ADVERTISEMENT

ಬಂಗಾರಪ್ಪ ಜನ್ಮದಿನ: ಜನಸಾಮಾನ್ಯರ ಸಂಕಷ್ಟ ಅರಿತಿದ್ದ ನಾಯಕ - ಎಸ್.ಜಿ.ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2025, 6:20 IST
Last Updated 27 ಅಕ್ಟೋಬರ್ 2025, 6:20 IST
ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಅವರ 93ನೇ ಜನ್ಮದಿನದ ಅಂಗವಾಗಿ ಸೊರಬದಲ್ಲಿ ಭಾನುವಾರ ನಡೆದ ವಿಚಾರ ಸಂಕಿರಣದ ಉದ್ಘಾಟನೆಯ ನೋಟ
ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಅವರ 93ನೇ ಜನ್ಮದಿನದ ಅಂಗವಾಗಿ ಸೊರಬದಲ್ಲಿ ಭಾನುವಾರ ನಡೆದ ವಿಚಾರ ಸಂಕಿರಣದ ಉದ್ಘಾಟನೆಯ ನೋಟ   

ಶಿವಮೊಗ್ಗ: ‘ಜನರ ಮಧ್ಯದಿಂದ ಅಧಿಕಾರಕ್ಕೆ ಹೋಗಿ ಅಲ್ಲಿ ಕಣ್ಣು,‌ ಕಿವಿ, ನೆನಪಿನ ಶಕ್ತಿ ಕಳೆದುಕೊಳ್ಳುವ ಜನಪ್ರತಿನಿಧಿಗಳ ನಡುವೆ ಜನರ ಪರವಾಗಿ ನಿಂತು ಯೋಜನೆಗಳನ್ನು ರೂಪಿಸಿದವರಲ್ಲಿ ಎಸ್. ಬಂಗಾರಪ್ಪ, ದೇವರಾಜ ಅರಸು ಹಾಗೂ ಸಿದ್ದರಾಮಯ್ಯ ಅಗ್ರ ಪಂಕ್ತಿಯಲ್ಲಿ ನಿಲ್ಲುತ್ತಾರೆ’ ಎಂದು ಹಿರಿಯ ಸಾಹಿತಿ ಎಸ್.ಜಿ.ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.

ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಅವರ 93ನೇ ಜನ್ಮದಿನಾಚರಣೆ ಅಂಗವಾಗಿ ಎಸ್.ಬಂಗಾರಪ್ಪ ಫೌಂಡೇಷನ್ ಹಾಗೂ ವಿಚಾರ ವೇದಿಕೆಯ ಆಶ್ರಯದಲ್ಲಿ ಸೊರಬದಲ್ಲಿ ಭಾನುವಾರ ಆಯೋಜಿಸಿದ್ದ ‘ಬಂಗಾರಪ್ಪನವರ ಚಿಂತನೆಗಳು, ಸುಸ್ಥಿರ ಬದುಕು ಪ್ರಸ್ತುತತೆ’ ಕುರಿತ ವಿಚಾರ ಸಂಕಿರಣದಲ್ಲಿ ಮಾತನಾಡಿದರು.

‘ಸಮಾಜವಾದಿ ಚಳವಳಿ ಕೇವಲ ತಾತ್ವಿಕ ಚಿಂತನೆ ಅಲ್ಲ. ಅದರ ಆಶಯಗಳನ್ನು ಅನುಷ್ಠಾನಕ್ಕೆ ತರಲು ಪ್ರಯತ್ನಿಸಿದವರು ಬಂಗಾರಪ್ಪ. ಅದರ ಫಲವಾಗಿ ಆಶ್ರಯ ಯೋಜನೆ ಮೂಲಕ ಆರು ತಿಂಗಳಲ್ಲಿ ಎಂಟು ಲಕ್ಷ ಜನರಿಗೆ ವಸತಿ ಸೌಲಭ್ಯ ಕಲ್ಪಿಸಿದರು. ಬಡವರಿಗೆ ನೆರವಾಗಲು ಆರಾಧನ, ಆರ್ಥಿಕವಾಗಿ ಹಿಂದುಳಿದವರ ಆರೋಗ್ಯ ಖಾತರಿಗೆ ಶುಶ್ರೂಷೆ, ಗುಡಿ ಕೈಗಾರಿಕೆಗಳಿಗೆ ಉತ್ತೇಜನ, ಅಧಿಕಾರದ ವಿಕೇಂದ್ರೀಕರಣಕ್ಕೆ ವಿಶ್ವ ಯೋಜನೆ, ರೈತರ ಪಂಪ್‌ ಸೆಟ್‌ಗೆ ಉಚಿತ ವಿದ್ಯುತ್, ಗ್ರಾಮೀಣ ಕೃಪಾಂಕ ನೀಡುವ ಕಾರ್ಯಕ್ರಮಗಳು ಅವರ ಹೆಜ್ಜೆ ಗುರುತುಗಳಾದವು’ ಎಂದರು.

