ADVERTISEMENT

ಸಾಗರ: ಶಾಸಕರಿಂದ ಧರಣಿ: ಆಡಳಿತದ ವೈಫಲ್ಯ

ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ತೀ.ನ.ಶ್ರೀನಿವಾಸ್ ಟೀಕೆ

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2021, 6:10 IST
Last Updated 5 ಸೆಪ್ಟೆಂಬರ್ 2021, 6:10 IST
ತೀ.ನ.ಶ್ರೀನಿವಾಸ್
ತೀ.ನ.ಶ್ರೀನಿವಾಸ್   

ಸಾಗರ: ‘ಶಾಸಕರಾದವರು ತಮ್ಮ ಅಧಿಕಾರವನ್ನು ಬಳಸಿಕೊಂಡು ಹಳಿ ತಪ್ಪಿರುವ ಆಡಳಿತವನ್ನು ಸರಿ ದಾರಿಗೆ ತರಲು ಪ್ರಯತ್ನಿಸಬೇಕು. ಆದರೆ ಇಲ್ಲಿ ಶಾಸಕ ಹಾಲಪ್ಪ ಹರತಾಳು ಅವರೇ ಸರ್ಕಾರಿ ಕಚೇರಿಗಳಲ್ಲಿ ಧರಣಿ ನಡೆಸುತ್ತಿರುವುದು ಅವರ ಅಸಹಾಯಕತೆಯ ಸಂಕೇತವಾಗಿದೆ’ ಎಂದು ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ತೀ.ನ. ಶ್ರೀನಿವಾಸ್ ಟೀಕಿಸಿದರು.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಈಚೆಗೆ ಒಂದೇ ನಿವೇಶನಕ್ಕೆ ಎರಡು ಹಕ್ಕುಪತ್ರ ನೀಡಿರುವ ದೂರಿನ ಆಧಾರದ ಮೇಲೆ ಶಾಸಕ ಹಾಲಪ್ಪ ಅವರು ನಗರಸಭೆ ಕಚೇರಿಯಲ್ಲಿ ಧರಣಿ ಕುಳಿತಿದ್ದರು. ಈ ಬಗ್ಗೆ ತನಿಖೆ ನಡೆಸುವಂತೆ ಪೊಲೀಸರಿಗೆ ದೂರು ನೀಡಲು ಅವರು ಪೌರಾಯುಕ್ತರಿಗೆ ಸೂಚಿಸಿದ್ದಾರೆ. ನಗರಸಭೆಯಲ್ಲಿ ಬಿಜೆಪಿಯೇ ಅಧಿಕಾರದಲ್ಲಿದ್ದು ಅಲ್ಲಿನ ಆಡಳಿತ ಸಂಪೂರ್ಣವಾಗಿ ವಿಫಲಗೊಂಡಿದೆ ಎಂಬುದಕ್ಕೆ ಈ ವಿದ್ಯಮಾನ ಕೈಗನ್ನಡಿ’ ಎಂದು ದೂರಿದರು.

‘ಹಾಲಪ್ಪ ಅವರು ಒಂದು ವರ್ಷದ ಹಿಂದೆಯೇ ನಗರಸಭೆಯ ಆಡಳಿತದ ಕಾರ್ಯವೈಖರಿ ಬಗ್ಗೆ ಪ್ರಸ್ತಾಪಿಸಿದ್ದರು. ನ್ಯೂನತೆ ಸರಿಪಡಿಸುವುದಾಗಿ ಭರವಸೆ ನೀಡಿದ್ದರು. ಶಾಸಕರು ನಗರಸಭೆಯ ಸಾಮಾನ್ಯ ಸಭೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದಾರೆ. ಅವರ ಕಚೇರಿ ಕೂಡ ನಗರಸಭೆ ಆವರಣದಲ್ಲೇ ಇದೆ. ಆದಾಗ್ಯೂ ನಗರಸಭೆ ಆಡಳಿತ ಸರಿದಾರಿಗೆ ಬರುತ್ತಿಲ್ಲ ಎಂದರೆ ಅದಕ್ಕೆ ಶಾಸಕರೇ ಹೊಣೆ ಹೊರಬೇಕು’ ಎಂದರು.

