ADVERTISEMENT

ಸ್ಟಾಫ್‌ ನರ್ಸ್, ಸಿಬ್ಬಂದಿ ಅಮಾನತಿಗೆ ಶಿಫಾರಸು

ಮೆಗ್ಗಾನ್ ಆಸ್ಪತ್ರೆ ಹೆರಿಗೆ ವಿಭಾಗದಲ್ಲಿ ಲಂಚ ಪಡೆದ ಆರೋಪ

​ಪ್ರಜಾವಾಣಿ ವಾರ್ತೆ
Published 7 ಆಗಸ್ಟ್ 2022, 7:10 IST
Last Updated 7 ಆಗಸ್ಟ್ 2022, 7:10 IST

ಶಿವಮೊಗ್ಗ: ಇಲ್ಲಿನ ಮೆಗ್ಗಾನ್ ಆಸ್ಪತ್ರೆ ಹೆರಿಗೆ ವಾರ್ಡ್ ಶರಾವತಿ ವಿಭಾಗದಲ್ಲಿ ಗಂಡು ಮಗು ಹುಟ್ಟಿದರೆ ₹ 2,000, ಹೆಣ್ಣು ಮಗು ಹುಟ್ಟಿದರೆ ₹1,500 ಲಂಚ ಪಡೆದ ಆರೋಪ ಮೇಲೆ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದ ಒಬ್ವರು ಸ್ಟಾಫ್ ನರ್ಸ್‌ ಹಾಗೂ ‘ಡಿ’ ಗ್ರೂಪ್ ಸಿಬ್ಬಂದಿಯೊಬ್ಬರನ್ನು ಅಮಾನತು ಮಾಡಲು ಶಿಫಾರಸು ಮಾಡಲಾಗಿದೆ.

ಭದ್ರಾವತಿಯ ನಜ್ಮಾ ಎಂಬುವರಿಗೆ ಶನಿವಾರ ಬೆಳಿಗ್ಗೆ ಹೆರಿಗೆ ಆಗಿದೆ. ಬಟ್ಟೆ ಒಗೆಯಲು ಮತ್ತು ಇತರೆ ವೆಚ್ಚಕ್ಕಾಗಿ ಎಂದು ಹೇಳಿ ನಜ್ಮಾ ಕುಟುಂಬದವರಿಗೆ ಹಣಕ್ಕೆ ಬೇಡಿಕೆ ಇಡಲಾಗಿದೆ. ಬಡವರಾದ ನಾವು ಅಷ್ಟು ಕೊಡಲು ಆಗುವುದಿಲ್ಲ ಕಡಿಮೆ ಮಾಡಿಕೊಳ್ಳಿ ಎಂದು ನಜ್ಮಾ ಕುಟುಂಬದವರು ₹ 600 ಕೊಡಲು ಮುಂದಾಗಿದ್ದಾರೆ.

ಆ ಹಣ ಮುಟ್ಟದ ಸ್ಟಾಫ್ ನರ್ಸ್ ₹1,500 ಕೊಡುವಂತೆ ಪಟ್ಟು ಹಿಡಿದಿದ್ದಾರೆ. ಇದರಿಂದ ಬೇಸತ್ತ ನಜ್ಮಾ ಅವರ ಸಹೋದರ ಮೆಗ್ಗಾನ್ ಆಸ್ಪತ್ರೆ ಅಧೀಕ್ಷಕ ಡಾ.ಶ್ರೀಧರ್‌ಗೆ ದೂರು ನೀಡಿದ್ದಾರೆ. ಸ್ಥಳಕ್ಕೆ ಬಂದು ವಿಚಾರಣೆ ನಡೆಸಿದ ಅಧೀಕ್ಷಕರು ಸ್ಟಾಫ್ ನರ್ಸ್ ಹಾಗೂ ಸಿಬ್ಬಂದಿ ಅಮಾನತು ಮಾಡಲು ಸಿಮ್ಸ್ ಮುಖ್ಯಸ್ಥರಿಗೆ ಶಿಫಾರಸು ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.