
ಸಾಗರ: ಇಲ್ಲಿನ ಸಂಗೊಳ್ಳಿ ರಾಯಣ್ಣ ಮೈದಾನದಲ್ಲಿ ತಾತ್ಕಾಲಿಕ ಹೆಲಿಪ್ಯಾಡ್‌ಗೆ ಅವಕಾಶ ನೀಡಬಾರದು ಎಂದು ಒತ್ತಾಯಿಸಿ ಸ್ಥಳೀಯ ನಿವಾಸಿಗಳು ಶುಕ್ರವಾರ ಉಪವಿಭಾಗಾಧಿಕಾರಿಗೆ ಮನವಿ ಸಲ್ಲಿಸಿದರು.
ಫೆಬ್ರುವರಿ ಮೊದಲ ವಾರದಲ್ಲಿ ಮಾರಿಕಾಂಬಾ ದೇವಿ ಜಾತ್ರೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಹೆಲಿ ಟೂರಿಸಂ ಹೆಸರಿನಲ್ಲಿ ಕೆಲವರು ಜಾತ್ರೆಗೆ ಬರುವವರಿಗೆ ಹೆಲಿಕಾಪ್ಟರ್‌ನಲ್ಲಿ ನಗರ ಸಂಚಾರ ಮಾಡಿಸುವ ಯೋಜನೆ ಹಮ್ಮಿಕೊಂಡಿದ್ದಾರೆ. ಇದಕ್ಕಾಗಿ ಗಾಂಧಿ ನಗರ ಬಡಾವಣೆಯ ಸಂಗೊಳ್ಳಿ ರಾಯಣ್ಣ ಮೈದಾನದಲ್ಲಿ ತಾತ್ಕಾಲಿಕ ಹೆಲಿಪ್ಯಾಡ್ ನಿರ್ಮಿಸಲು ಅನುಮತಿ ಕೇಳಿದ್ದಾರೆ ಎಂಬ ಮಾಹಿತಿ ಇದೆ. ಆ ಭಾಗದ ಪರಿಸರವನ್ನು ಕಾಪಾಡುವ ದೃಷ್ಟಿಯಿಂದ ಅಲ್ಲಿ ಅವಕಾಶ ನೀಡಬಾರದು ಎಂದು ಮನವಿಯಲ್ಲಿ ಕೋರಿದ್ದಾರೆ.
ಸಂಗೊಳ್ಳಿ ರಾಯಣ್ಣ ಮೈದಾನದ ಸುತ್ತಲೂ ವಾಯುವಿಹಾರಕ್ಕೆ ವಾಕಿಂಗ್ ಟ್ರ್ಯಾಕ್ ನಿರ್ಮಿಸಲಾಗಿದೆ. ಸುತ್ತಲೂ ಮನೆಗಳು, ಶಿಕ್ಷಣ ಸಂಸ್ಥೆಗಳಿವೆ. ಇಲ್ಲಿ ಹೆಲಿಕಾಪ್ಟರ್ ಇಳಿಸಲು ಅವಕಾಶ ನೀಡಿದರೆ ವಿಪರೀತ ದೂಳು ಉಂಟಾಗಿ ಸ್ಥಳೀಯ ನಿವಾಸಿಗಳಿಗೆ ತೊಂದರೆಯಾಗುತ್ತದೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.
‘ವರದಹಳ್ಳಿ ರಸ್ತೆಯಲ್ಲಿ ಇರುವ ಹೆಲಿಪ್ಯಾಡ್‌ನಲ್ಲೇ ಹೆಲಿ ಟೂರಿಸಂಗೆ ಅವಕಾಶ ನೀಡುವುದು ಸೂಕ್ತ’ ಎಂದು ಮನವಿಯಲ್ಲಿ ಹೇಳಲಾಗಿದೆ.
ಪ್ರಮುಖರಾದ ಜೇಡಿಕುಣಿ ಮಂಜುನಾಥ್, ಎಸ್.ವಿ.ಕೃಷ್ಣಮೂರ್ತಿ, ಮೋಹನ್ ಪ್ರಕಾಶ್, ನಂದ ಕಿಶೋರ್, ಎಸ್.ವಿ.ಹಿತಕರ್ ಜೈನ್, ಮ.ಸ.ನಂಜುಂಡಸ್ವಾಮಿ, ವಿಶ್ವೇಶ್ವರಯ್ಯ ಕೋಳಿವಾಡ, ಸುಂದರ್ ರಾಜ್, ಸುರೇಶ್ ಎಚ್.ಪಿ. ಗಣಪತಿ ಎನ್.ಕೆ. ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.