ಸಾಗರ: ಶಾಲೆಗೆ ದಾಖಲಾದ ನಂತರ 80 ಕಿ.ಮೀ. ದೂರದ ಕುಗ್ರಾಮಕ್ಕೆ ತೆರಳಿದ್ದ ಇಬ್ಬರು ವಿದ್ಯಾರ್ಥಿಗಳನ್ನು ಪತ್ತೆ ಹಚ್ಚಿ ಮರಳಿ ಶಾಲೆಗೆ ಕರೆತರುವಲ್ಲಿ ಇಲ್ಲಿನ ಶಿಕ್ಷಕಿ ಜಯಂತಿ ಎಚ್.ವಿ. ಯಶಸ್ವಿಯಾಗಿದ್ದಾರೆ.
ತಾಲ್ಲೂಕಿನ ಹೊನ್ನೇಸರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಇಬ್ಬರು ವಿದ್ಯಾರ್ಥಿಗಳು ಶಾಲೆಗೆ ದಾಖಲಾಗಿದ್ದರೂ, ತರಗತಿಗೆ ಹಾಜರಾಗಿರಲಿಲ್ಲ. ಗ್ರಾಮದ ಯಾವ ಮಗುವೂ ಶಾಲೆಯಿಂದ ಹೊರಗಿದ್ದು ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಶಿಕ್ಷಣ ಇಲಾಖೆಯ ಸುತ್ತೋಲೆಯ ಹಿನ್ನೆಲೆಯಲ್ಲಿ ಈ ಇಬ್ಬರು ವಿದ್ಯಾರ್ಥಿಗಳು ಎಲ್ಲಿದ್ದಾರೆ ಎಂಬ ಹುಡುಕಾಟ ನಡೆದಿತ್ತು.
ನಂತರ 80 ಕಿ.ಮೀ. ದೂರದಲ್ಲಿರುವ ಕೊಡಚಾದ್ರಿ ಸಮೀಪದ ಕುಂಬಾರಗೊಳಿಗೆ ಗ್ರಾಮದಲ್ಲಿ ಆ ಇಬ್ಬರು ವಿದ್ಯಾರ್ಥಿಗಳು ಇದ್ದಾರೆ ಎಂಬುದು ತಿಳಿದು ಬಂದಿತ್ತು. ಅಲ್ಲಿಗೆ ಸ್ವತಃ ತೆರಳಿದ ಶಿಕ್ಷಕಿ ಜಯಂತಿ ಪೋಷಕರ ಮನವೊಲಿಸಿ ಮಕ್ಕಳನ್ನು ಶಾಲೆಗೆ ಕರೆ ತರುವಲ್ಲಿ ಯಶಸ್ವಿಯಾಗಿದ್ದಾರೆ. ಜಯಂತಿ ಅವರ ಈ ಕಾರ್ಯಕ್ಕೆ ಕ್ಷೇತ್ರ ಶಿಕ್ಷಣಾಧಿಕಾರಿ ಪರಶುರಾಮಪ್ಪ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.