ತೀರ್ಥಹಳ್ಳಿ: ‘ರಾಜ್ಯ ಸರ್ಕಾರ ಪರಿಶಿಷ್ಟ ಜಾತಿಗೆ (ಎಸ್‌ಸಿ) ಒಳ ಮೀಸಲಾತಿ ನಿಗದಿಪಡಿಸಲು 101 ಜಾತಿಗಳ ಪೂರ್ಣ ವಿಚಾರಣಾ ಆಯೋಗ ರಚಿಸಿದೆ. ಸಮೀಕ್ಷೆ ಮೇ 5ರಿಂದ 17ರವರೆಗೆ ನಡೆಯಲಿದ್ದು, ಆದಿ ಕರ್ನಾಟಕ ಜಾತಿಯ ಅಡಿಯಲ್ಲಿ ಉಪಜಾತಿ ಚನ್ನಯ್ಯ ಎಂದು ನಮೂದಿಸಬೇಕು’ ಎಂದು ಅಖಿಲ ಕರ್ನಾಟಕ ಚನ್ನಯ್ಯ (ಬಲಗೈ) ಸಮಾಜದ ರಾಜ್ಯ ಘಟಕದ ಅಧ್ಯಕ್ಷ ಬಸವರಾಜ ದೊಡ್ಮನಿ ಮನವಿ ಮಾಡಿದರು.
ಆರ್ಥಿಕ, ಸಾಮಾಜಿಕ ಭದ್ರತೆ ಒದಗಿಸುವ ಸಂಬಂಧ ಎಚ್.ಎನ್.ನಾಗಮೋಹನದಾಸ್ ಏಕಸದಸ್ಯ ವಿಚಾರಣಾ ಆಯೋಗ ರಚಿಸಿದೆ. ಶೇ 17ರಷ್ಟು ಮೀಸಲಾತಿಯನ್ನು ಸದ್ಬಳಕೆ ಮಾಡಿಕೊಳ್ಳುವ ದೃಷ್ಟಿಯಿಂದ ಸಮಾಜದವರು ಕ್ರಮ ಸಂಖ್ಯೆ 27.3 ರಲ್ಲಿ ಇರುವ ಚನ್ನಯ್ಯ ಉಪಜಾತಿಯನ್ನು ನಮೂದಿಸಬೇಕು ಎಂದು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
‘ಆದಿ ಕರ್ನಾಟಕ ಎಂಬುದು ಜಾತಿಯಾಗಿ ಪರಿಗಣಿಸಲು ಸಾಧ್ಯವಿಲ್ಲ. ಅದರ ಒಳಗೆ ಉಪಜಾತಿಗಳು ಇವೆ. ಮೈಸೂರು ರಾಜ್ಯದ ಅವಧಿಯಲ್ಲಿ ಕನ್ನಡ ಮಾತನಾಡುವ ವರ್ಗವನ್ನು ಆದಿ ಕರ್ನಾಟಕ, ತೆಲುಗು ಮಾತನಾಡುವವರನ್ನು ಆದಿ ಆಂಧ್ರ ಎಂದು ನೋಂದಾಣಿ ಮಾಡಿಕೊಂಡಿದ್ದರು. ಹಿಂದೆ ಆದ ತಪ್ಪುಗಳನ್ನು ಸರಿಪಡಿಸುವ ಉದ್ದೇಶದಿಂದ ಈಗಾಗಲೇ ನಮ್ಮ ಸಮಾಜದವರು ವಿವಿಧ ರೀತಿಯಲ್ಲಿ ಪ್ರಯತ್ನ ಮಾಡಿದ್ದೇವೆ. ಅವರ ಸಂಪ್ರದಾಯ, ಆಚಾರ, ವಿಚಾರದ ಬಗ್ಗೆ ಸ್ಪಷ್ಟತೆ ಮೂಡಿಸಿದ್ದೇವೆ’ ಎಂದು ಹೇಳಿದರು.
‘ಕೃಷಿ ಆಧಾರಿತ ವೃತ್ತಿ ಮಾಡುವ ಎಲ್ಲರೂ ಚನ್ನಯ್ಯ ಸಮಾಜಕ್ಕೆ ಸೇರಿದ್ದಾರೆ. ಮೀಸಲಾತಿ ಸರಿಯಾಗಿ ಸಿಗದ ಕಾರಣ ಇಂದಿಗೂ ನಮ್ಮ ಸಮಾಜ ಹಿಂದುಳಿದೆ. ಆರ್ಥಿಕ, ಶೈಕ್ಷಣಿಕ, ಸಾಮಾಜಿಕ ಹಿಂದುಳಿದಿದ್ದು, ಸಂವಿಧಾನ ಬದ್ಧ ಹಕ್ಕುಗಳನ್ನು ಪಡೆಯಲು ಹೋರಾಟ ಮಾಡುವುದು ಅನಿವಾರ್ಯವಾಗಿದೆ’ ಎಂದು ತಿಳಿಸಿದರು.
ರಾಜ್ಯ ಸಂಚಾಲಕ ಎಚ್.ಕೆ.ಶಿವಾನಂದ, ಪ್ರಧಾನ ಕಾರ್ಯದರ್ಶಿ ಮಂಜಪ್ಪ ಎಚ್, ಉಪಾಧ್ಯಕ್ಷ ರಂಗಪ್ಪ ಹೊನ್ನೇಸರ, ಮುಖಂಡರಾದ ನವೀನ್ ಕುಮಾರ್, ಗಿರೀಶ್ ಪಡುವಳ್ಳಿ, ವಿಶ್ವನಾಥ ಹಾರೋಗೊಳಿಗೆ, ಬಸವಂತಪ್ಪ ಕೋಟೆ, ರುದ್ರಪ್ಪ ಬೈರೆಕೊಪ್ಪ, ಯಲ್ಲಪ್ಪ ಬೇಡನಬೈಲು, ಉಮೇಶ್ ಕೆರೆಕೋಡಿ, ನಾಗರಾಜ ಎ.ಕೆ. ಷಣ್ಮುಖ ತಳವಾರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.