ADVERTISEMENT

ಮಳೆ ಬಿಡುವು; ಬಿಸಿಲಿನ ದರ್ಶನ- ವಾರಕಾಲ ಸುರಿದು ದಣಿದ ‘ಮೃಗಶಿರಾ’

​ಪ್ರಜಾವಾಣಿ ವಾರ್ತೆ
Published 21 ಜೂನ್ 2021, 2:08 IST
Last Updated 21 ಜೂನ್ 2021, 2:08 IST
ಹೊಸನಗರ ತಾಲ್ಲೂಕಿನ ಕೊಡಚಾದ್ರಿ ಗಿರಿ ಸಮೀಪದಲ್ಲಿರುವ ಹಿಡ್ಲುಮನೆ ಜಲಪಾತದ ನೋಟ
ಹೊಸನಗರ ತಾಲ್ಲೂಕಿನ ಕೊಡಚಾದ್ರಿ ಗಿರಿ ಸಮೀಪದಲ್ಲಿರುವ ಹಿಡ್ಲುಮನೆ ಜಲಪಾತದ ನೋಟ   

ಹೊಸನಗರ: ಶಿವಮೊಗ್ಗ ಜಿಲ್ಲೆಯಲ್ಲಿ ಭಾನುವಾರ ಮಳೆ ಕೊಂಚ ಬಿಡುವು ನೀಡಿದ್ದು, ತೀರ್ಥಹಳ್ಳಿ, ಆನಂದಪುರದಲ್ಲಿ ಆಗಾಗ್ಗೆ ತುಂತುರು ಮಳೆ ಹಾಗೂ ಬಿಸಿಲು ಇತ್ತು.

ಎಂಟು ದಿನಗಳಿಂದ ಒಂದೇ ಸಮನೆ ಸುರಿದ ಮಳೆ ಭಾನುವಾರ ವಿರಾಮ ನೀಡಿದ್ದು, ಬಿಸಿಲಿನ ದರ್ಶನವಾಗಿದೆ. ತಾಲ್ಲೂಕಿನ ನಗರ ಮತ್ತು ಹುಂಚಾ ಹೋಬಳಿಯಲ್ಲಿ ಅತೀ ಹೆಚ್ಚು ಸುರಿದ ಮಳೆ ಇಂದು ಬಿಡುವು ನೀಡಿದೆ.

ಹದ ಮಳೆ ಎಂದೇ ಹೆಸರಾದ ಮೃಗಶಿರಾ ಮಳೆ ಕೊನೆಯ ಎಲ್ಲಾ ಮಳೆ ಸುರಿದು ಇದೀಗ ದಣಿದಿದೆ.

ADVERTISEMENT

ವಾರಕಾಲ ಸುರಿದ ಮಳೆಯಿಂದ ಬೇಸತ್ತ ಜನರು ಇಂದು ಹೊರ ಹೊರಗೆ ಅಡಿ ಇಟ್ಟಿದ್ದಾರೆ. ಮಳೆ ಬಿಡುವು ರೈತ ಸಮುದಾಯಕ್ಕೆ ಕೊಂಚ ಸಮಾಧಾನ ತಂದಿದ್ದು, ಅವರು ತಮ್ಮ ಹೊಲಗದ್ದೆಗಳಿಗೆ ತೆರಳಿ ಕೃಷಿ ಕಾಯಕದಲ್ಲಿ ತೊಡಗಿದ್ದರು. ಕೆಲವರು ಒಡೆದ ಹಳ್ಳದ ದಂಡೆ, ಗದ್ದೆಯ ಹೂಳಿನ ದುರಸ್ತಿ ಕಾರ್ಯದಲ್ಲಿ ನಿರತರಾಗಿದ್ದರು.

ಮನ ಸೆಳೆವ ಜಲಪಾತಗಳು: ತಾಲ್ಲೂಕಿನಲ್ಲಿ ಮಳೆ ಕ್ಷೀಣವಾಗಿದ್ದರೂ ನದಿಗಳು ತುಂಬಿ ಹರಿಯುತ್ತಿವೆ. ಹಳ್ಳ ಕೊಳ್ಳಗಳು ಭರ್ತಿಯಾಗಿ ಹರಿಯುತ್ತಿವೆ. ಅದರಂತೆ ಇಲ್ಲಿನ ಜಲಪಾತಗಳು ಮೈದುಂಬಿದ್ದು ನೋಡುಗರನ್ನು ತಮ್ಮತ್ತ ಸೆಳೆಯುತ್ತಿವೆ. ಮಳೆ ಕಡಿಮೆಯಾದ ಕಾರಣ ತಿಳಿ ನೀರು ನೊರೆ ನೊರೆಯಾಗಿ ಧುಮ್ಮಿಕ್ಕುತ್ತಿದೆ.

ತಾಲ್ಲೂಕಿನ ಬಾಳೆಬರೆ ಫಾಲ್ಸ್, ಹಿಡ್ಲುಮನೆ ಫಾಲ್ಸ್, ತಪಾಸಿ ಫಾಲ್ಸ್, ಅಬ್ಬಿ ಫಾಲ್ಸ್, ಚಿತ್ರಮೂಲ ಫಾಲ್ಸ್ ಮತ್ತಿತರ ಜಲಪಾತಗಳು ವೈಯಾರದಲ್ಲಿ ಧುಮ್ಮಿಕ್ಕುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.