ಸಾಗರ: ಇಲ್ಲಿನ ನೆಹರೂ ಮೈದಾನದ ಬ್ರಾಸಂ ಸಭಾಭವನದಲ್ಲಿ ಮೂರು ದಿನಗಳ ಕಾಲ ರೋಟರಿ ಕ್ಲಬ್, ಇನ್ನರ್ ವೀಲ್ಹ್ ಕ್ಲಬ್ ಆಫ್ ಸಾಗರ್ ಯೂನಿಕ್, ಸಾಗರ ರೈತ ಉತ್ಪಾದಕರ ಸೌಹಾರ್ದ ಸಹಕಾರಿ ಸಂಘ ಏರ್ಪಡಿಸಿರುವ ಹಲಸು ಮೇಳಕ್ಕೆ ಮೊದಲ ದಿನ ಶುಕ್ರವಾರ ಸಾರ್ವಜನಿಕರಿಂದ ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಸಭಾ ಭವನದ ಹೊರ ಭಾಗದಲ್ಲಿ ಕೆಂಪು ಹಲಸು, ಚಂದ್ರ ಹಲಸು, ಸರ್ವಋತು ಹಲಸು, ಚಂದ್ರ ಬೊಕ್ಕೆ, ಗಮ್‌ಲೆಸ್ ಹಲಸು ಸೇರಿ ವಿವಿಧ ತಳಿಗಳ ಹಲಸಿನ ಗಿಡ ಪ್ರದರ್ಶನ ಮತ್ತು ಮಾರಾಟ ಆಯೋಜಿಸಲಾಗಿದೆ. ಅಲ್ಲದೆ ವಿವಿಧ ಹಣ್ಣು, ಹೂವು, ಅಲಂಕಾರಿಕ ಪುಷ್ಪಗಳ ಗಿಡಗಳ ಪ್ರದರ್ಶನವೂ ಇಲ್ಲಿದೆ.
ಸಭಾ ಭವನದ ಮುಂಭಾಗದಲ್ಲಿ ವಿವಿಧ ತಳಿಗಳ ಹಲಸಿನ ಹಣ್ಣಿನ ಸೊಳೆಗಳ ಮಾರಾಟವಿದ್ದು, ಜನರು ಅದರ ರುಚಿಯನ್ನು ಸವಿಯಲು ಅವಕಾಶ ಕಲ್ಪಿಸಲಾಗಿದೆ. ಭವನದ ಪ್ರವೇಶ ದ್ವಾರದಲ್ಲೇ ಹಲಸಿನ ಹಣ್ಣಿನಿಂದ ತಯಾರಿಸಿದ ಐಸ್ ಕ್ರೀಂ ಮಕ್ಕಳನ್ನು ಆಕರ್ಷಿಸುತ್ತಿದೆ.
ಸಾಗರ, ಹೊಸನಗರ, ಶಿವಮೊಗ್ಗ, ರಿಪ್ಪನ್‌ಪೇಟೆ, ಕುಂದಾಪುರ, ಉಡುಪಿ, ಕಾರ್ಕಳ, ಮಂಗಳೂರು, ತುಮಕೂರು, ಮೈಸೂರು ಸೇರಿ ರಾಜ್ಯದ ವಿವಿಧ ಭಾಗಗಳಿಂದ ಈ ಮೇಳಕ್ಕೆ ಉದ್ಯಮಿಗಳು ಬಂದಿದ್ದಾರೆ.
ಹಲಸಿನ ಬರ್ಫಿ, ದೋಸೆ, ಕಡುಬು, ಇಡ್ಲಿ, ಪತ್ರೊಡೆ, ಕಬಾಬ್, ಬಿರಿಯಾನಿ, ಪೋಡಿ, ಮಿಲ್ಕ್ ಶೇಕ್, ಹೋಳಿಗೆ, ಮುಳುಕ, ಹಪ್ಪಳ, ಚಿಪ್ಸ್, ಕೇಸರಿಬಾತ್, ಉಪ್ಪಿನಕಾಯಿ ಹೀಗೆ ತರಹೇವಾರಿ ತಿನಿಸುಗಳು ಈ ಮೇಳದಲ್ಲಿ ಭೇಟಿ ಕೊಟ್ಟವರ ಬಾಯಲ್ಲಿ ನೀರೂರಿಸುವಂತೆ ಮಾಡಿದೆ.
ಸಭಾ ಭವನದ ಮೊದಲ ಮಹಡಿಯಲ್ಲಿ ಕೈಮಗ್ಗ, ಖಾದಿ ಬಟ್ಟೆಗಳು, ಹರ್ಬಲ್, ಆಯುರ್ವೇದಿಕ್ ಉತ್ಪನ್ನಗಳು, ಕರಕುಶಲ ವಸ್ತುಗಳು, ಪುಸ್ತಕಗಳ ಪ್ರದರ್ಶನ ಹಾಗೂ ಮಾರಾಟವೂ ನಡೆಯುತ್ತಿದೆ.
‘ಹಲಸಿನ ಉತ್ಪನ್ನಗಳ ಮೌಲ್ಯವರ್ಧನೆಗೆ ಒತ್ತು ನೀಡಿ’
‘ಹಲಸಿನ ಉತ್ಪನ್ನಗಳ ಮೌಲ್ಯವರ್ಧನೆಗೆ ಒತ್ತು ನೀಡಿದರೆ ಹಲಸಿನ ಬೆಳೆಗೆ ಬೇಡಿಕೆ ಹೆಚ್ಚುವ ಜೊತೆಗೆ ಹಲಸು ಬೆಳೆಯುವವರ ಸಂಖ್ಯೆ ಹೆಚ್ಚಾಗುತ್ತದೆ’ ಎಂದು ಹಲಸು ಮೇಳವನ್ನು ಉದ್ಘಾಟಿಸಿದ ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು. ‘ಹಲಸಿನಿಂದಲೂ ಇಷ್ಟೊಂದು ವೈವಿಧ್ಯಮಯ ತಿಂಡಿ ತಿನಿಸುಗಳನ್ನು ತಯಾರಿಸಲು ಸಾಧ್ಯ ಎಂಬುದನ್ನು ಈ ಮೇಳ ತೋರಿಸಿಕೊಟ್ಟಿದೆ. ಈ ಮೂಲಕ ಗ್ರಾಮೀಣ ಸಣ್ಣ ಉದ್ಯಮಿಗಳಿಗೆ ಮಾರುಕಟ್ಟೆಯನ್ನೂ ಕಲ್ಪಿಸಿದಂತಾಗಿದೆ’ ಎಂದು ತಿಳಿಸಿದರು. ರೋಟರಿ ಸಂಸ್ಥೆಯ ಗೌತಮ್ ಕೆ.ಎಸ್. ಡಾ.ರಾಜನಂದಿನಿ ಕಾಗೋಡು ಪ್ರಮುಖರಾದ ರಜನೀಶ್ ಹೆಗಡೆ ಸುಧೀರ್ ಶೆಟ್ಟಿ ಫಯಾಜ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.