದೆಗಳು ಕೊಚ್ಚಿಕೊಂಡು ಹೋಗುತ್ತಿವೆ.

ಸಮೀಪದ ಇರುವಕ್ಕಿ ಬಳಿ ನೀರಿನ ರಭಸಕ್ಕೆ ಕೀರು ಸೇತುವೆ ಕೊಚ್ಚಿಕೊಂಡು ಹೋಗಿದ್ದು, ಕರಡಿಮನೆ ಹಾಗೂ ಇರುವಕ್ಕಿಯ ಕೆಲವು ಮನೆಗಳಿಗೆ ಸಂಪರ್ಕ ಕಡಿತಗೊಂಡಿದೆ. ಗ್ರಾಮಸ್ಥರು ತಾತ್ಕಾಲಿಕವಾಗಿ ಸಣ್ಣ ಮರದ ದಿಮ್ಮಿ ಇಟ್ಟುಕೊಂಡು ಓಡಾಡುತ್ತಿದ್ದಾರೆ. ವಿದ್ಯಾರ್ಥಿಗಳು ಸಹ ಈ ಮರದ ದಿಮ್ಮಿಯ ಮೇಲೆ ಓಡಾಡುತ್ತಿದ್ದು ಅಪಾಯಕಾರಿಯಾಗಿದೆ.

ಸಚಿವ, ಶಾಸಕರ ಭರವಸೆ ಈಡೇರಲಿಲ್ಲ: ‘50 ವರ್ಷಗಳಿಂದ ಈ ಗ್ರಾಮದಲ್ಲಿ ವಾಸವಾಗಿವಾಗಿದ್ದೇವೆ. ನಮ್ಮ ಗ್ರಾಮಕ್ಕೆ ಉತ್ತಮ ಸೇತುವೆ ಬೇಕು ಎಂದು 20 ವರ್ಷಗಳಿಂದ ಗ್ರಾಮ ಪಂಚಾಯಿತಿ ಸೇರಿ ವಿವಿಧ ಕಚೇರಿಗಳಿಗೆ ಮನವಿ ಸಲ್ಲಿಸುತ್ತಿದ್ದೇವೆ. ಆದರೆ ಈವರೆಗೆ ಸಕರಾತ್ಮಕವಾಗಿ ಯಾವುದೇ ಪ್ರತಿಕ್ರಿಯೆ ಬಂದಿಲ್ಲ’ ಎಂದು ಎಂದು ಗ್ರಾಮಸ್ಥರಾದ ಧರ್ಮಪ್ಪ ದೂರಿದರು.

ADVERTISEMENT

‘ಕಳೆದ ವರ್ಷ ಭಾರಿ ಮಳೆಯಿಂದಾಗಿ ಗ್ರಾಮದ ಸಂಪರ್ಕ ಕಡಿತಗೊಂಡಿತ್ತು. ಆ ಸಂದರ್ಭದಲ್ಲಿ ಸಚಿವರಾಗಿದ್ದ ಕೆ.ಎಸ್ ಈಶ್ವರಪ್ಪ, ಶಾಸಕ ಎಚ್.ಹಾಲಪ್ಪ ಹರತಾಳು ಹಾಗೂ ಜಿಲ್ಲಾಧಿಕಾರಿ ಸೇರಿ ವಿವಿಧ ಅಧಿಕಾರಿಗಳು ವೀಕ್ಷಣೆ ಮಾಡಿ ಹೊಸ ಸೇತುವೆ ನಿರ್ಮಾಣದ ಭರವಸೆ ನೀಡಿದ್ದರು. ಆದರೆ ಈವರೆಗೆ ಯಾವ ಜನಪ್ರತಿನಿಧಿಗಳು, ಅಧಿಕಾರಿಗಳು ಇತ್ತ ಮುಖ ಮಾಡಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅಪಾಯದಲ್ಲಿ ವಿದ್ಯಾರ್ಥಿಗಳು:‌ ‘ಕರಡಿಮನೆ ಗ್ರಾಮದ ವಿದ್ಯಾರ್ಥಿಗಳು ಶಾಲೆಗೆ ಹೋಗಲು ಇದೇ ರಸ್ತೆಯನ್ನು ಅವಲಂಬಿಸಿದ್ದು, ಪ್ರಾಣವನ್ನು ಕೈಯಲ್ಲಿಡಿದು ಓಡಾಡುತ್ತಿದ್ದಾರೆ. ಮಳೆ ಹೆಚ್ಚಾದ ಸಂದರ್ಭದಲ್ಲಿ ರಭಸವಾಗಿ ನೀರು ಹರಿಯುತ್ತದೆ. ಮಕ್ಕಳಿಗೆ ಅಪಾಯವಾದರೆ ಹೊಣೆ ಯಾರು’ ಎಂದು ಗ್ರಾಮಸ್ಥರಾದ ಶಿವಲಿಂಗಯ್ಯ, ಸತೀಶ್, ಮಂಜುನಾಥ್, ಮಲ್ಲಿಕಾರ್ಜುನ, ಭೂಮಿಕಾ, ಹೇಮಂತ್, ಲಿಂಗರಾಜ್ ಪ್ರಶ್ನಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.