ADVERTISEMENT

ಮುಳುಗಡೆ ಸಂತ್ರಸ್ತರ ಪರ ಹಸಿರು ಪೀಠಕ್ಕೆ ಹೋಗಲು ಸಿದ್ಧ

‘ಚಿತ್ತಾರಗಿತ್ತಿ’ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಶಾಸಕ ಎಚ್‌. ಹಾಲಪ್ಪ ಹರತಾಳು ಭರವಸೆ

​ಪ್ರಜಾವಾಣಿ ವಾರ್ತೆ
Published 10 ಜನವರಿ 2021, 16:15 IST
Last Updated 10 ಜನವರಿ 2021, 16:15 IST
ಶಿವಮೊಗ್ಗದ ಈಡಿಗ ಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಬೂಮಣ್ಣಿ ಬುಟ್ಟಿ ಚಿತ್ತಾ ಸ್ಪರ್ಧೆಯ ‘ಚಿತ್ತಾರಗಿತ್ತಿ’ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಉದ್ಘಾಟಿಸಿದರು
ಶಿವಮೊಗ್ಗದ ಈಡಿಗ ಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಬೂಮಣ್ಣಿ ಬುಟ್ಟಿ ಚಿತ್ತಾ ಸ್ಪರ್ಧೆಯ ‘ಚಿತ್ತಾರಗಿತ್ತಿ’ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಉದ್ಘಾಟಿಸಿದರು   

ಶಿವಮೊಗ್ಗ: ಶರಾವತಿ ಮುಳುಗಡೆ ಸಂತ್ರಸ್ತರ ಸಮಸ್ಯೆಗಳನ್ನು ಬಗೆಹರಿಸುವ ಸಲುವಾಗಿ ಸರ್ಕಾರದ ಗಮನ ಸೆಳೆಯಲಾಗಿದ್ದು, ಈ ಸಂಬಂಧ ಹಸಿರು ಪೀಠಕ್ಕೆ ಹೋಗಲು ಸಿದ್ಧ ಎಂದು ಶಾಸಕ ಎಚ್‌. ಹಾಲಪ್ಪ ಹರತಾಳು ಹೇಳಿದರು.

ನಗರದ ಈಡಿಗ ಭವನದಲ್ಲಿ ಮಲೆನಾಡು ದೀವರ ಕ್ಷೇಮಾಭಿವೃದ್ಧಿ ಮತ್ತು ಸಾಂಸ್ಕೃತಿಕ ಸಮಿತಿ, ಕಾಗೋಡು ರಾಮ ಮನೋಹರ ಲೋಹಿಯಾ ಟ್ರಸ್ಟ್‌ನಿಂದ ಭಾನುವಾರ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಬೂಮಣ್ಣಿ ಬುಟ್ಟಿ ಚಿತ್ತಾ ಸ್ಪರ್ಧೆಯ ‘ಚಿತ್ತಾರಗಿತ್ತಿ’ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.

ಮುಳುಗಡೆ ಸಂತ್ರಸ್ತರ ಸಮಸ್ಯೆಗಳಿಗೆ ಶೀಘ್ರ ಪರಿಹಾರ ಕಂಡುಕೊಳ್ಳಲಾಗುವುದು. ಇದಕ್ಕಾಗಿ ವಿಶೇಷ ಅಧಿಕಾರಿಯನ್ನೂ ನೇಮಕ ಮಾಡಲಾಗಿದೆ.ಆರೇಳು ತಿಂಗಳಲ್ಲಿ ಸಂತ್ರಸ್ತರಿಗೆ ಜಮೀನು ಕೊಡಿಸಲು ಬದ್ಧ ಎಂದು ಭರವಸೆನೀಡಿದರು.