ADVERTISEMENT

ತಹಶೀಲ್ದಾರರಿಂದ ಭೂ ಪರಿವರ್ತನೆಯಾದ 3600 ನಿವೇಶನಗಳ ಖಾತೆಗೆ ಸಂಬಂಧಿಸಿದ ದಾಖಲೆ ನೀಡದಂತೆ, ಅಲ್ಲಿ ಯಾವುದೇ ಕಟ್ಟಡ ನಿರ್ಮಿಸಲು ಪರವಾನಗಿ ನೀಡದಂತೆ ಸರ್ಕಾರ ಆದೇಶಿಸಿದೆ. ಮೂರು ವರ್ಷಗಳಿಂದ ಈ ಸಮಸ್ಯೆಯನ್ನು ಬಗೆಹರಿಸುವುದಾಗಿ ಶಾಸಕರು ಹೇಳುತ್ತಿದ್ದರೂ ಈವರೆಗೂ ಅದು ಸಾಧ್ಯವಾಗಿಲ್ಲ ಎಂದು ದೂರಿದರು.

ಕಾಗೋಡು ತಿಮ್ಮಪ್ಪ ಅವರು ಶಾಸಕರಾಗಿದ್ದಾಗ ನಗರವ್ಯಾಪ್ತಿಯ ನಾಲ್ಕು ಸಾವಿರ ಮನೆಗಳಿಗೆ ಹಕ್ಕುಪತ್ರ ನೀಡಲಾಗಿದೆ. ಹಾಲಿ 360 ಮನೆಗಳಿಗೆ ಹಕ್ಕುಪತ್ರ ನೀಡುವ ಪ್ರಸ್ತಾಪ ಸರ್ಕಾರದ ಮುಂದಿದೆ. ಹಾಲಪ್ಪ ಅವರು ಶಾಸಕರಾಗಿ ಮೂರು ವರ್ಷ ಕಳೆದಿದ್ದರೂ ಫಲಾನುಭವಿಗಳಿಗೆ ಹಕ್ಕುಪತ್ರ ಕೊಡಿಸಲು ಸಾಧ್ಯವಾಗಿಲ್ಲ ಎಂದರು.

ಕೊಳಚೆ ನಿರ್ಮೂಲನಾ ಮಂಡಳಿಯಿಂದ ನಗರವ್ಯಾಪ್ತಿಯಲ್ಲಿ 1588 ಮನೆಗಳ ನಿರ್ಮಾಣಕ್ಕೆ ಮಂಜೂರಾತಿ ದೊರಕಿದೆ. ಈ ಪೈಕಿ 472 ಜನರು ಮಂಡಳಿಗೆ ತಲಾ ₹ 45 ಸಾವಿರ ಪಾವತಿಸಿದ್ದಾರೆ. ಇದರಲ್ಲಿ 304 ಜನರು ಮಾತ್ರ ಮನೆ ನಿರ್ಮಿಸುತ್ತಿದ್ದು, ಈ ಪೈಕಿ 137 ಮನೆಗಳು ಮಾತ್ರ ಪೂರ್ಣಗೊಂಡಿವೆ. ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವಲ್ಲಿ ಆಡಳಿತ ವಿಫಲವಾಗಿದೆ ಎಂದು ಟೀಕಿಸಿದರು.

2012ನೇ ಸಾಲಿನಲ್ಲಿ ಆರಂಭವಾದ ಒಳಚರಂಡಿ ನಿರ್ಮಾಣ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಕಾಮಗಾರಿಗಾಗಿ ಅಗತ್ಯವಿರುವ ಭೂಮಿಯನ್ನು ಬಲಾಢ್ಯರಿಂದ ಬಿಡಿಸಿಕೊಳ್ಳಲು ಆಡಳಿತಕ್ಕೆ ಸಾಧ್ಯವಾಗಿಲ್ಲ ಎಂದು ದೂರಿದರು.

ಪ್ರಮುಖರಾದ ಮಹ್ಮದ್ ಖಾಸಿಂ, ಎಲ್.ವಿ.ಸುಭಾಷ್, ಸಬಾಸ್ಟಿನ್ ಗೋಮ್ಸ್, ಟೀಟೂ ಗೋಮ್ಸ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.