ಸಾಗರ: ಸಾಗರವನ್ನು ನೂತನ ‘ಮಲೆನಾಡು ಜಿಲ್ಲೆ’ ಎಂದು ಘೋಷಿಸುವಂತೆ ಒತ್ತಾಯಿಸಿ ನಗರದಲ್ಲಿ ಗುರುವಾರ ವಿವಿಧ ರಾಜಕೀಯ ಪಕ್ಷಗಳ, ಸಂಘ– ಸಂಸ್ಥೆಗಳ ಪ್ರಮುಖರು ಸಾಗರ ಜಿಲ್ಲಾ ಹೋರಾಟ ಸಮಿತಿಯ ನೇತೃತ್ವದಲ್ಲಿ ಮೆರವಣಿಗೆ, ಬಹಿರಂಗ ಸಭೆ ನಡೆಸಿದರು.
ಗಾಂಧಿ ಮೈದಾನದಲ್ಲಿ ಆರಂಭಗೊಂಡ ಮೆರವಣಿಗೆಗೆ ಮಾಜಿ ಸಚಿವ ಕಾಗೋಡು ತಿಮ್ಮಪ್ಪ, ಸಿಗಂದೂರು ಕ್ಷೇತ್ರದ ಧರ್ಮದರ್ಶಿ ರಾಮಪ್ಪ ಚಾಲನೆ ನೀಡಿದರು. ನಂತರ ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಯಿತು.
ಬಹಿರಂಗ ಸಭೆಯಲ್ಲಿ ರಂಗಕರ್ಮಿ ಕೆ.ವಿ.ಅಕ್ಷರ ಮಾತನಾಡಿ, ‘ಜನರು ಸರ್ಕಾರವನ್ನು ಹುಡುಕಿಕೊಂಡು ಹೋಗುವುದು ಒಳ್ಳೆಯ ಆಡಳಿತದ ಲಕ್ಷಣವಲ್ಲ. ಸರ್ಕಾರವೇ ಜನರ ಬಳಿಗೆ ಬರುವುದು ಪರಿಣಾಮಕಾರಿ ಆಡಳಿತಕ್ಕೆ ಒಳ್ಳೆಯ ಮಾರ್ಗ. ಸಾಗರದಂತಹ ಚಿಕ್ಕ ಜಿಲ್ಲೆ ಮಾಡುವ ಅಗತ್ಯತೆಯನ್ನು ಸರ್ಕಾರ ಮನಗಾಣಬೇಕು’ ಎಂದರು.
‘ಜಿಲ್ಲಾ ಕೇಂದ್ರಕ್ಕೆ ಒತ್ತಾಯಿಸಿ ಜಾತಿ, ಧರ್ಮಗಳ ಚೌಕಟ್ಟನ್ನು ಮೀರಿ ಇಲ್ಲಿನ ಜನರು ಒಕ್ಕೊರಲಿನಿಂದ ಬೇಡಿಕೆ ಮಂಡಿಸುತ್ತಿದ್ದಾರೆ. ಸಾಗರ ಸೌಹಾರ್ದದ ನೆಲೆವೀಡು ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಲಿಂಗನಮಕ್ಕಿ ಜಲಾಶಯದ ಮೂಲಕ ನಾಡಿಗೆ ‘ಬೆಳಕು’ ಕೊಟ್ಟಿರುವ ಸಾಗರವನ್ನು ಜಿಲ್ಲಾ ಕೇಂದ್ರ ಮಾಡುವ ಮೂಲಕ ಮಲೆನಾಡನ್ನು ಬೆಳಗುವ ಕೆಲಸವನ್ನು ಸರ್ಕಾರ ಮಾಡಬೇಕು’ ಎಂದು ಮುಸ್ಲಿಂ ಧರ್ಮಗುರು ಅಬ್ದುಲ್ ಖಾದರ್ ಸಖಾಫಿ ಒತ್ತಾಯಿಸಿದರು.
