ಸಾಗರ: ಸಾಗರ ತಾಲ್ಲೂಕನ್ನು ಜಿಲ್ಲಾ ಕೇಂದ್ರವೆಂದು ಘೋಷಿಬೇಕೆಂದು ಒತ್ತಾಯಿಸಿ ಸೆ.18 ರಂದು ನಗರದಲ್ಲಿ ವಿವಿಧ ರಾಜಕೀಯ ಪಕ್ಷಗಳ ಪ್ರಮುಖರ, ಸಂಘ ಸಂಸ್ಥೆಗಳ ಪ್ರತಿನಿಧಿಗಳ ಪಕ್ಷಾತೀತ ಪ್ರತಿಭಟನೆ ನಡೆಯಲಿದೆ ಎಂದು ಸಾಗರ ಜಿಲ್ಲಾ ಹೋರಾಟ ಸಂಚಾಲನಾ ಸಮಿತಿಯ ಪ್ರಮುಖರಾದ ತೀ.ನ. ಶ್ರೀನಿವಾಸ್ ತಿಳಿಸಿದ್ದಾರೆ.
ಸಾಗರವನ್ನು ಜಿಲ್ಲಾ ಕೇಂದ್ರವನ್ನಾಗಿ ಘೋಷಿಸಬೇಕು ಎಂಬ ಹೋರಾಟದ ಕುರಿತು ಜಾಗೃತಿ ಮೂಡಿಸುವ ಕರಪತ್ರವನ್ನು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಬಿಡುಗಡೆ ಮಾಡಿ ಮಾತನಾಡಿದರು.
ಜಿಲ್ಲಾ ಕೇಂದ್ರವಾಗುವ ಎಲ್ಲಾ ಅರ್ಹತೆಯನ್ನು ಸಾಗರ ಹೊಂದಿದೆ. 1956ರಲ್ಲೆ ಸಾಗರ ಉಪವಿಭಾಗೀಯ ಕೇಂದ್ರವಾಗಿ ಕಾರ್ಯ ನಿರ್ವಹಿಸುತ್ತಿದೆ. ಕೆಳದಿ ಅರಸರು ಸಾಗರ ಕೇಂದ್ರವಾಗಿಟ್ಟುಕೊಂಡು ಆಡಳಿತ ನಡೆಸಿದ ಇತಿಹಾಸವೆ ಕಣ್ಣೆದುರು ಇದೆ. ಹೀಗಾಗಿ ಸಾಗರವನ್ನು ಜಿಲ್ಲಾ ಕೇಂದ್ರವಾಗಿ ಘೋಷಿಸುವತ್ತ ರಾಜ್ಯ ಸರ್ಕಾರ ಶೀಘ್ರ ತೀರ್ಮಾನ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.
ಸಾಗರವನ್ನು ಜಿಲ್ಲಾ ಕೇಂದ್ರವಾಗಿ ಘೋಷಿಸಿದರೆ ಸೊರಬ, ಹೊಸನಗರ ತಾಲ್ಲೂಕಿನ ಜನರಿಗೂ ಅನುಕೂಲವಾಗುತ್ತದೆ. ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲ್ಲೂಕನ್ನು ನೂತನ ಜಿಲ್ಲೆಯ ವ್ಯಾಪ್ತಿಗೆ ಸೇರಿಸುವ ಸಾಧ್ಯತೆಗಳನ್ನು ಪರಿಶೀಲಿಸಬೇಕು ಎಂದು ಹೇಳಿದರು.
ಸಾಗರ ಜಿಲ್ಲಾ ಕೇಂದ್ರವಾಗಬೇಕು ಎಂಬ ಹೋರಾಟಕ್ಕೆ ಕ್ಷೇತ್ರದ ಹಾಲಿ ಶಾಸಕರು, ಮಾಜಿ ಸಚಿವರುಗಳು ಬೆಂಬಲ ಸೂಚಿಸಿರುವುದು ಹೋರಾಟಕ್ಕೆ ಬಲ ತಂದಿದೆ. ಸರ್ಕಾರ ಜನರ ಭಾವನೆಗಳಿಗೆ ಸ್ಪಂದಿಸಬೇಕು ಎಂದು ಅವರು ಒತ್ತಾಯಿಸಿದರು.
ಪ್ರಮುಖರಾದ ಕಲಸೆ ಚಂದ್ರಪ್ಪ, ಕನ್ನಪ್ಪ ಬೆಳಲಮಕ್ಕಿ, ಮಹ್ಮದ್ ಖಾಸಿಂ, ನಾಗರಾಜ್ ಎಂ.ಎಚ್. ರಮೇಶ್, ಶ್ರೀಧರ್, ಬಸವರಾಜ್, ಎಚ್.ಬಿ. ರಾಘವೇಂದ್ರ, ಗಲ್ಲಿ ವೆಂಕಟೇಶ್, ಕೆ.ವಿ. ಜಯರಾಮ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.