ADVERTISEMENT

ಪ್ರಬಲ ಜಾತಿಗಳನ್ನು ಒಬಿಸಿಗೆ ಸೇರಿಸಲು ಒತ್ತಾಯ; ಹಿಂದುಳಿದ ಜನಾಂಗದ ಏಳಿಗೆಗೆ ಮಾರಕ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2020, 10:25 IST
Last Updated 3 ಡಿಸೆಂಬರ್ 2020, 10:25 IST

ಶಿವಮೊಗ್ಗ: ಮುಂದುವರಿದ, ಪ್ರಬಲ ಜಾತಿಗಳು ಒಬಿಸಿಗೆ ಸೇರಿಸಲು ಹಕ್ಕೊತ್ತಾಯ ಮಾಡುತ್ತಿರುವುದು ಶೇ.65ರಷ್ಟು ಇರುವ ಹಿಂದುಳಿದ ಜನಾಂಗಗಳ ಅಭಿವೃದ್ಧಿಗೆ ಮಾರಕ ಎಂದು ಜಿಲ್ಲಾ ಹಿಂದುಳಿದ ಜಾತಿಗಳ ಒಕ್ಕೂಟದ ಸಂಚಾಲಕ ಆರ್‌.ಕೆ.ಸಿದ್ದರಾಮಣ್ಣ ಕಳವಳ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆಯನ್ನು ಹಿಂದುಳಿದ ಶಾಶ್ವತ ಆಯೋಗದಿಂದ ವೈಜ್ಞಾನಿಕವಾಗಿ ಮಾಡಿಸಿದ್ದರು. ಎಲ್ಲ ಸಮುದಾಯಗಳ ಸಮಗ್ರ ಅಭಿವೃದ್ಧಿಗೆ ಪೂರಕವಾದ ಈ ಸಮೀಕ್ಷೆಯನ್ನು ಈಗಿನ ಸರ್ಕಾರ ಸ್ವೀಕರಿಸಿ ಅನುಷ್ಠಾನಗೊಳಿಸಬೇಕು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಒಕ್ಕೂಟದ ಪದಾಧಿಕಾರಿಗಳು ಭೇಟಿ ಮಾಡಿ ಮನವಿ ಮಾಡಿದ್ದಾರೆ. ಜಯಪ್ರಕಾಶ್ ಹೆಗಡೆ ಅವರನ್ನು ಶಾಶ್ವತ ಹಿಂದುಳಿದ ಆಯೋಗದ ಅಧ್ಯಕ್ಷರನ್ನಾಗಿ ನೇಮಿಸಿದೆ. ಇದು ಸ್ವಾಗತಾರ್ಹ ಬೆಳವಣಿಗೆ ಎಂದು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಸರ್ಕಾರಗಳು ಪ್ರತಿ ಜಾತಿಗೂ ನಿಗಮ ಮಾಡುತ್ತಾ ಹೋದರೆ ಎಲ್ಲ ಜಾತಿಗಳೂ ಒತ್ತಾಯ ಹೇರುತ್ತವೆ. ರಾಜ್ಯದಲ್ಲಿ ಸಾವಿರಾರು ಜಾತಿಗಳಿವೆ. ಹಾಗಾದರೆ ಸಮಾಜ ಕಲ್ಯಾಣ ಇಲಾಖೆ ಏಕೆ ಬೇಕು? ಎಲ್ಲ ಜಾತಿಗೂ ಒಂದಿಷ್ಟು ದುಡ್ಡು ಕೊಟ್ಟರೆ ಸಾಕಲ್ಲವೇ? ಸರ್ಕಾರದ ಈ ಕ್ರಮ ಸರಿಯಲ್ಲ ಎಂದು ವಿರೋಧ ವ್ಯಕ್ತಪಡಿಸಿದರು.

ADVERTISEMENT

ಆರ್ಥಿಕ ಮತ್ತು ಸಾಮಾಜಿಕ ಸಮೀಕ್ಷೆಯ ಆಧಾರದಲ್ಲಿ ಸರ್ಕಾರ ಎಲ್ಲ ಜಾತಿಗಳಿಗೂ ಸಹಕಾರ ನೀಡಬೇಕು. ₹ 200 ಕೋಟಿ ವೆಚ್ಚದಲ್ಲಿ ಸಾಮಾಜಿಕ, ಶೈಕ್ಷಣಿಕ ವರದಿ ತಯಾರು ಮಾಡಲಾಗಿದೆ. ಈ ವೈಜ್ಞಾನಿಕ ವರದಿಯನ್ನು ಆಯೋಗ ತಕ್ಷಣವೇ ಸರ್ಕಾರಕ್ಕೆ ಸಲ್ಲಿಸಬೇಕು. ಎಲ್ಲ ಹಿಂದುಳಿದ ಜಾತಿಗಳಿಗೂ ಅನುಕೂಲವಾಗುವಂತೆ ಅನುಷ್ಠಾನಗೊಳಿಸಬೇಕು ಎಂದು ಒತ್ತಾಯಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಒಕ್ಕೂಟದ ಅಧ್ಯಕ್ಷ ವಿ.ರಾಜು, ಪ್ರದಾನ ಕಾರ್ಯದರ್ಶಿ ಎಸ್.ಬಿ.ಅಶೋಕ್ ಕುಮಾರ್, ಟಿ.ರಾಜೇಶ್, ಎಸ್.ಪಿ.ಶೇಷಾದ್ರಿ, ಗಿರಿಯಪ್ಪ, ಸುಮಿತ್ರಾ ರಂಗನಾಥ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.