‘ಈ ಭಾಗದ ಆರ್ಥಿಕ, ಆರೋಗ್ಯ, ಶಿಕ್ಷಣ, ಪ್ರವಾಸೋದ್ಯಮ ಮೊದಲಾದ ಕ್ಷೇತ್ರಗಳ ಸಮಗ್ರ ಬೆಳವಣಿಗೆ ದೃಷ್ಟಿಯಿಂದ ಸಾಗರ ಜಿಲ್ಲಾ ಕೇಂದ್ರವಾಗಬೇಕು ಎಂಬ ಬೇಡಿಕೆ ಸಮಂಜಸವಾಗಿದೆ. ಜನರ ಭಾವನೆಗಳನ್ನು ಸರ್ಕಾರ ಗೌರವಿಸಬೇಕು’ ಎಂದು ಫಾದರ್ ವಿನುತ್ ಬಾಲುಕುಮಾರ್ ಅಭಿಪ್ರಾಯಪಟ್ಟರು.
‘ಸಾಗರ ಜಿಲ್ಲಾ ಕೇಂದ್ರವಾಗುವ ಎಲ್ಲಾ ಅರ್ಹತೆಯನ್ನು ಹೊಂದಿದೆ. ಶಾಸಕ ಗೋಪಾಲಕೃಷ್ಣ ಬೇಳೂರು ಈ ಬೇಡಿಕೆಗೆ ಬೆಂಬಲ ಸೂಚಿಸಿರುವುದು ಸ್ವಾಗತಾರ್ಹ. ಆದರೆ. ಅವರು ಕೇವಲ ಮುಖ್ಯಮಂತ್ರಿಗಳಿಗೆ ಪತ್ರ ಬರೆದರೆ ಸಾಲದು. ಸಾಗರವನ್ನು ಜಿಲ್ಲಾ ಕೇಂದ್ರ ಮಾಡುವಂತೆ ಖುದ್ದಾಗಿ ಸಿ.ಎಂ ಭೇಟಿಯಾಗಿ ಚರ್ಚಿಸಬೇಕು’ ಎಂದು ಜಿಲ್ಲಾ ಹೋರಾಟ ಸಮಿತಿಯ ಪ್ರಮುಖರಾದ ತೀ.ನ.ಶ್ರೀನಿವಾಸ್ ಒತ್ತಾಯಿಸಿದರು.
ನಗರಸಭೆ ಅಧ್ಯಕ್ಷೆ ಮೈತ್ರಿ ಪಾಟೀಲ್, ಬಿಜೆಪಿಯ ದೇವೇಂದ್ರಪ್ಪ ಯಲಕುಂದ್ಲಿ, ಟಿ.ಡಿ.ಮೇಘರಾಜ್, ಕಾಂಗ್ರೆಸ್ ನ ಕಲಸೆ ಚಂದ್ರಪ್ಪ, ವಕೀಲರ ಸಂಘದ ಅಧ್ಯಕ್ಷ ಎಂ.ಬಿ.ಗಿರೀಶ್ ಗೌಡ, ಶಂಕರ ಮಠದ ಧರ್ಮದರ್ಶಿ ಅಶ್ವಿನಿಕುಮಾರ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಅನಿತಾ ಕುಮಾರಿ, ತುಕಾರಾಂ ಶಿರವಾಳ , ಡಾ.ರಾಜನಂದಿನಿ ಕಾಗೋಡು, ಮಂಜಪ್ಪ ಹಿರೇನೆಲ್ಲೂರು, ಪರಮೇಶ್ವರ ದೂಗೂರು, ಕನ್ನಪ್ಪ ಬೆಳಲಮಕ್ಕಿ ಮಾತನಾಡಿದರು.
ಪ್ರಮುಖರಾದ ಎಂ.ಖಾಸಿಂ, ಮಧುಮಾಲತಿ, ಮಲ್ಲಿಕಾರ್ಜುನ ಹಕ್ರೆ, ರಾಜಶೇಖರ ಗಾಳಿಪುರ, ಕೆ.ಆರ್.ಗಣೇಶ್ ಪ್ರಸಾದ್, ಸವಿತಾ ವಾಸು, ರವಿಕುಗ್ವೆ, ಆರ್.ಶ್ರೀನಿವಾಸ್, ಸುಂದರ್ ಸಿಂಗ್, ಹೊಳಿಯಪ್ಪ ಹಾಜರಿದ್ದರು. ಎಚ್.ಬಿ.ರಾಘವೇಂದ್ರ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.