ADVERTISEMENT

‘ಬಂಗಾರಪ್ಪ ಅವರ ಚಿಂತನೆಗಳು ಸಾಕಾರಗೊಂಡಿದ್ದನ್ನು ಸ್ಮರಿಸದೇ ಹೋದರೆ, ಅವರ ನಡೆ–ನುಡಿ, ಸಿದ್ಧಾಂತಗಳನ್ನು ಅವಲೋಕನ ಮಾಡದೇ ಇದ್ದರೆ ಅದು ಆತ್ಮದ್ರೋಹವಾಗುತ್ತದೆ. ಜಗತ್ತಿನಲ್ಲಿ ದ್ವೇಷ, ಅಸೂಯೆ, ಹೊಟ್ಟೆಕಿಚ್ಚು ತುಂಬಿರುವ ಹಾಗೂ ಬೇಲಿಯೇ ಎದ್ದು ಹೊಲ ಮೇಯುವ ಇಂದಿನ ವಾತಾವರಣದಲ್ಲಿ, ನಿಸರ್ಗಕ್ಕೆ ಹೆಚ್ಚು ನಿಷ್ಠವಾದ ಧರ್ಮ ಪಾಲಿಸಿದ, ಸಿದ್ಧಾಂತಕ್ಕೆ ಬದ್ಧವಾಗಿ ಸಾರ್ವಜನಿಕ ಬದುಕು ಕಟ್ಟಿದವರು ಬಂಗಾರಪ್ಪ’ ಎಂದು ಸ್ಮರಿಸಿದರು.

ಶೋಷಿತರನ್ನು ಸಬಲಗೊಳಿಸಲು ಬಂಗಾರಪ್ಪ ಅಂದು ಬಿತ್ತಿದ್ದ ಸಮಾಜವಾದಿ ಚಿಂತನೆಗಳೆಂಬ ಬೀಜದ ಫಲವೇ ರಾಜ್ಯ ಸರ್ಕಾರದ ಇಂದಿನ ಗ್ಯಾರಂಟಿ ಯೋಜನೆಗಳು ಎಂದು ನಾಟಕ ಅಕಾಡೆಮಿ ಅಧ್ಯಕ್ಷ ಕೆ.ವಿ.ನಾಗರಾಜಮೂರ್ತಿ ಹೇಳಿದರು.

‘ಶಾಂತವೇರಿ ಗೋಪಾಲಗೌಡರ ದೊಡ್ಡ ಪ್ರಭಾವ ಬಂಗಾರಪ್ಪ ಅವರ ಮೇಲೆ ಆಗಿತ್ತು. ಮುಖ್ಯಮಂತ್ರಿ ಆಗಿದ್ದಾಗ ಮಾತ್ರವಲ್ಲ ಜೀವನಪೂರ್ತಿ ಸಮಾಜವಾದದ ಆಶಯಗಳ ಸಾಕಾರಕ್ಕೆ ಪ್ರಯತ್ನಿಸಿದ ಬಂಗಾರಪ್ಪ, ಅಧಿಕಾರವನ್ನು ಬಲಾಢ್ಯರಿಂದ ಶೋಷಿತರ ಕೈಗೆ ಒಪ್ಪಿಸುವ ದೊಡ್ಡ ಕೆಲಸ ಮಾಡಿದ್ದರು’ ಎಂದು ಸ್ಮರಿಸಿದರು.

ವಿಚಾರ ಸಂಕಿರಣದಲ್ಲಿ ಬಂಗಾರಪ್ಪ ವಿಚಾರ ವೇದಿಕೆ ಅಧ್ಯಕ್ಷ ವೇಣುಗೋಪಾಲ ನಾಯಕ್ ಹಾಜರಿದ್ದರು. ಹಿರಿಯ ಸಾಹಿತಿ ಕಾಳೇಗೌಡ ನಾಗವಾರ ಅಧ್ಯಕ್ಷತೆ ವಹಿಸಿದ್ದರು.

