ADVERTISEMENT

ಶರಾವತಿ ನದಿದಂಡೆ ನಿವಾಸಿಗಳು ಮುನ್ನೆಚ್ಚರಿಕೆ ವಹಿಸಲು ಸೂಚನೆ

ಲಿಂಗನಮಕ್ಕಿ ಅಣೆಕಟ್ಟೆಯಲ್ಲಿ 35 ಅಡಿ ಹೆಚ್ಚುವರಿ ನೀರು

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2021, 1:17 IST
Last Updated 1 ಆಗಸ್ಟ್ 2021, 1:17 IST
ಲಿಂಗನಮಕ್ಕಿ ಜಲಾಶಯದಲ್ಲಿ ನೀರು ತುಂಬಿರುವುದು
ಲಿಂಗನಮಕ್ಕಿ ಜಲಾಶಯದಲ್ಲಿ ನೀರು ತುಂಬಿರುವುದು   

ಕಾರ್ಗಲ್: ಲಿಂಗನಮಕ್ಕಿ ಜಲಾನಯನಯ ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿದ್ದು, ಜಲಾಶಯಕ್ಕೆ ಹರಿದು ಬರುತ್ತಿರುವ ನೀರು ದಿನೇ ದಿನೇ ಹೆಚ್ಚಳವಾಗುತ್ತಿದೆ. ಲಿಂಗನಮಕ್ಕಿ ಅಣೆಕಟ್ಟೆಯ ಶರಾವತಿ ನದಿದಂಡೆ ತೀರದ ನಿವಾಸಿಗಳು 2ನೇ ಸುತ್ತಿನ ಪ್ರವಾಹ ಮುನ್ನೆಚ್ಚರಿಕೆ ವಹಿಸಬೇಕು ಎಂದು ಕೆಪಿಸಿ ಪ್ರಭಾರ ಅಧೀಕ್ಷಕ ಎಂಜಿನಿಯರ್ ಆರ್.ಶಿವಕುಮಾರ್ ತಿಳಿಸಿದ್ದಾರೆ.

ನದಿ ನೀರಿನ ಪ್ರವಾಹ ಇದೇ ರೀತಿ ಹೆಚ್ಚಾದರೆ ಅಣೆಕಟ್ಟೆಯ ಸುರಕ್ಷತೆ ದೃಷ್ಟಿಯಿಂದ ಅತಿ ಶೀಘ್ರದಲ್ಲೇ ಅಣೆಕಟ್ಟೆಯ ರೇಡಿಯಲ್ ಗೇಟ್ ಮೂಲಕ ಹೆಚ್ಚುವರಿ ನೀರನ್ನು ಹೊರ ಹರಿಸಬೇಕಾಗುತ್ತದೆ. ಈ ನಿಟ್ಟಿನಲ್ಲಿ ನದಿ ತೀರಗಳಾದ ಯಡ್ಡಳ್ಳಿ, ಕಾರ್ಗಲ್ ಮರಳುಕೋರೆ, ಚೈನಾಗೇಟ್, ಜಾಲಿಗದ್ದೆ, ಗಿಳಾಲಗುಂಡಿ, ರಿಸರ್ವ್ ಕ್ಯಾಂಪ್, ಸೀತಾಕಟ್ಟೆ ಸೇರಿ ಶರಾವತಿ ಟೈಲ್ ರೇಸ್ ನಿವಾಸಿಗಳಿಗೆ ಮುಂಚಿತವಾಗಿ ಎಚ್ಚರಿಕೆಯ ಸಂದೇಶವನ್ನು ರವಾನಿಸಲಾಗಿದೆ ಎಂದು ಮಾಹಿತಿ ನೀಡಿದರು.

ಈಗಾಗಲೇ ಲಿಂಗನಮಕ್ಕಿ ಅಣೆಕಟ್ಟೆಯಲ್ಲಿ ಕಳೆದ ಸಾಲಿಗಿಂತ ಪ್ರಸಕ್ತ 35 ಅಡಿಗಳಷ್ಟು ಹೆಚ್ಚುವರಿ ನೀರು ಸಂಗ್ರಹವಾಗಿದೆ. ಜಲಾಶಯದ ಹಿನ್ನೀರ ಪ್ರದೇಶಗಳಲ್ಲಿ ಹಿಂದಿನ ಬಾರಿ ಸುರಿದ ಮಳೆಯ ಪ್ರಮಾಣಕ್ಕಿಂತ 93 ಸೆಂ.ಮೀ ಮಳೆ ಈ ಸಾರಿ ಹೆಚ್ಚಾಗಿ ಸುರಿದಿದ್ದು, ಮುಂದಿನ ದಿನಗಳಲ್ಲಿ ಇನ್ನೂ ಉತ್ತಮ ಮಳೆ ನಿರೀಕ್ಷೆಯಿದೆ. ಅತಿ ಶೀಘ್ರದಲ್ಲಿಯೇ ಜಲಾಶಯ ಭರ್ತಿಯಾಗುವ ಎಲ್ಲಾ ಲಕ್ಷಣಗಳು ಕಂಡುಬರುತ್ತಿದೆ ಎಂದು ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.