ಸಾಗರ: ಅಂಬಾರಗೋಡ್ಲು-ಕಳಸವಳ್ಳಿ ಸೇತುವೆ ಲೋಕಾರ್ಪಣೆ ಸಮಾರಂಭ ನಿಗದಿಯಾಗಿರುವಂತೆ ಜುಲೈ 14 ರಂದೇ ನಡೆಯಲಿದೆ. ಕೆಲವರು ಸಮಾರಂಭ ಮುಂದಕ್ಕೆ ಹೋಗಿದೆ ಎಂದು ಅಪಪ್ರಚಾರ ಮಾಡುತ್ತಿದ್ದು ಸಾರ್ವಜನಿಕರು ಇದಕ್ಕೆ ಕಿವಿಗೊಡಬಾರದು ಎಂದು ಸಂಸದ ಬಿ.ವೈ.ರಾಘವೇಂದ್ರ ಮನವಿ ಮಾಡಿದ್ದಾರೆ.
ಸಭಾ ಕಾರ್ಯಕ್ರಮ ನಡೆಯಲಿರುವ ನಗರದ ನೆಹರೂ ಮೈದಾನದಲ್ಲಿ ನಿರ್ಮಾಣಗೊಳ್ಳುತ್ತಿರುವ ವೇದಿಕೆ ಸಿದ್ದತೆಯನ್ನು ಶನಿವಾರ ಪರಿಶೀಲಿಸಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಮಳೆ ಎಷ್ಟೇ ಜೋರಾಗಿ ಬಂದರೂ ಸಭೆಗೆ ಬರುವ ಸಾರ್ವಜನಿಕರಿಗೆ ತೊಂದರೆಯಾಗದಂತೆ ವೇದಿಕೆ ಮುಂಭಾಗದಲ್ಲಿ ಆಸನದ ವ್ಯವಸ್ಥೆ ಕಲ್ಪಿಸಲಾಗುತ್ತಿದೆ ಎಂದರು.
ಹೆದ್ದಾರಿ ಯೋಜನೆಯಡಿ ₹470 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ದೇಶದ 2ನೇ ಅತೀ ದೊಡ್ಡ ಕೇಬಲ್ ಸೇತುವೆ ಹಿನ್ನೀರಿನ ಜನರ ಆರು ದಶಕಗಳ ಕನಸನ್ನು ನನಸು ಮಾಡಿದೆ. ಸಾಗರದ ಎಸ್.ಎನ್.ನಗರ ವೃತ್ತದಿಂದ ಸಿಗಂದೂರು ಸಮೀಪದ ಮರಕುಟುಕದವರೆಗೆ ಹೆದ್ದಾರಿ ನಿರ್ಮಿಸಲು ₹920 ಕೋಟಿ ಮಂಜೂರಾಗಿದೆ ಎಂದು ಅವರು ಮಾಹಿತಿ ನೀಡಿದರು.
ಸೇತುವೆ ನಿರ್ಮಾಣದ ಹಿಂದೆ ಹಲವರ ಪರಿಶ್ರಮವಿದೆ. ಸೇತುವೆಗೆ ಯಡಿಯೂರಪ್ಪ ಅವರ ಹೆಸರನ್ನು ನಾಮಕರಣ ಮಾಡಬೇಕು ಎಂದು ಕೆಲವರು ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಸಿರುವುದು ಗಮನಕ್ಕೆ ಬಂದಿದೆ. ಆದರೆ ಸದ್ಯದ ತೀರ್ಮಾನದಂತೆ ಸೇತುವೆಗೆ ಸಿಗಂದೂರು ಚೌಡೇಶ್ವರಿ ಹೆಸರಿಡಲು ನಿರ್ಧರಿಸಲಾಗಿದೆ. ಈ ವಿಷಯದಲ್ಲಿ ಕೆಲವು ನಿಯಮಗಳನ್ನು ಪಾಲಿಸಬೇಕಿದ್ದು ಆ ಪ್ರಕಾರ ನಡೆದುಕೊಳ್ಳಲಾಗುವುದು ಎಂದು ಅವರು ತಿಳಿಸಿದರು.
ಜುಲೈ 14ರಂದು ಬೆಳಿಗ್ಗೆ 10ಕ್ಕೆ ಕೇಂದ್ರ ಸಚಿವ ನಿತಿನ್ ಗಡ್ಕರಿ ನಾಗಪುರದಿಂದ ಶಿವಮೊಗ್ಗದ ವಿಮಾನ ನಿಲ್ದಾಣಕ್ಕೆ ಬರಲಿದ್ದಾರೆ. ಶಿವಮೊಗ್ಗದಿಂದ ಸಾಗರ ಹೆಲಿಪ್ಯಾಡ್‌ಗೆ ಬಂದು ಸಿಗಂದೂರಿಗೆ ತೆರಳಿ ಸೇತುವೆ ಲೋಕಾರ್ಪಣೆಗೊಳಿಸಿ ಪೂಜೆ ಸಲ್ಲಿಸಿ, ಮಧ್ಯಾಹ್ನ 1ಕ್ಕೆ ಸಭಾ ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ ಎಂದು ಅವರು ಹೇಳಿದರು.
ಪ್ರಮುಖರಾದ ಹಾಲಪ್ಪ ಹರತಾಳು, ಜಗದೀಶ್, ಟಿ.ಡಿ.ಮೇಘರಾಜ್, ರಾಜಶೇಖರ ಗಾಳಿಪುರ, ದೇವೇಂದ್ರಪ್ಪ ಯಲಕುಂದ್ಲಿ, ಕೆ.ಆರ್.ಗಣೇಶ್ ಪ್ರಸಾದ್, ಆರ್.ಶ್ರೀನಿವಾಸ್, ವಿ.ಮಹೇಶ್, ಪ್ರಶಾಂತ್ ಕೆ.ಎಸ್. ಶ್ರೀರಾಮ್, ವಿಶ್ವನಾಥ ಕುಗ್ವೆ, ವಿನೋದ್ ರಾಜ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.