Quote - ಎಸ್. ಬಂಗಾರಪ್ಪ ಅವರು ಸಾಹಿತ್ಯ ಸಂಗೀತದ ತಿಳಿವಳಿಕೆ ಹೊಂದಿದ್ದ ದೊಡ್ಡ ಕಲಾಪ್ರೇಮಿ. ಅವರು ಈ ನಾಡಿನ ಸಾಂಸ್ಕೃತಿಕ ಹರಿಕಾರ ಕೆ.ವಿ.ನಾಗರಾಜಮೂರ್ತಿ ರಾಜ್ಯ ನಾಟಕ ಅಕಾಡೆಮಿ ಅಧ್ಯಕ್ಷ

Quote - ಲೋಹಿಯಾ ವಿಚಾರಧಾರೆ ಕಾಗೋಡು ಹೋರಾಟದ ಆಶಯಗಳಿಂದ ಬಂಗಾರಪ್ಪ ಪ್ರಭಾವಿತರಾಗಿದ್ದರು. ಪಾದರಸದ ವ್ಯಕ್ತಿತ್ವದ ಅವರು ಸಮಾಜವಾದಿ ಚಳವಳಿಯಲ್ಲಿ ಎಲ್ಲ ಜಾತಿ ಭಾಷೆಯವರನ್ನು ಒಳಗೊಳ್ಳುವ ಕೆಲಸ ಮಾಡಿದ್ದರು ಕಾಳೇಗೌಡ ನಾಗವಾರ ಹಿರಿಯ ಸಾಹಿತಿ

Quote - ಸ್ವಾಭಿಮಾನಿ ಬಂಗಾರಪ್ಪ ಕರ್ನಾಟಕದ ಪ್ರಾದೇಶಿಕತೆಯ ಅಸ್ಮಿತೆಯಾಗಿದ್ದರು. ಅವರು ಆಗ ದೆಹಲಿಯ ದೊರೆಗಳೊಂದಿಗೆ ಒಂದಷ್ಟು ರಾಜಿಮಾಡಿಕೊಂಡು ಹೊಂದಾಣಿಕೆ ಗುಣ ತೋರ್ಪಡಿಸಿದ್ದರೆ ಎರಡು ಅವಧಿಗೆ ಮುಖ್ಯಮಂತ್ರಿ ಆಗಿರುತ್ತಿದ್ದರು ಡಿ.ಮಂಜುನಾಥ್ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ

Quote - ಬಂಗಾರಪ್ಪ ಮುಖ್ಯಮಂತ್ರಿ ಆಗಿದ್ದಾಗ ರಾಜ್ಯದಲ್ಲಿ 10 ಸಾವಿರ ಅತಿಥಿ ಶಿಕ್ಷಕರ ಸೇವೆಯನ್ನು ಸಕ್ರಮಗೊಳಿಸಿದ್ದರು. ಆಗ ನನ್ನ ಕೆಲಸವೂ ಕಾಯಂ ಆಗಿತ್ತು ಎಚ್.ಎಲ್.ಪುಷ್ಪಾ ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ

Cut-off box - ಗಮನ ಸೆಳೆದ ಪುಟ್ಟಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ ವಿಚಾರ ಸಂಕಿರಣದ ನಂತರ ಸೊರಬದ ಪಿಡಬ್ಲ್ಯುಡಿ ಕಾಲೊನಿ ಸರ್ಕಾರಿ ಶಾಲೆಯ ಪುಟ್ಟ ಮಕ್ಕಳು ನಡೆಸಿಕೊಟ್ಟ ಆಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮ ಎಲ್ಲರ ಮೆಚ್ಚುಗೆ ಪಡೆಯಿತು. ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಸಚಿವ ಮಧು ಬಂಗಾರಪ್ಪ ಸಹೋದರಿ ಸುಜಾತಾ ತಿಲಕ್ ಕುಮಾರ್ ಟಿಪಿಎಂಎಲ್ ಜಂಟಿ ವ್ಯವಸ್ಥಾಪಕ ನಿರ್ದೇಶಕ ಕೆ.ಎನ್.ತಿಲಕ್ ಕುಮಾರ್ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಚಂದ್ರಶೇಖರ ನುಗ್ಗಲಿ ಪಾಲ್ಗೊಂಡಿದ್ದರು. ಬಂಗಾರಪ್ಪ ಹಾಗೂ ಶಕುಂತಲಾ ದಂಪತಿಯ ಸಮಾಧಿ ಸ್ಥಳ ಬಂಗಾರಧಾಮವನ್ನು ವಿನ್ಯಾಸಗೊಳಿಸಿದ ಆರ್ಕಿಟೆಕ್ಟ್ ವಿನಯ್ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.