ADVERTISEMENT

‘ಸಂತ್ರಸ್ತರ ಜಮೀನು ಕೊಡಿಸುವ ವಿಚಾರವಾಗಿ ರಾಜ್ಯದಿಂದ ಕೇಂದ್ರಕ್ಕೆ ಪ್ರಸ್ತಾವ ಸಲ್ಲಿಸಲಾಗುವುದು. ಅಲ್ಲಿಯೂ ಸಮಸ್ಯೆ ಬಗೆಹರಿಯದಿದ್ದರೆ ಸುಪ್ರೀಂ ಕೋರ್ಟ್‌ ಮೊರೆಹೋಗಲಾಗುವುದು. ಅಲ್ಲಿಯೂ ತಾರ್ಕಿಕ ಸಮಸ್ಯೆ ಸಿಗದಿದ್ದರೆ ಹಸಿರು ಪೀಠಕ್ಕೆ ಹೋಗಲು ಸಿದ್ಧರಿದ್ದೇವೆ. ಸರ್ಕಾರ ಮುಳುಗಡೆ ಸಂತ್ರಸ್ತರ ಪರವಾಗಿದೆ’ ಎಂದುಹೇಳಿದರು.

ಕಾರ್ಯಕ್ರಮ ಉದ್ಘಾಟಿಸಿದ ಮಾಜಿ ಸಚಿವ ಕಾಗೋಡು ತಿಮ್ಮಪ್ಪ, ‘ದೀವರ ಕಲೆ, ಸಂಸ್ಕೃತಿಯನ್ನು ಅಭಿವೃದ್ಧಿ ಪಡಿಸಬೇಕಿದೆ. ಬೂಮಣ್ಣಿ ಬುಟ್ಟಿಯಲ್ಲಿ ಹೊಸ ಆಲೋಚನೆ, ವಿಚಾರಗಳಿವೆ. ಅದನ್ನು ಮುಂದಿನ ಪೀಳಿಗೆಗೆ ರವಾನಿಸುವ ಕೆಲಸವಾಗಬೇಕಿದೆ’ ಎಂದುಹೇಳಿದರು.

ಧೀರ ದೀವರು ವೇದಿಕೆ ಸಂಚಾಲಕ, ಪತ್ರಕರ್ತ ನಾಗರಾಜ್ ನೇರಿಗೆ ಪ್ರಾಸ್ತವಿಕ‌‌ವಾಗಿ ಮಾತನಾಡಿದರು.

ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ, ಮಲೆನಾಡು ದೀವರ ಕ್ಷೇಮಾಭಿವೃದ್ಧಿ ಮತ್ತು ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ಸುರೇಶ್ ಕೆ. ಬಾಳೆಗುಂಡಿ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಲಕ್ಷಮ್ಮ ಗುಡೆಮನೆಇದ್ದರು.

ವೇದಿಕೆ ಮೇಲೆ ಕಣ್ಣೀರಿಟ್ಟ ಬೇಳೂರು:ಈಡಿಗರ ಸಮಾಜದ ಕಣ್ಣಾಗಿದ್ದ ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಅವರನ್ನು ಸನ್ಮಾನಿಸುವ ಯೋಜನೆ ಇತ್ತು. ಆದರೆ, ಅದು ಫಲಿಸಲಿಲ್ಲ ಎಂದು ಬಂಗಾರಪ್ಪ ಅವರನ್ನು ನೆನೆದು ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ವೇದಿಕೆ ಮೇಲೆಯೇ ಕಣ್ಣೀರಿಟ್ಟರು.

ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಹಾಗೂ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅವರು ಈಡಿಗ ಸಮಾಜದ ಕಣ್ಣುಗಳಿದ್ದಂತೆ. ಹಿರಿಯರ ಮಾರ್ಗದರ್ಶನದಲ್ಲಿ ಸಮಾಜವನ್ನು ಇನ್ನಷ್ಟು ಉನ್ನತವಾಗಿ ಕಟ್ಟಬೇಕಿದೆ. ದೀವರು ಸಾಂಸ್ಕೃತಿಕವಾಗಿ ಒಂದಾಗಬೇಕಿದೆ. ಧರ್ಮಗುರು ಇದ್ದರೆ ಸಮಾಜ ಇನ್ನಷ್ಟು ಸಮೃದ್ಧವಾಗಿ ಬೆಳೆಯಲು ಸಾಧ್ಯ. ಹೀಗಾಗಿ ಈಡಿಗ ಸಮಾಜಕ್ಕೆ ಧರ್ಮಗುರು ಅಗತ್ಯವಿದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.