ADVERTISEMENT

ಶಿವಮೊಗ್ಗ: ರೌಡಿಶೀಟರ್ ಅಕ್ಬರ್ ಕಾಲಿಗೆ ಪೊಲೀಸರ ಗುಂಡೇಟು

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2025, 3:17 IST
Last Updated 9 ಅಕ್ಟೋಬರ್ 2025, 3:17 IST
   

ಶಿವಮೊಗ್ಗ: ಬಂಧಿಸಲು ತೆರಳಿದ್ದ ವೇಳೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ ಆರೋಪದ ಮೇಲೆ ರೌಡಿಶೀಟರ್ ಅಕ್ಬರ್‌ (21) ಕಾಲಿಗೆ ಬುಧವಾರ ದೊಡ್ಡಪೇಟೆ ಠಾಣೆ ಪೊಲೀಸರು ಗುಂಡು ಹಾರಿಸಿ ಬಂಧಿಸಿದ್ದಾರೆ.

ನಗರದಲ್ಲಿ ಈಚೆಗೆ ನಡೆದ ಅಮ್ಜದ್ ಕೊಲೆ ಪ್ರಕರಣದಲ್ಲಿ ನ್ಯೂ ಮಂಡ್ಲಿ ನಿವಾಸಿ ಅಕ್ಬರ್ ಆರೋಪಿ ಎಂದು ತಿಳಿದುಬಂದಿದೆ. ತಲೆಮರೆಸಿಕೊಂಡಿದ್ದ ಅಕ್ಬರ್‌ನನ್ನು ಬಂಧಿಸಲು ದೊಡ್ಡಪೇಟೆ ಠಾಣೆ ಪಿಎಸ್‌ಐ ಹಾಗೂ ಸಿಬ್ಬಂದಿ ಹೊರವಲಯದ ಪುರಲೆಗೆ ಖಚಿತ ಸುಳಿವಿನ ಮೇರೆಗೆ ತೆರಳಿದ್ದರು. ಪೊಲೀಸರು ಬಂಧಿಸಲು ಮುಂದಾಗುತ್ತಿದ್ದಂತೆಯೇ ಕಾನ್‌ಸ್ಟೆಬಲ್ ಈಶ್ವರ ನಾಯ್ಕ ಮೇಲೆ ಹಲ್ಲೆ ನಡೆಸಿ ಅಕ್ಬರ್ ಪರಾರಿಯಾಗಲು ಪ್ರಯತ್ನಿಸಿದ. ಈ ವೇಳೆ ಪಿಎಸ್‌ಐ ಆತ್ಮರಕ್ಷಣೆಗಾಗಿ ಆರೋಪಿಯ ಕಾಲಿಗೆ ಗುಂಡು ಹೊಡೆದು ಬಂಧಿಸಿದ್ದಾರೆ ಎಂದು ಎಸ್ಪಿ ಜಿ.ಕೆ.ಮಿಥುನ್‌ಕುಮಾರ್ ಮಾಧ್ಯಮದವರಿಗೆ ತಿಳಿಸಿದ್ದಾರೆ.

ಗಾಯಗೊಂಡ ಅಕ್ಬರ್‌ನನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿ, ಹೆಚ್ಚಿನ ಚಿಕಿತ್ಸೆಗೆ ಎನ್‌ಎಚ್ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ತಿಳಿದುಬಂದಿದೆ. ಬೆದರಿಕೆ, ಕೊಲೆ ಯತ್ನ ಸೇರಿದಂತೆ ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ ಅಕ್ಬರ್‌ ವಿರುದ್ಧ ವಿವಿಧ ಪ್ರಕರಣ ದಾಖಲಾಗಿವೆ.

ADVERTISEMENT

ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.