ADVERTISEMENT

ಶಿವಮೊಗ್ಗ | ಸಫಾಯಿ ಕರ್ಮಚಾರಿಗಳಿಗೆ ಗುರುತಿನ ಪತ್ರ ನೀಡಿ: ಜಿಲ್ಲಾಧಿಕಾರಿ ಸೂಚನೆ

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2025, 5:51 IST
Last Updated 15 ಅಕ್ಟೋಬರ್ 2025, 5:51 IST
ಗುರುದತ್ತ ಹೆಗಡೆ
ಗುರುದತ್ತ ಹೆಗಡೆ   

ಶಿವಮೊಗ್ಗ: ಸಫಾಯಿ ಕರ್ಮಚಾರಿಗಳು ಸರ್ಕಾರದ ವಿವಿಧ ಯೋಜನೆಗಳಡಿ ಸೌಲಭ್ಯ ಪಡೆಯಲು ಅನುಕೂಲವಾಗುವಂತೆ ಅವರಿಗೆ ಗುರುತಿನ ಚೀಟಿ ನೀಡಬೇಕು ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅಧಿಕಾರಿಗಳಿಗೆ ಸೂಚಿಸಿದರು.

ನಗರದಲ್ಲಿ ಮಂಗಳವಾರ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಸಫಾಯಿ ಕರ್ಮಚಾರಿಗಳ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆಯಲ್ಲಿ ಮಾತನಾಡಿದರು.

ಹಲವು ಸಫಾಯಿ ಕರ್ಮಚಾರಿಗಳು ಹಾಗೂ ಸ್ವಚ್ಛತಾ ಕಾರ್ಮಿಕರಿಗೆ ಇನ್ನೂ ಗುರುತಿನ ಚೀಟಿ ದೊರೆಯದಿರುವ ಬಗ್ಗೆ ಮಾಹಿತಿ ಇದೆ. ಕಾರ್ಮಿಕ ಇಲಾಖೆ ಸೇರಿದಂತೆ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು ಕೂಡಲೇ ಗಮನಹರಿಸಿ, ಅವರಿಗೆ ಗುರುತಿನ ಚೀಟಿ ಕೊಡಿಸಲು ಶ್ರಮಿಸುವಂತೆ ಸೂಚಿಸಿದರು.

ADVERTISEMENT

ಸಫಾಯಿ ಕರ್ಮಚಾರಿ ನಿಷೇಧ ಕಾಯ್ದೆ ಜಾರಿಗೊಂಡಿದೆ. ಹೀಗಾಗಿ ಜಿಲ್ಲೆಯಲ್ಲಿ ಅದನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಿ, ಮೇಲ್ವಿಚಾರಣೆ ನಡೆಸಲಾಗುತ್ತಿದೆ. ದುರ್ಬಲ ವರ್ಗದವರನ್ನು ಸಬಲರನ್ನಾಗಿ ಮಾಡಲು ಹಾಗೂ ಪ್ರತಿಯೊಬ್ಬ ವ್ಯಕ್ತಿಯೂ ವ್ಯಕ್ತಿಗೌರವದಿಂದ ಬದುಕು ಕಟ್ಟಿಕೊಳ್ಳಲು ಸಹಕರಿಸುವಂತೆ ಮನವಿ ಮಾಡಿದರು.

ಮ್ಯಾನ್‌ಹೋಲ್‌ ಮತ್ತು ಅಪಾಯಕಾರಿ ಸ್ಥಳಗಳಲ್ಲಿ ಸ್ವಚ್ಛತಾ ಕಾರ್ಯಕ್ಕೆ ಮಾನವ ಸಂಪನ್ಮೂಲ ಬಳಸಿಕೊಳ್ಳುತ್ತಿರುವುದು ಅಕ್ಷಮ್ಯ. ಈ ಬಗ್ಗೆ ಸಫಾಯಿ ಕರ್ಮಚಾರಿಗಳಿಗೆ ಹಾಗೂ ಸಾರ್ವಜನಿಕರಿಗೆ ಅರಿವು ಮೂಡಿಸಲು ಕಾರ್ಯಕ್ರಮ ಆಯೋಜಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.

ಸಭೆಯಲ್ಲಿ ಎಎಸ್ಪಿ ಎ.ಜಿ.ಕಾರಿಯಪ್ಪ, ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಮಲ್ಲೇಶಪ್ಪ ಉಪಸ್ಥಿತರಿದ್ದರು.

‘ಅರ್ಹ ಕಾರ್ಮಿಕರಿಗೆ ಮನೆಗಳ ಕೊಡಿಸಿ’
ಭದ್ರಾವತಿಯಲ್ಲಿ ಕಾಯಂ ಪೌರ ಕಾರ್ಮಿಕರಿಗೆ ಕಾಯ್ದಿರಿಸಿದ ಮನೆಗಳಲ್ಲಿ ಗುತ್ತಿಗೆ ಕಾರ್ಮಿಕರು ಅಕ್ರಮವಾಗಿ  ವಾಸವಾಗಿರುವುದು ಗಮನಕ್ಕೆ ಬಂದಿದೆ. ಸಂಬಂಧಿಸಿದ ಸ್ಥಳೀಯ ಸಂಸ್ಥೆಯ ಅಧಿಕಾರಿಗಳು ಪೊಲೀಸ್‌ ರಕ್ಷಣೆಯೊಂದಿಗೆ ಸಮಗ್ರ ದಾಖಲೆಗಳ ಪರಿಶೀಲಿಸಿ ಅರ್ಹರು ವಾಸ ಮಾಡಲು ಮನೆಗಳನ್ನು ತೆರವು ಮಾಡಿಸಿಕೊಡಲು ಕ್ರಮ ವಹಿಸುವಂತೆ ಜಿಲ್ಲಾಧಿಕಾರಿ ಸೂಚಿಸಿದರು. ಅಸುರಕ್ಷತೆ ಮತ್ತು ಅಪಾಯಕಾರಿ ಕಾರ್ಯದಲ್ಲಿ ತೊಡಗಿದ ಸಫಾಯಿ ಕರ್ಮಚಾರಿಗಳಿಗೆ ಅವರ ಕುಟುಂಬದ ಅವಲಂಬಿತರಿಗೆ ಕಡ್ಡಾಯವಾಗಿ ವಿಮೆ ವ್ಯಾಪ್ತಿಗೊಳಪಡಿಸಲು ಸಂಬಂಧಿಸಿದ ಪ್ರಾಧಿಕಾರಗಳು ಕ್ರಮ ಕೈಗೊಂಡು ಅವರ ಆರೋಗ್ಯ ರಕ್ಷಣೆಗೆ ಮುಂದಾಗುವಂತೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.