ರಿಪ್ಪನ್‌ಪೇಟೆ: ಸನಾತನ ಸಂಸ್ಕೃತಿ, ಪರಂಪರೆಯ ಭಾರತದಲ್ಲಿ ಮಹಿಳೆಯರಿಗೆ ಪೂಜ್ಯನೀಯ ಭಾವನೆಯಿಂದ ಗೌರವಿಸುವ ಪರಿಪಾಟ ಬೆಳೆದು ಬಂದಿದೆ ಎಂದು ಶಾಸಕ ಗೋಪಾಲ ಕೃಷ್ಣ ಬೇಳೂರು ಹೇಳಿದರು.
ಪಟ್ಟಣದ ರಾಮಮಂದಿರದಲ್ಲಿ ಬ್ರಹ್ಮಶ್ರೀ ನಾರಾಯಣಗುರು ಧರ್ಮ ಪಾಲನಾ ಸಂಘ ಆಯೋಜಿಸಿದ್ದ ಅಂತರರಾಷ್ಟ್ರೀಯ ವಿಶ್ವ ಮಹಿಳಾ ದಿನಾಚರಣೆ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ರಾಜ್ಯದಲ್ಲಿ 4ನೇ ಸ್ಥಾನದಲ್ಲಿ ಈಡಿಗ ಸಮಾಜ ಹೆಮ್ಮರವಾಗಿ ಬೆಳೆದು ನಿಂತಿದೆ. ರಾಜ್ಯ ಸರ್ಕಾರ ಈಡಿಗ ನಿಗಮ ಸ್ಥಾಪನೆ ಮಾಡಿದೆಯೇ ವಿನಾ ಸಮುದಾಯಕ್ಕೆ ಅನುದಾನ ನೀಡದೆ ಈಡಿಗ ಸಮಾಜವನ್ನು ಕಡೆಗಣಿಸಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಮೌನಕ್ರಾಂತಿಯ ಮೂಲಕ ನಾರಾಯಣ ಗುರುಗಳು ಮಹಿಳಾ ಸಮಾನತೆ, ಶಿಕ್ಷಣಕ್ಕೆ ಆದ್ಯತೆ ನೀಡಿದ ಮಹಾನ್ ಸಂತ. ಇಂತಹ ದಾರ್ಶನಿಕರ ತತ್ವ ಅದರ್ಶಗಳು ಸರ್ವಕಾಲಕ್ಕೂ ಪ್ರಸ್ತುತ ಎಂದರು.
ಈಡಿಗ ಸಮುದಾಯದ ಹಿರಿಯ ಚೇತನ ಎಸ್. ಬಂಗಾರಪ್ಪ ಹಾಗೂ ಕಾಗೋಡು ತಿಮ್ಮಪ್ಪ ಸಮಾಜದ ಎರಡು ಕಣ್ಣುಗಳಿದ್ದಂತೆ. ಅವರ ಕಾಗೋಡು ಹೋರಾಟದ ಫಲವೇ ಸಮುದಾಯ ಒಂದು ಶಕ್ತಿಯಾಗಿ ಬೆಳೆದು ನಿಂತಿದೆ ಎಂದು ಬೇಳೂರು ಅಭಿಪ್ರಾಯಪಟ್ಟರು.
ಬಿ.ಎಸ್.ಎನ್.ಡಿ.ಪಿ ಘಟಕದ ರಾಜ್ಯ ಮಹಿಳಾ ಪ್ರಧಾನ ಕಾರ್ಯದರ್ಶಿ ಲೇಖನಚಂದ್ರ ನಾಯ್ಕ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಘಟಕದ ಅಧ್ಯಕ್ಷ ಸೈದಪ್ಪ ಕೆ.ಗುತ್ತೇದಾರ್ ಮತ್ತು ಪ್ರಧಾನಕಾರ್ಯದರ್ಶಿ ಕಾಂತರಾಜ್ ಆರ್ಯ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಕಲಗೋಡು ರತ್ನಾಕರ್, ರಾಘವೇಂದ್ರ ನಾಯ್ಕ, ಬಿ.ನವೀನ್ ಚಂದ್ರ ಪೂಜಾರಿ, ಅಂಜನೇಯ, ಕೆ.ಓ.ಶಂಕರಣ್ಣ, ಮಮತಾ ಪೂಜಾರಿ, ಲಕ್ಷ್ಮಿನಾರಾಯಣಪ್ಪ, ಜಯಲಕ್ಷ್ಮಿ, ನಾಗೇಶ್ ಇದ್ದರು.
ಜಾನಪದ ಕಲಾವಿದರಾದ ಜಯಲಕ್ಷ್ಮಿ ನಾರಾಯಣಪ್ಪ, ಲಕ್ಷ್ಮಿ ರಾಮಪ್ಪ, ಲಕ್ಷ್ಮಿ ಬಂಗಾರಪ್ಪ, ಸೂಲಗಿತ್ತಿ ಜಯಮ್ಮ, ಕರಕುಶಲ ಪರಿಣಿತೆ ರತ್ನಮ್ಮ ಜನಾರ್ಧನ ಅವರನ್ನು ಸನ್ಮಾನಿಸಲಾಯಿತು. ವರ್ಷಿತಾ ಪ್ರಾರ್ಥಿಸಿದರು. ಕಾವ್ಯ ಸ್ವಾಗತಿಸಿದರು, ಶಿಕ್ಷಕಿ ಅಂಬಿಕಾ ನಿರೂಪಿಸಿ,
ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.